ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು: ಸ್ವಿಮ್ಮಿಂಗ್​​ ಪೂಲ್​​ನಲ್ಲಿ ತೇಲುತ್ತಿತ್ತು ಮೃತದೇಹ

ಕನಕಪುರದಲ್ಲಿ ಗೃಹಿಣಿಯೋರ್ವರ ಶವ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಪತಿ ಆತ್ಮಹತ್ಯೆ ಎಂದರೆ, ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ. ಮಹಿಳೆ ಸಾವಿನ ಸುತ್ತ ಹಲವು ಪ್ರಶ್ನೆಗಳಿದ್ದು, ಪತಿ-ಪತ್ನಿಯರ ನಡುವಿನ ಮನಸ್ತಾಪವೂ ಕಾರಣವಾಗಿರಬಹುದು ಎನ್ನಲಾಗಿದೆ. ಕೋಡಿಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ.

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು: ಸ್ವಿಮ್ಮಿಂಗ್​​ ಪೂಲ್​​ನಲ್ಲಿ ತೇಲುತ್ತಿತ್ತು ಮೃತದೇಹ
ಮೃತ ಗೃಹಿಣಿ ಪ್ರತಿಭಾ
Edited By:

Updated on: Jan 25, 2026 | 5:00 PM

ರಾಮನಗರ, ಜನವರಿ 25: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೋರ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ(32) ಮೃತ ದುರ್ದೈವಿಯಾಗಿದ್ದು, ಮನೆಯ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ನಂಜೇಗೌಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪ್ರತಿಭಾ ಕುಟುಂಬಸ್ಥರು ಆರೋಪಿಸಿದ್ದರೆ, ಅನಾರೋಗ್ಯದ ಹಿನ್ನೆಲೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ನಂಜೇಗೌಡ ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸಿದ್ದ ನಂಜೇಗೌಡ ಮತ್ತು ಪ್ರತಿಭಾ ಹದಿನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ರು. ಇಬ್ಬರಿಗೂ ಮುದ್ದಾದ ಎರಡು ಗಂಡು ಮಕ್ಕಳು ಕೂಡ ಇದ್ದಾರೆ. ಇನ್ನು ನಂಜೇಗೌಡ ಕೋಡಿಗಳ್ಳಿ ಗ್ರಾಮದಲ್ಲಿ ತನ್ನದೇ ಆದ ಸಿಮೆಂಟ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಸಾಕಷ್ಟು ಸಿರಿವಂತ ಸಹ ಹೌದು. ಹೀಗಿರುವಾಗ ಇವತ್ತು ಬೆಳಿಗ್ಗೆ ಮೃತ ಪ್ರತಿಭಾಳ ಅಕ್ಕನ ಮನೆಯ ಬಳಿ ಬಂದು ಹೆಂಡತಿ ರೂಮ್ ಬಾಗಿಲು ತೆಗೆಯುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ತಕ್ಷಣ ಪ್ರತಿಭಾ ಸಹೋದರ ಪರಮೇಶ್, ಮನೆಗೆ ಹೋಗಿ ಮನೆಯನ್ನಲ್ಲ ಚೆಕ್ ಮಾಡಿದ್ದಾನೆ. ಈ ವೇಳೆ ಎಲ್ಲಿಯೂ ಆಕೆ ಕಂಡುಬಂದಿಲ್ಲ. ತಕ್ಷಣ ಮನೆಯ ಆವರಣದಲ್ಲಿ ಇದ್ದ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​

ಅಂದಹಾಗೆ ನಂಜೇಗೌಡಗೆ ಪ್ರತಿಭಾ ಎರಡನೇ ಹೆಂಡತಿ. ಪ್ರಾರಂಭದಲ್ಲಿ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಎರಡನೇ ಪತ್ನಿ ಪ್ರತಿಭಾಗಾಗಿ ಗ್ರಾಮದ ಹೊರವಲಯದಲ್ಲಿ ಸುಂದರವಾದ ಮನೆಯೊಂದನ್ನೂ ನಂಜೇಗೌ ಕಟ್ಟಿಸಿಕೊಟ್ಟಿದ್ದರು. ಆದರೆ ಮೊದಲ ಹೆಂಡತಿ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಈ ನಡುವೆ ನಿನ್ನೆ ರಾತ್ರಿ ಅದ್ಯಾವುದೋ ಕಾರಣಕ್ಕೆ ಮನೆಗೆ ಬಂದಿದ್ದ ತನ್ನ ಕುಟುಂಬಸ್ಥರನ್ನು ಕೂಡ ಪ್ರತಿಭಾ ಮನೆಗೆ ವಾಪಸ್​​ ಕಳುಹಿಸಿದ್ದರು. ಆನಂತರ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಪ್ರತಿಭಾ ಮೃತದೇಹ ಸ್ವಿಮ್ಮಿಂಗ್ ಪೂಲ್​​ನಲ್ಲಿ ಪತ್ತೆಯಾಗಿದೆ.

ಇನ್ನು ಪ್ರತಿಭಾ ಪತಿ ನಂಜೇಗೌಡ ಆಕೆ ಹೊಟ್ಟೆನೋವು ಎನ್ನುತ್ತಿದ್ದಳು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ. ಆದರೆ ಕುಟುಂಬಸ್ಥರು ಮಾತ್ರ ಇದು ಕೊಲೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಪ್ರತಿಭಾ ಸಾವು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.