ಆತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬಾ ಸಂಬಳ ಕೂಡ ಬರುತ್ತಿತ್ತು. ಈ ಮಧ್ಯೆ ತನ್ನ ಗ್ರಾಮದ ಪಕ್ಕದ ಯುವತಿಯನ್ನ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆ ಯುವತಿಯೂ ಅಷ್ಟೇ ಪ್ರೀತಿ ಮಾಡುತ್ತಿದ್ದಳು. ಎರಡು ಕುಟುಂಬದವರು ಮದುವೆ ಮಾಡಲು ಸಹಾ ಒಪ್ಪಿದ್ದರು. ಆದರೆ ಇದಕ್ಕಿದ್ದ ಹಾಗೆ ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನವೊಂದ ಆ ಯುವಕ (Lover boy) ಅದೇ ಯುವತಿಯ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವತಿ, ಕೊನೆ ಗಳಿಗೆಯಲ್ಲಿ ಮದುವೆಯನ್ನ ನಿರಾಕರಿಸಿದ್ದು, ವಿವಾಹಕ್ಕೆ ಯುವತಿ ಮನೆಯವರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ಭಗ್ನಪ್ರೇಮಿಯೊಬ್ಬ ಯುವತಿಯ ಮನೆಯ ಸಮೀಪವೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ಜಿಲ್ಲೆ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ಮೋಹನ್ ಕುಮಾರ್ (29) ಮೃತ ದುರ್ದೈವಿ. ಅಂದಹಾಗೆ ದೊಡ್ಡಸೋಮನಹಳ್ಳಿ ಹಾಗೂ ಹೊಸಪಾಳ್ಯ ಅಕ್ಕಪಕ್ಕದ ಗ್ರಾಮಗಳು. ದೊಡ್ಡಸೋಮನಹಳ್ಳಿ ಗ್ರಾಮದ ಮೋಹನ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪಕ್ಕದ ಗ್ರಾಮವಾದ ಹೊಸಪಾಳ್ಯದ ಕಾವ್ಯಾ ಎಂಬ ಯುವತಿಯನ್ನ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆ ಕೂಡ ಪ್ರೀತಿಸುತ್ತಿದ್ದಳು. ಎರಡು ಮನೆಯವರು ಸಹಾ ಮದುವೆ ಮಾಡಲು ಒಪ್ಪಿಗೆ ಸೂಚಿಸಿದ್ರು. ಈ ಮಧ್ಯೆ ಕಾವ್ಯಾಳ ಕುಟುಂಬಕ್ಕೆ ಕಷ್ಟ ಎಂಬ ಕಾರಣಕ್ಕೆ ಏಳು ಲಕ್ಷ ಹಣವನ್ನ ಸಹಾ ಮೋಹನ್ ಕೊಟ್ಟಿದ್ದನಂತೆ.
Also Read:
ಆದರೆ ಈ ಮಧ್ಯೆ ಮದುವೆಯಾಗಲು ಕಾವ್ಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡೆತ್ ನೋಟ್ ಬರೆದಿಟ್ಟು, ಕತ್ತಲಲ್ಲೆ ವಿಡಿಯೋ ಮಾಡುತ್ತಾ ಮರಕ್ಕೆ ನೇಣು ಬಿಗಿದುಕೊಂಡು ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಜಯಲಕ್ಷಮ್ಮ ಹೇಳಿದ್ದಾರೆ.
ಅಂದಹಾಗೆ ಆತ ಆತ್ಮಹತ್ಯೆ ಮಾಡಿಕೊಂಡಿರೋ ವಿಚಾರ ಮೊದಲಿಗೆ ಕಾವ್ಯ ಕುಟುಂಬಕ್ಕೆ ತಿಳಿದಿದೆ. ಹೀಗಾಗಿ ಕೆಲವೊಂದು ಡೆತ್ ನೋಟ್ ಗಳನ್ನ ಎತ್ತಿಟ್ಟುಕೊಂಡಿದ್ದಾರೆ ಎಂಬುದು ಮೋಹನ್ ಕುಟುಂಬಸ್ಥರ ಆರೋಪ. ಅಲ್ಲದೆ ಮೋಹನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯುವತಿಯರ ಮನೆಯವರೆ ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ್ದಾರೆ ಎಂದು ಕಾವ್ಯಾಳ ಕುಟುಂಬಸ್ಥರ ಮೇಲೆ ಆರೋಪ ಮಾಡುತ್ತಿದ್ದಾರೆ.
ಇನ್ನು ಕಾವ್ಯಾ, ಮೊಹನನನ್ನು ಪ್ರೀತಿ ಮಾಡಲು ಶುರು ಮಾಡಿದ ಮೇಲೆ ಬಹಳಷ್ಟು ಬಾರಿ ಮೋಹನ್ ಮನೆಗೆ ಬಂದಿದ್ದಳಂತೆ. ಆದರೆ ಮತ್ತೊಬ್ಬ ಯುವಕ ಹೆಚ್ಚಿನ ಹಣ ಕೊಟ್ಟು ಮದುವೆಯಾಗಲು ಒಪ್ಪಿದಾಗ… ಮೋಹನನನ್ನು ನಿರಾಕರಿಸಿದ್ದಾಳಂತೆ. ಇನ್ನು ಮೋಹನ್ ಸಹಾ ಸಾಯುವುದಕ್ಕೂ ಮೊದಲು ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಜಯರಾಮು, ಮಾರೇಗೌಡ, ಕಾವ್ಯಾಳ ತಾಯಿ ವರಲಕ್ಷಿ, ರಾಜು ಎಂಬುವವರು ಕಾರಣವೆಂದು ಉಲ್ಲೇಖ ಮಾಡಿದ್ದಾನೆ.
ಈ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವರಲಕ್ಷಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಒಟ್ಟಾರೆ ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾನೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ