ರಾಮನಗರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮ ಊರಿಗೆ ಊರೇ ನೀರಿನಲ್ಲಿ ಮುಳುಗುತ್ತಿದ್ದು, ಹೆದ್ದಾರಿಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಈ ರಕ್ಕಸ ಮಳೆಯಲ್ಲಿ ಸಾರಿಗೆ ಬಸ್ಸುಗಳನ್ನು ಚಲಾಯಿಸುವುದು ಚಾಲಕರಿಗೆ ದೊಡ್ಡ ಸವಾಲು. ಆದ್ರೆ ಇಲ್ಲಿ ಇಂತಹ ರಣ ಮಳೆಯಲ್ಲೂ ನಿಗಮದ ಚಾಲನಾ ಸಿಬ್ಬಂದಿ ಮುಳುಗಿದ ಬಸ್ನಿಂದ ಪ್ರಯಾಣಿಕರ ಪ್ರಾಣಾ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.
ಆಗಸ್ಟ್ 29ರಂದು ರಾಮನಗರ ಮೈಸೂರು – ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿತ್ತು. ಈ ವೇಳೆ ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ-ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ನಲ್ಲಿ ಬರುತ್ತಿದ್ದ ಬಸ್ಸು ಮಳೆ ನೀರಿಗೆ ಸಿಲುಕಿ ಮುಳುಗಿತ್ತು. ಸ್ವಲ್ಪ ಮುಂದೆ ಇದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ. ಈ ಸಂದರ್ಭದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸಾರ್ವಜನಿಕರ ಸಹಾಯದೊಂದಿಗೆ ಸುರಕ್ಷಿತವಾಗಿ ರಕ್ಷಿಸಿ, ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದರೂ, ತಮಗೆ ಈಜಲು ಬಾರದಿದ್ದರೂ ಸಹ ಎದೆಗುಂದದೆ ಧೈರ್ಯದಿಂದ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಆ ಸಮಯದಲ್ಲಿ ಏಣಿಯನ್ನು ಹುಡುಕಿ ತಂದು ನಿಗಮದ ಚಾಲನಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಚಾಲಕ ಕಂ ನಿರ್ವಾಹಕ ಲಿಂಗರಾಜು ಮತ್ತು ಚಾಲಕ ಕಂ ನಿರ್ವಾಹಕ ವೆಂಕಟೇಶ ಓರ್ವ ವೃದ್ದ ಮಹಿಳೆ ಸೇರಿ ಕೆಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇವರ ಮಾನವೀಯ ನೆಲೆಯಲ್ಲಿನ ಸೇವಾ ಮನೋಭಾವವು ನಿಜಕ್ಕೂ ಅನನ್ಯ, ಅನುಕರಣೀಯವೆಂದು ಬಣ್ಣಿಸಿ, ಚಾಲನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿ , ಅಭಿನಂದನಾ ಪತ್ರವನ್ನು ನೀಡಿ ಶ್ಲಾಘಿಸಲಾಗಿದೆ. ಲಿಂಗರಾಜು ಮತ್ತು ವೆಂಕಟೇಶ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಈಜು ಬರದ ನಾವಿಬ್ಬರೂ, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಉಳಿಸಲು ಕಷ್ಟಪಟ್ಟಿದ್ದೇವೆ. ಅದೇ ರೀತಿ ಪ್ರಯಾಣಿಕರು ಕೂಡ ನಮ್ಮನ್ನು ಉಳಿಸಿದರು. ಹಾಗೂ ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್‌ಗಳು ಕೂಡ ನೀರು ತುಂಬಿ ಹಾಳಾಯಿತು. ಯಾವ ಅಧಿಕಾರಿಗಳನ್ನು ಸಂರ್ಪಕಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು, ನಮಗೆ ಆ ಸಮಯದಲ್ಲಿ ನಮ್ಮ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಬೇಕೆಂಬ ಉದ್ದೇಶ ಮಾತ್ರ ಇತ್ತು ಎಂದು ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಬಳಿ ಘಟನೆಯ ವಿವರ ನೀಡಿದ್ದಾರೆ. ಆಗ ಅವರು ಚಾಲಕರನ್ನು ಮನತುಂಬಿ ಹಾರೈಸಿ, ತಮ್ಮ ಈ ಉತ್ಕೃಷ್ಟ ಕಾರ್ಯತತ್ಪರತೆ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ. ದೇವರು ತಮಗೆ ಮತ್ತು ತಮ್ಮ ಪರಿವಾರದವರಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಈ ಸಮಯದಲ್ಲಿ ಸಿಬ್ಬಂದಿಗಳ ಮೊಬೈಲ್ ಹಾಳಾಗಿದ್ದಕ್ಕೆ , ಇಬ್ಬರಿಗೂ ಒಂದೊಂದು ಸ್ಮಾರ್ಟ್ ಮೊಬೈಲ್ ಫೋನ್ ಅನ್ನು ನಿಗಮದ ವತಿಯಿಂದ ಉಡುಗೊರೆಯಾಗಿ ನೀಡಿದರು.
Published On - 4:23 pm, Mon, 5 September 22