ರಾಮನಗರ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ (Bengaluru Mysuru expressway) ಮತ್ತೊಂದು ಭೀಕರ ಅಪಘಾತ (Accident) ಸಂಭವಿಸಿದ್ದು, ಕೆಎಸ್ಆರ್ಸಿಟಿ ಬಸ್ ಚಾಲಕ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಬುಧವಾರ ಕೆಎಸ್ಆರ್ಸಿಟಿ ಬಸ್ ಹಾಗೂ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ತಲುಪಿದ್ದು, ಅಲ್ಲಿಂದಲೂ ಹೊರಕ್ಕೆ ಚಲಿಸಿದೆ. ಅದೃಷ್ಟವಶಾತ್, ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಮೈಸೂರಿನಿಂದ ಬೆಂಗಳೂರಿಗೆ ಬರುವ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸುವುದಾಗಿ ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆ ಹೇಳಿತ್ತು. ಎಕ್ಸ್ಪ್ರೆಸ್ ವೇ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಇದನ್ನು ಪರಿಶೀಲಿಸಲು ತಂಡ ರಚನೆ ಮಾಡುತ್ತೇವೆ. ಅದು ನೀಡುವ ವರದಿಯ ಆಧಾರದಲ್ಲಿ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೋಮವಾರ ಹೇಳಿದ್ದರು.
ಇದನ್ನೂ ಓದಿ: Bengaluru-Mysore Expressway: ಅಪಘಾತಕ್ಕೆ ಕಾರಣಗಳ ಕುರಿತು ಎನ್ಹೆಚ್ಎಐಗೆ ವರದಿ ಸಲ್ಲಿಸಿದ 2 ಜಿಲ್ಲಾಡಳಿತ
ಕಳೆದ ಎರಡ್ಮೂರು ತಿಂಗಳಲ್ಲಿ ಈ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ