Mekedatu Padayatra Updates: ನಿಮ್ಮ ಕೂಗು ಬೊಮ್ಮಾಯಿ, ಮೋದಿಗೆ ಕೇಳಬೇಕು: ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್
ಮೇಕೆದಾಟು ಪಾದಯಾತ್ರೆ: ಕನಕಪುರದಿಂದ ಪುನಾರಂಭವಾದ ಪಾದಯಾತ್ರೆ, ಮಧ್ಯಾಹ್ನ 1 ಗಂಟೆಗೆ ವೀರಭದ್ರಸ್ವಾಮಿ ದೇಗುಲ ಬಳಿ ತಲುಪುತ್ತದೆ. ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಊಟ ಮಾಡಿ ನಂತರ ವಿಶ್ರಾಂತಿ ಪಡೆಯುತ್ತಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಜನವರಿ 9ರಿಂದ ಪಾದಯಾತ್ರೆ ಆರಂಭಿಸಿದೆ. ಮೂರನೇ ದಿನದ ಪಾದಯಾತ್ರೆ ಮುಕ್ತಾಯವಾಗಿದೆ. ಕನಕಪುರದಿಂದ ಪುನಾರಂಭವಾದ ಪಾದಯಾತ್ರೆ, ಮಧ್ಯಾಹ್ನ ವೀರಭದ್ರಸ್ವಾಮಿ ದೇಗುಲ ಬಳಿ ತಲುಪಿದೆ. ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಊಟ ಮಾಡಿ ನಂತರ ವಿಶ್ರಾಂತಿ ಪಡೆಯಲಾಗಿದೆ. ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಿದ ಪಾದಯಾತ್ರೆ, ಇಂದು ರಾತ್ರಿ ಚಿಕ್ಕೇನಹಳ್ಳಿಯಲ್ಲೇ ವಾಸ್ತವ್ಯ ಹೂಡಲಿದೆ. ಪಾದಯಾತ್ರೆಗೂ ಮೊದಲು ವಿಪಕ್ಷ ನಾಯಕ ಸಿದ್ದರಾಮಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಲ್ಲಿ ಸುದ್ದಿಗೋಷಿ ನಡೆಸಿದ್ದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಮತ್ತು ಕೊರೊನಾಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿದ್ದರು. ಮೂರನೇ ದಿನದ ಪಾದಯಾತ್ರೆಯ ಸಂಪೂರ್ಣ ವಿವರಗಳು ಈ ಕೆಳಗೆ ಲಭ್ಯವಿದೆ
LIVE NEWS & UPDATES
-
ಮೂರನೇ ದಿನದ ಪಾದಯಾತ್ರೆ ಮುಕ್ತಾಯ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕೇನಹಳ್ಳಿ ತಲುಪಿದ ಕಾಂಗ್ರೆಸ್ ನಾಯಕರ ಪಾದಯಾತ್ರೆ ಅಲ್ಲೇ ಇಂದು ವಾಸ್ತವ್ಯ ಹೂಡಲಿದೆ. ಆ ಮೂಲಕ ಮೂರನೇ ದಿನದ ಪಾದಯಾತ್ರೆ ಮುಕ್ತಾಯ ಆದಂತಾಗಿದೆ. ನಾಳೆ ಮತ್ತೆ ನಾಲ್ಕನೇ ದಿನದ ಪಾದಯಾತ್ರೆ ಚಿಕ್ಕೇನಹಳ್ಳಿಯಿಂದ ಆರಂಭ ಆಗಲಿದೆ.
-
ನಿಮ್ಮ ಕೂಗು ಬೊಮ್ಮಾಯಿ, ಮೋದಿಗೆ ಕೇಳಬೇಕು
ಕುಡಿಯುವ ನೀರಿಗಾಗಿ ಮಾಡುತ್ತಿರೋ ಹೋರಾಟ ಇದು. ನಿಮ್ಮ ಹೋರಾಟ ಇತಿಹಾಸದ ಪುಟ ಸೇರುತ್ತಿದೆ. ಸರ್ಕಾರ ತಡೆಯುವ ಪ್ರಯತ್ನ ಮಾಡುತ್ತಿದೆ. ನಿಮ್ಮ ಆಶಿರ್ವಾದ ನನಗೂ ಸಿದ್ದರಾಮಯ್ಯನವರಿಗೂ ಇರಲಿ. ನಾನು ಸಿದ್ದರಾಮಯ್ಯ ಕುಳಿತು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಹೋರಾಟ ಇದೆ. ಇಷ್ಟು ದೊಡ್ಡ ಶಕ್ತಿ ತುಂಬುತ್ತಿದ್ದಾರೆ. ನಿಮ್ಮ ಕೂಗು ಬೊಮ್ಮಾಯಿ, ಮೋದಿಗೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮೂರನೇ ದಿನದ ಕಾಂಗ್ರೆಸ್ ಪಾದಯಾತ್ರೆ ಚಿಕ್ಕೇನಹಳ್ಳಿ ತಲುಪಿದೆ. ಗಾಣಾಳು ಗ್ರಾಮದಿಂದ ಹೊರಟು ಚಿಕ್ಕೇನಹಳ್ಳಿ ಗ್ರಾಮಕ್ಕೆ ತಲುಪಿದೆ.
-
ಪಾದಯಾತ್ರೆ ಸೇರಿಕೊಳ್ಳದೇ ಕನಕಪುರದತ್ತ ತೆರಳಿದ ಸಿದ್ದರಾಮಯ್ಯ
ಅರ್ಧಗಂಟೆ ವಿಶ್ರಾಂತಿ ತೆಗೆದುಕೊಂಡು ಸಿದ್ದರಾಮಯ್ಯ ವಾಪಸ್ಸು ಪಾದಯಾತ್ರೆಗೆ ಬಂದಿದ್ದರು. ಚಿಕ್ಕೇನಹಳ್ಳಿಗೆ ಕಾರಿನಲ್ಲಿ ತೆರಳಿ ಮತ್ತೆ ವಾಪಸ್ ಆಗಿದ್ದರು. ತಿಪ್ಪಸಂದ್ರದಲ್ಲಿ ಪಾದಯಾತ್ರೆ ಸೇರಿಕೊಂಡಿದ್ದರು. ಆದರೆ ಮತ್ತೆ, ಪಾದಯಾತ್ರೆ ಸೇರಿಕೊಳ್ಳದೇ ಕನಕಪುರದತ್ತ ತೆರಳಿದ್ದಾರೆ.
ವೈದ್ಯನಾಗಿ ಡಿಕೆ ಶಿವಕುಮಾರ್ ಅವರಿಗೆ ಆರೋಗ್ಯದ ಟಿಪ್ಸ್ ನೀಡ್ತಿರೋದು ಖುಷಿ ಇದೆ
ಒಬ್ಬ ವೈದ್ಯನಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಆರೋಗ್ಯದ ಟಿಪ್ಸ್ ನೀಡ್ತಿರೋದು ಖುಷಿ ಇದೆ. ದೂರ ನಡೆದಾಗ ಸಹಜವಾಗಿ ಕಾಲು ನೋವು ಬರುತ್ತೆ. ಆದ್ರೆ ಅವರು ಆರಾಮಾಗೇ ನಡೆಯುತ್ತಿದ್ದಾರೆ. ಅವರಿಗೆ ಸ್ವಲ್ಪ ಬೆನ್ನು ನೋವಿತ್ತು. ಈಗ ಆರಾಮಾಗಿದ್ದಾರೆ ಎಂದು ಟಿವಿ9ಗೆ ಶಾಸಕ ಡಾ.ರಂಗನಾಥ್ ಹೇಳಿಕೆ ನೀಡಿದ್ದಾರೆ. ಅವತ್ತು ಬಂದಿದ್ದ ಎಡಿಸಿಗೆ ಪಾಸಿಟಿವ್ ಇತ್ತು. ಅಂಥಹವರು ಬೇಕಂತಲೇ ಬಂದು ನಿಯಮಗಳನ್ನ ಅವರೇ ಉಲ್ಲಂಘಿಸಿದ್ದಾರೆ. ಇನ್ನು ಪಾದಯಾತ್ರೆಯಲ್ಲಿ ಕೊವಿಡ್ ನಿಯಮಗಳನ್ನ ಪಾಲಿಸುತ್ತಿದ್ದೇವೆ. ಇದು ನೀರಿಗಾಗಿ ನಡೆಯುತ್ತಿರುವ ಹೋರಾಟ. ಹೋರಾಟ ಯಶಸ್ವಿಯಾಗಲಿದೆ ಎಂದು ಹೇಳಿದ್ದಾರೆ.
ಗಂಡಸ್ತನ ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಬೇಕು: ಸಿದ್ದರಾಮಯ್ಯ
ಕಾರ್ಯಕರ್ತರಿಂದ ಉತ್ಸಹದಿಂದ ನನಗೆ ಉತ್ಸಾಹ ಬಂದಿದೆ. ಗಂಡಸ್ತನ ಹೆಂಗಸ್ತನ ಪ್ರಶ್ನೆ ಅಲ್ಲ. ಗಂಡಸ್ತನ ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಬೇಕು. ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ, ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಅಲ್ಲಿ ಗಂಡಸ್ಥನ ತೋರಿಸಬೇಕು. ಅದನ್ನು ಬಿಟ್ಟು ಎರಡೂವರೆ ವರ್ಷ ಏನು ಮಾಡದೇ ಗಂಡಸ್ಥನದ ಬಗ್ಗೆ ಮಾತನಾಡಿದ್ರೆ ಏನು ಅರ್ಥ. ಇವರು ಹೇಡಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಣಾಳು ಗ್ರಾಮದಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಶಾಸಕರೇ ನಿಮಯಗಳನ್ನ ಉಲ್ಲಂಘನೆ ಮಾಡಿದ್ದಾರೆ. ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ? ವಿರೋಧ ಪಕ್ಷದ ಮೇಲೆ ಅದನ್ನ ಬಳಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ನಾವು ತಯಾರಿ ಇದ್ದೇವೆ ಎಂದು ಕೊರೊನಾ ನಿಯಮದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲೂ ಮೇಕೆದಾಟು ಪಾದಯಾತ್ರೆಗೆ ಬೆಂಬಲ
ಮಂಡ್ಯ: ಮೇಕೆದಾಟು ಪಾದಯಾತ್ರೆಗೆ ಮಂಡ್ಯ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿದೆ. ಜನವರಿ 13 ರಂದು ಮಂಡ್ಯದಿಂದ ಮೇಕೆದಾಟು ಪಾದಯಾತ್ರೆಯಲ್ಲಿ ಸುಮಾರು 10 ಸಾವಿರ ಜನರು ಪಾಲ್ಗೊಳ್ಳಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೇಕೆದಾಟು ಪಾದಯಾತ್ರೆಯಲ್ಲಿ ರಾರಾಜಿಸುತ್ತಿದೆ ಭರ್ಜರಿ ಕಟೌಟ್ಸ್
ಕನಕಪುರ ತಾಲೂಕಿನ ಗಾಣಾಳು ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಅಭಿಮಾನಿಗಳು ಸೇಬಿನ ಹಾರ ಹಾಕಿದ್ದಾರೆ. ಗಾಣಾಳು ಗ್ರಾಮ ತಲುಪಿದ್ದ ಕಾಂಗ್ರೆಸ್ ಪಾದಯಾತ್ರೆ ಇದೀಗ ಮತ್ತೆ ಮುಂದೆ ಸಾಗಿದೆ. ಮೇಕೆದಾಟು ಪಾದಯಾತ್ರೆಯ ಡ್ರೋನ್ ಕ್ಯಾಮರಾ ನೋಟ ಇಲ್ಲಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭರ್ಜರಿ ಭೋಜನ ವ್ಯವಸ್ಥೆ
ಪಾದಯಾತ್ರೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜಿಲೇಬಿ, ಬಿಸಿಬೇಳೆಬಾತ್, ಮೊಸರನ್ನ, ಮುದ್ದೆ, ಕಾಳು ಸಾಂಬಾರ್, ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿದೆ. ಕನಕಪುರ ತಾಲೂಕಿನ ಗಾಣಾಳು ಗ್ರಾಮದಲ್ಲಿ ಸಿದ್ದರಾಮಯ್ಯ ಮುದ್ದೆ ಊಟ ಸವಿದಿದ್ದಾರೆ.
ಮುದ್ದೆ ಊಟ ಸವಿದ ಸಿದ್ದರಾಮಯ್ಯ
ಕಾಂಗ್ರೆಸ್ ಮೂರನೇ ದಿನದ ಪಾದಯಾತ್ರೆ ಗಾಣಾಳು ಗ್ರಾಮಕ್ಕೆ ಸಾಗಿಬಂದಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜಿಲೇಬಿ, ಬಿಸಿಬೇಳೆಬಾತ್, ಮೊಸರನ್ನ, ಮುದ್ದೆ, ಕಾಳು ಸಾಂಬಾರ್, ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿದೆ. ಕನಕಪುರ ತಾಲೂಕಿನ ಗಾಣಾಳು ಗ್ರಾಮದಲ್ಲಿ ಸಿದ್ದರಾಮಯ್ಯ ಮುದ್ದೆ ಊಟ ಸವಿದಿದ್ದಾರೆ.
ಪ್ರಧಾನಿ ಬಳಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಚರ್ಚಿಸಲಿ: ಡಿಕೆ ಸುರೇಶ್ ಸವಾಲು
ಗಂಡಸ್ತನದ ಬಗ್ಗೆ ಕೇಳುವವರು ದೆಹಲಿಯಲ್ಲಿ ತೋರಿಸಲಿ. ಪ್ರಧಾನಿ ಬಳಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಚರ್ಚಿಸಲಿ. ನಮ್ಮ ವಿರುದ್ಧ ಇನ್ನೂ ನೂರು ಪ್ರಕರಣ ದಾಖಲಿಸಲಿ. ಅಶ್ವತ್ಥ್ ನಾರಾಯಣ ಮನೆಗೆ ಹೋಗಬೇಕೆಂದರೆ ಹೋಗುವೆ. ಪೊಲೀಸ್ ಸ್ಟೇಷನ್‌ಗೆ ಬರಬೇಕಾ, ಅರೆಸ್ಟ್ ಮಾಡಿಸಲಿ. ಮಂತ್ರಿಗಿರಿ ಉಳಿಸಿಕೊಳ್ಳಲು ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಯೋಜನೆ ಅನುಷ್ಠಾನ ಮಾಡಿ ಗಂಡಸ್ತನ ತೋರಿಸಲಿ: ಡಿಕೆ ಸುರೇಶ್
ಸಚಿವ ಡಾ.ಅಶ್ವತ್ಥ್ ನಾರಾಯಣರಿಂದ ಸವಾಲು ವಿಚಾರವಾಗಿ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಯೋಜನೆ ಅನುಷ್ಠಾನ ಮಾಡಿ ಗಂಡಸ್ತನ ತೋರಿಸಲಿ. ಬಿಜೆಪಿಯವರು ಗಂಡಸರು ಎಂಬುದನ್ನು ತೋರಿಸಲಿ. ಪಾದಪೂಜೆ ಮಾಡಿ ಕನಕಪುರಕ್ಕೆ ಸ್ವಾಗತಿಸುವೆ ಎಂದಿದ್ದೇನೆ. ಯೋಜನೆ ಅನುಷ್ಠಾನ ಮಾಡಲಿ ಎಂಬುದೇ ನಮ್ಮ ಒತ್ತಾಯ. ನಮ್ಮದು ನೀರಿಗಾಗಿ ನಡಿಗೆ, ರಾಜಕಾರಣಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಖಚಿತ: ಸಿದ್ದರಾಮಯ್ಯ
ರಾಮನಗರದಲ್ಲಷ್ಟೇ ಅಲ್ಲ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಖಚಿತ ಎಂದು ಟಿವಿ9ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯುವಕರ ಹುಮ್ಮಸ್ಸಿನಿಂದ ನನಗೂ ಹುಮ್ಮಸ್ಸು ಬಂದಿದೆ. ಹೋರಾಟ ಅಂದರೆ ನಾನು ಯಾವತ್ತೂ ಯುವಕನೇ. ರೇಣುಕಾಚಾರ್ಯ ಕ್ಷಮೆ ಕೇಳಿದ್ರೆ ಮುಗಿದುಹೋಗಿಬಿಡುತ್ತಾ. ನಮ್ಮ ಹೋರಾಟ ತಡೆಗಟ್ಟೋಕೆ ಏನೇ ಷಡ್ಯಂತ್ರ ಮಾಡಲಿ, ಬೆಂಗಳೂರಿನವರೆಗೂ ಪಾದಯಾತ್ರೆ ಯಶಸ್ವಿಯಾಗಿ ತಲುಪುತ್ತೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೊವಿಡ್ ಹೋದ ಮೇಲೆ ಮೇಕೆದಾಟುನಲ್ಲಿ ಬಿದ್ದು ಒದ್ದಾಡಿ; ಈಶ್ವರಪ್ಪ
ಪ್ರಕರಣ ದಾಖಲಿಸುವುದು ದೊಡ್ಡ ಕೆಲಸವಲ್ಲ. ನಾಯಕರ ಮೇಲೆ ಕೇಸ್ ಹಾಕುವ ಪರಿಸ್ಥಿತಿ ನೋವಾಗಿದೆ ಅಂತ ಶಿವಮೊಗ್ಗದಲ್ಲಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ಧಾರೆ. 30 ಜನರ ಮೇಲೆ ಕೇಸ್ ಹಾಕಿದ್ದು ನನಗೆ ತೃಪ್ತಿ ಇಲ್ಲ. ಆದ್ರೆ ಅವರ ಭಂಡತನಕ್ಕೆ ಬೇರೆ ದಾರಿಯಿಲ್ಲ. ಕೊವಿಡ್ ಹೋದ ಮೇಲೆ ಮೇಕೆದಾಟುನಲ್ಲಿ ಬಿದ್ದು ಒದ್ದಾಡಿ. ಮಕ್ಕಳ ನಡುವೆ ನಿಂತು ಡಿಕೆಶಿ ಪೋಸ್ ಕೊಡುತ್ತಾರೆ. ಡಿಕೆಶಿ ಏನು ಇಂಟರ್‌ನ್ಯಾಷನಲ್ ಹೀರೋನಾ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುತ್ತಿದೆ ಅಂತ ಸಚಿವರು ಅಭಿಪ್ರಾಯಪಟ್ಟರು.
ಸ್ಟಂಟ್ ಮಾಡುವುದನ್ನು ಬಿಡಬೇಕು; ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ
ಮೇಕೆದಾಟು ಯೋಜನೆ ಸಲುವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಶೀತಲ ಸಮರ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ? ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ಜಾರಿಗೆ ಏನಾದರೂ ಪ್ರಯತ್ನ ಮಾಡಿದ್ದಾರಾ? ಕೇಂದ್ರಕ್ಕೆ ಏನಾದರೂ ಪತ್ರ ಬರೆದಿದ್ದಾರಾ? ನಿದ್ರಾವಸ್ಥೆಯಲ್ಲಿ ಇರುವ ಕಾಂಗ್ರೆಸ್ ನ ಪುನಶ್ಚೇತನಕ್ಕೆ ಇದೆ ಸಮಯ ಬೇಕಿತ್ತಾ ಕುಂಭ ಮೇಳ ಮಾಡಿದಾಗ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಶಾಸಕರಾಗಿ ಕಾನೂನು ಮಾಡುವವರಾಗಿ ಈ ರೀತಿಯ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಸ್ಟಂಟ್ ಮಾಡುವುದನ್ನು ಬಿಡಬೇಕು ಅಂತ ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಹೇಳಿದ್ದಾರೆ.
ರೇವಣ್ಣರನ್ನು ಪಾದಯಾತ್ರೆಗೆ ಕರೆದುಕೊಂಡು ಹೋಗಿ ಕೊವಿಡ್ ಅಂಟಿಸಿ ಕಳಿಸಿದ್ದಾರೆ; ಆರಗ ಜ್ಞಾನೇಂದ್ರ
ಎಚ್ ಎಂ ರೇವಣ್ಣನನ್ನು ಪಾದಯಾತ್ರೆಗೆ ಕರೆದುಕೊಂಡು ಹೋಗಿ ಕೊವಿಡ್ ಅಂಟಿಸಿ ಕಳಿಸಿದ್ದಾರೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಇದನ್ನು ನಾವು ಮಾಡಿದ್ದಾ? ಜನರಿಗೆ ಸುಳ್ಳು ಹೇಳ್ತಿದ್ದಾರೆ. ಬೆಂಗಳೂರು ಜನರ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಚರ್ಚೆ ಆಗ್ತಿದೆ. ಡಿಕೆ ಶಿವಕುಮಾರ್ ಬಾಡಿ ಲಾಂಗ್ವೆಜ್ ಬಗ್ಗೆ ನಾನು ಏನೂ ಹೇಳಲ್ಲ. ಅವರ ಬಾಡಿ ಲಾಂಗ್ವೆಜ್ ಬಗ್ಗೆ ಜನರಿಗೇ ಗೊತ್ತಿದೆ. ಬೆಂಗಳೂರು ಜನರ ರಕ್ಷಣೆ ಮಾಡುವ ದೃಷ್ಟಿಯಿಂದ ಸಮಾಲೋಚನೆ ಆಗ್ತಿದೆ ಅಂತ ಹೇಳಿದರು.
ಮೇಕೆದಾಟು ಯೋಜನೆಯಿಂದ ಯಾವುದೇ ಗಳಿಕೆಯಾಗಲ್ಲ; ಆರಗ ಜ್ಞಾನೇಂದ್ರ
ಮೇಕೆದಾಟು ಯೋಜನೆಯಿಂದ ಯಾವುದೇ ಗಳಿಕೆಯಾಗಲ್ಲ. ಕಾಂಗ್ರೆಸ್‌ಗೆ ಗಳಿಕೆಗಿಂದ ಕಳೆದುಕೊಳ್ಳುವುದೇ ಹೆಚ್ಚಾಗಿರುತ್ತದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಿಂಹಾಸನದ ಮೇಲೆ ಕುಳಿತಿದ್ದಾಗ ಏನೂ ಮಾಡಿಲ್ಲ. ಮೇಕೆದಾಟು ಯೋಜನೆಯನ್ನು ಮಾಡುವುದಕ್ಕೆ ಹೋಗಿಲ್ಲ. ಹೀಗಾಗಿ ಅವರು ಮಂಡಿಯೂರಿ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕರು ಜನರ ಕ್ಷಮೆಯಾಚಿಸಬೇಕಾಗಿದೆ ಅಂತ ಹೇಳಿದರು.
ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ; ಗೃಹ ಸಚಿವ ಆರಗ ಜ್ಞಾನೇಂದ್ರ
ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಅಂತ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕಟ್ಟುನಿಟ್ಟಾಗಿ ಕೊವಿಡ್ ನಿಯಮ ಪಾಲಿಸಲು ಸೂಚಿಸಿದ್ದೇವೆ. ತಜ್ಞರ ವರದಿ ಆಧರಿಸಿ ಮುಂದಿನ ನಿರ್ಧಾರ ಮಾಡುತ್ತೇವೆ. ನಿನ್ನೆ ಹೆಚ್ಎಂ ರೇವಣ್ಣ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಇಂದು ಅವರಿಗೂ ಕೊರೊನಾ ಸೋಂಕು ದೃಢವಾಗಿದೆ. ಕೊರೊನಾ ಸೋಂಕು ದಿನೇದಿನೆ ಹೆಚ್ಚಾಗುತ್ತಿದೆ. ನಾನು ಕೂಡ ಕೊವಿಡ್ ಟೆಸ್ಟ್ ಮಾಡಿಸಿದ್ದೇನೆ. ನನ್ನ ಕೊವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ ಅಂತ ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ಯಾವುದೇ ಜವಾಬ್ದಾರಿ ಇಲ್ಲ; ಅಶ್ವತ್ಥ್ ನಾರಾಯಣ
ಕೊವಿಡ್ ನಿಯಮಗಳನ್ನು ಉಲ್ಲಂಘಿಸುವುದು ತಪ್ಪು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹವರಿಗೆಲ್ಲಾ ಬುದ್ಧಿ ಹೇಳುವವರು ಯಾರು? ಕೇವಲ ಡ್ರಾಮಾ ಮಾಡುತ್ತಿದ್ದಾರೆ ಅಂತ ಅಶ್ವತ್ಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆ ಬಗ್ಗೆ ಪ್ರಶ್ನಿಸುವುದಕ್ಕೆ ಬೇರೆ ಅವಕಾಶಗಳಿವೆ. ಸದನದಲ್ಲಿ ಇವರು ಕೇಳಬಹುದಾಗಿತ್ತು. ಸದನದಲ್ಲಿ ಯಾವತ್ತಾದರೂ ಈ ಬಗ್ಗೆ ಮಾತಾಡಿದ್ದಾರಾ? ಯಾವುದೇ ರೀತಿಯ ಪ್ರಯತ್ನವೇ ಮಾಡಲಿಲ್ಲ. ಕಾಂಗ್ರೆಸ್ ನಾಯಕರಿಗೆ ಯಾವುದೇ ಜವಾಬ್ದಾರಿ ಇಲ್ಲ. ಡಿಕೆಶಿ ಎಕ್ಸ್‌ಪರ್ಟ್, ಅವರ ಮುಂದೆ ಯಾರಿದ್ದಾರೆ. ಗೋಲಿ ಹೊಡೆಯೋದರಲ್ಲಿ ಅವರು ಎಕ್ಸ್‌ಪರ್ಟ್ ಅಂತ ಸಚಿವರು ಹೇಳಿದರು.
ಯೋಜನೆ ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ; ಡಾ.ಅಶ್ವತ್ಥ್
7 ಬಾರಿ ಡಿಕೆ ಶಿವಕುಮಾರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಅವಧಿಯಲ್ಲಿ ಯಾವ ಕೆಲಸ ಮಾಡಿದ್ದಾರೆಂದು ಪ್ರಶ್ನಿಸಿದ ಡಾ.ಅಶ್ವತ್ಥ್, ಕ್ಷೇತ್ರದ ಜನರು ಡಿಕೆ ಶಿವಕುಮಾರ್‌ರನ್ನು ಕೇಳಬೇಕು. ಡಿಕೆ ಸುರೇಶ್ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರೇನು ಕೆಲಸ ಮಾಡಿದ್ದಾರೆಂದು ಜನರೇ ಕೇಳಬೇಕು. ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಆಗುವುದಿಲ್ಲ. ಯೋಜನೆ ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಎಂದೆಂದಿಗೂ ಅದು ಸಾಧ್ಯವೇ ಇಲ್ಲ. ಮೇಕೆದಾಟು ಯೋಜನೆ ಆಗೋದಾದರೆ ಬಿಜೆಪಿಯಿಂದಲೇ. ಯೋಜನೆ ಮಾಡುವುದು ಕೇವಲ ಭಾರತೀಯ ಜನತಾ ಪಾರ್ಟಿ. ನಮಗೆ ಗಂಡಸ್ತನ ಇದೆ ಅದಕ್ಕೆ ಯೋಜನೆ ಜಾರಿ ಮಾಡ್ತೇವೆ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ. ಪದೇಪದೆ ಗಂಡಸ್ತನ ಇದೆ ಅಂತೀರ ಮಾಡಿ ತೋರಿಸಿ. ಬಿಜೆಪಿ ಅಧಿಕಾರದಲ್ಲಿದೆ ಎಂದು ಪಾದಯಾತ್ರೆ ಮಾಡಬೇಡಿ. ಕಾವೇರಿ ಜಲಾನಯನದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸವನ್ನು ಮಾಡೇ ಇಲ್ಲ. ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಅಂತ ಹೇಳದರು.
ಬಿಜೆಪಿ ಅನುಷ್ಠಾನ ಮಾಡುತ್ತೆಂಬ ಭಯ ಕಾಂಗ್ರೆಸ್‌ಗೆ ಇದೆ; ಸಚಿವ ಡಾ ಅಶ್ವತ್ಥ್ ನಾರಾಯಣ
ಮೇಕೆದಾಟು ಯೋಜನೆಯನ್ನು ಬಿಜೆಪಿ ಅನುಷ್ಠಾನ ಮಾಡುತ್ತೆಂಬ ಭಯ ಕಾಂಗ್ರೆಸ್‌ಗೆ ಇದೆ. ಅದನ್ನು ತಡೆಯಲು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಪ್ರಕರಣ ಕೋರ್ಟ್‌ನಲ್ಲಿದ್ದಾಗ ರಾಜಕೀಯ ಮಾಡಬಾರದು. ರಾಜಕೀಯ ಮಾಡ್ತಾ ಹೋದರೆ ಮುಂದುವರಿಯುತ್ತಾ ಹೋಗುತ್ತೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿರುವುದೇ ಕಾಂಗ್ರೆಸ್ ಸಾಧನೆ ಅಂತ ರಾಮನಗರದಲ್ಲಿ ಸಚಿವ ಡಾ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆಗೆ ಸಿಎಂ ಎಲ್ಲ ಪ್ರಯತ್ನ ಮಾಡ್ತಿದ್ದಾರೆ; ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ
ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವತ್ಥ್ ನಾರಾಯಣ, ಮೇಕೆದಾಟು ಯೋಜನೆಗೆ ಸಿಎಂ ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಕೂಡ ಚರ್ಚಿಸಿದ್ದಾರೆ. ಕೋರ್ಟ್‌ನಲ್ಲಿ ಸಮರ್ಥವಾಗಿ ಎದುರಿಸಲು ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಡಿಪಿಆರ್ ಮಾಡಲು ಎಷ್ಟು ವರ್ಷ ತೆಗೆದುಕೊಂಡ್ರು? 5 ವರ್ಷದ ಅವಧಿಯಲ್ಲಿ ಒಂದು ಡಿಪಿಆರ್ ಮಾಡಲು ಆಗಿಲ್ಲ. ಗೆಜೆಟ್ ಮಾಡುವುದಕ್ಕೆ 6 ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಇವರ ಅವಧಿಯಲ್ಲಿ ಕೆಲಸ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಕಾಂಗ್ರೆಸ್‌ನವರಿ ಜನಪರ ಕಾಳಜಿ ಇಲ್ಲ, ಜವಾಬ್ದಾರಿಯೂ ಇಲ್ಲ. 2016ರಿಂದ 7 ನೀರಾವರಿ ಯೋಜನೆಗಳು ನಡೆಯುತ್ತಿದೆ. 2018ಕ್ಕೆ ಕಾಮಗಾರಿ ಮುಗಿಯಬೇಕಾಗಿತ್ತು ಆದರೆ ಮಾಡಿಲ್ಲ. ನಾವು 2 ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಇವರಿಗೆ ಜನರ ಬಗ್ಗೆ ಯಾವುದೇ ಬದ್ಧತೆಯೇ ಇಲ್ಲ. ನಾಯಕತ್ವಕ್ಕಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಹೀಗಾಗಿ ರಾಜ್ಯದ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇವರ ಸ್ವಾರ್ಥಕ್ಕಾಗಿ ಸುಳ್ಳಿನ, ಪಶ್ಚಾತ್ತಾಪದ ಯಾತ್ರೆ ನಡೆಸುತ್ತಿದ್ದಾರೆ. 7 ಬಾರಿ ಶಾಸಕರಾಗಿದ್ದರು ಯಾವ ರೀತಿ ಕೆಲಸ ಮಾಡಬೇಕು. ಶಾಸಕರಾದ ಕೂಡಲೇ ಅವರು ಸಚಿವರಾಗುತ್ತಾರೆ. ಅಂತಹವರು ಯಾವ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ ಇವರು ಮಾಡಿದ್ದು ಸಂಪನ್ಮೂಲ ಲೂಟಿ ಅಷ್ಟೇ. ಇವರು ಯಾವ ಜನಪರ ಕೆಲಸ ಮಾಡಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಚಿವ ಅಶ್ವತ್ಥ್ ಪ್ರಶ್ನೆ ಹಾಕಿದ್ದಾರೆ.
ಕಾನೂನು ಉಲ್ಲಂಘಿಸುವುದು ನಾಚಿಕೆಗೇಡಿತನ; ಅಶ್ವತ್ಥ್ ಕಿಡಿ
ಜನರ ಮಧ್ಯೆ ಇದ್ದು ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತಿಯಲ್ಲೇ ಅವರ ವಿರುದ್ಧ ಕ್ರಮ ಆಗುತ್ತೆ. ಕಾನೂನು ಉಲ್ಲಂಘಿಸುವುದು ನಾಚಿಕೆಗೇಡಿತನ ಅಂತ ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶ್ವತ್ಥ್ ನಾರಾಯಣ, ಈಗ ಕಾಂಗ್ರೆಸ್‌ನವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಮುಂದೇ ಏನೇನು ಮಾಡುತ್ತೇವೆಂದು ಕಾದು ನೋಡಿ. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು.
ಡಿಕೆಶಿ ಮಾಡ್ತಿರುವುದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ; ರವಿಕುಮಾರ್ ವಾಗ್ದಾಳಿ
ಡಿಕೆ ಶಿ ಮಾಡ್ತಿರುವುದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ ಅಂತ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪಾದಯಾತ್ರೆ ಮಾಡುವ ಬೇಡಿಕೆ ಆದ್ರು ಏನು ? ಮೇಕೆದಾಟು ಯೋಜನೆಯನ್ನು ಡಿಪಿಆರ್ ಮಾಡಿ ಎನ್ನುವುದು. ರಾಜ್ಯ ಸರ್ಕಾರ ಈಗಾಗಲೇ ಡಿಪಿಆರ್ ಮಾಡಿ ದೆಹಲಿಗೆ ಕಳುಹಿಸಿದೆ. ಡಿಕೆಶಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ತಾಕತ್ತಿದ್ರೆ ತಮಿಳುನಾಡು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಿ. ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ತಡೆಯಾಜ್ಞೆ ತಂದಿದ್ದಾರೆ. ಇಲ್ಲಿ ಪಾದಯಾತ್ರೆ ಮಾಡುವುದರ ಬದಲು ಸ್ಟಾಲಿನ್ ಮನೆ ಮುಂದೆ ಧರಣಿ ಮಾಡಿ. ಡಿಕೆ ಶಿವಕುಮಾರ್ ಭೇಟಿಯಾಗಿದ್ದ ಅಧಿಕಾರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಡಿಕೆಶಿ ಮೊದಲು ಕಪವಿಡ್ ಟೆಸ್ಟ್ ಮಾಡಿಸಿಕೊಳ್ಳಲಿ. ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳದಿದ್ದರೆ ಡಿಕೆಶಿ ಬೇಜವಾಬ್ದಾರಿ ಕೆಪಿಸಿಸಿ ಅಧ್ಯಕ್ಷ ಎನ್ನಬೇಕು ಎಂದು ವಾಗ್ದಾಳಿ ನಡೆಸಿದರು.
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಚ್ಎಮ್ ರೇವಣ್ಣಗೆ ಕೊವಿಡ್
ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಚ್ಎಮ್ ರೇವಣ್ಣಗೆ ಕೊವಿಡ್ ಸೋಂಕು ತಗುಲಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಚ್ಎಮ್ ರೇವಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಾಂಗ್ರೆಸ್ ನಾಯಕರ ಮೇಲೆ ಹೂವಿನ ಸುರಿಮಳೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹೂವು ಹಾಕಿದರು.
ಪಾದಯಾತ್ರೆ ಯಲ್ಲಿ ಹೆಜ್ಜೆಹಾಕಲಿರುವ ಜೊಡೆತ್ತು
ಪಾದಯಾತ್ರೆಯಲ್ಲಿ ಜೊಡೆತ್ತು ಹೆಜ್ಜೆಹಾಕಲಿವೆ. ಕನಕಪುರದಿಂದ ಚಿಕ್ಕೇನಹಳ್ಳಿವರೆಗೆ ಸ್ಥಳಿಯ ಕಾಂಗ್ರೆಸ್ ನಾಯಕ ಮಲ್ಲೇಶ್ ಎತ್ತುಗಳು ಹೆಜ್ಜೆ ಹಾಕಲಿವೆ.
ತೆರದ ವಾಹನದಲ್ಲಿ ಸಿದ್ದು, ಡಿಕೆ ಯಾತ್ರೆ
ಕಾಂಗ್ರೆಸ್ ನಾಯಕರು ಇಂದು ಕನಕಪುರ ಗಡಿ ಮುಗಿಯುವ ವರೆಗೆ ವಾಹನದಲ್ಲೇ ಸಾಗಿದ್ದಾರೆ. ತೆರದ ವಾಹನದಲ್ಲಿ ಇಬ್ಬತು ಸಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ 41 ಜನರ ವಿರುದ್ಧ FIR ದಾಖಲು
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ 2ನೇ ಎಫ್‌ಐಆರ್ ದಾಖಲಾಗಿದೆ. ಕನಕಪುರ ತಹಶೀಲ್ದಾರ್ ವಿಶ್ವನಾಥ್ ದೂರು ಆಧರಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ 41 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ2 ಡಿ.ಕೆ.ಸುರೇಶ್, ಎ3 ಕೃಷ್ಣ ಭೈರೇಗೌಡ, ಎ4 ಆಂಜನೇಯ, ಎ5 ನಾರಾಯಣಸ್ವಾಮಿ, ಎ6 ಮೋಟಮ್ಮ, ಎ7 ಪಿ.ಟಿ.ಪರಮೇಶ್ವರ್ ನಾಯ್ಕ್, ಎ8 ಆರ್.ಧ್ರುವನಾರಾಯಣ, ಎ9 ಆರ್.ನರೇಂದ್ರ, ಎ10 ಸಿ.ಪುಟ್ಟರಂಗಶೆಟ್ಟಿ, ಎ11 ವೀಣಾ ಅಚ್ಚಪ್ಪ, ಎ12 ಅಂಜಲಿ ನಿಂಬಾಳ್ಕರ್, ಎ13 ಲಕ್ಷ್ಮೀ ಹೆಬ್ಬಾಳ್ಕರ್, ಎ14 ಕೀರ್ತಿರಾಜ್, ಎ15 ಬಿ.ವಿ.ಶ್ರೀನಿವಾಸ್, ಎ16 ಶಿವಣ್ಣ, ಎ17 ಶಿವರಾಜ ತಂಗಡಗಿ, ಎ18 ಮಧು ಬಂಗಾರಪ್ಪ, ಎ19 ಐವನ್ ಡಿಸೋಜಾ, ಎ20 ಕುಸುಮಾ, ಎ21 ಶರತ್ ಬಚ್ಚೇಗೌಡ, ಎ22 ಪ್ರಿಯಾಕೃಷ್ಣ, ಎ23 ಸಲೀಂ ಅಹ್ಮದ್, ಎ24 ಪದ್ಮಾವತಿ, ಎ25 ರಘುನಂದನ್, ಎ26 ಕೆಂಪರಾಜ್, ಎ27 ವಿನಯ್ ಕುಲಕರ್ಣಿ, ಎ28 ಎಂ.ಬಿ.ಪಾಟೀಲ್, ಎ29 ಡಾ.ರಂಗನಾಥ್, ಎ30 ಉಮಾಶ್ರೀ, ಎ31 ಪ್ರಿಯಾಂಕ್ ಖರ್ಗೆ, ಎ32 ಈಶ್ವರ ಖಂಡ್ರೆ, ಎ33 ಎಸ್.ರವಿ, ಎ34 ನಲಪಾಡ್ ಹ್ಯಾರಿಸ್, ಎ35 ಟಿ.ಬಿ.ಜಯಚಂದ್ರ, ಎ36 ಬಿ.ಕೆ.ಹರಿಪ್ರಸಾದ್, ಎ37 ಕೃಷ್ಣಮೂರ್ತಿ, ಎ38 ವಿಜಯ್ ದೇವ್, ಎ39 ಸತೀಶ್ ಜಾರಕಿಹೊಳಿ, ಎ40 ರಿಜ್ವಾನ್ ಅರ್ಷದ್, ಎ41 ಇತರೆ ಎಂದು ಪ್ರಕರಣ ದಾಖಲಾಗಿದೆ.
ಪಾದಯಾತ್ರೆಯಲ್ಲಿ ಕೊಡವ ನೃತ್ಯ
ಪಾದಯಾತ್ರೆಯಲ್ಲಿ ಕೊಡಗು ಜಿಲ್ಲಾ ಕಾರ್ಯಕರ್ತರು ಕೊಡವ ನೃತ್ಯ ಮಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಮತ್ತೊಂದು FIR ದಾಖಲು
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ 2ನೇ ಎಫ್‌ಐಆರ್ ದಾಖಲಾಗಿದೆ. ಕನಕಪುರ ತಹಶೀಲ್ದಾರ್ ವಿಶ್ವನಾಥ್ ದೂರು ಆಧರಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ 41 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೂರನೇ ದಿನದ ಪಾದಯಾತ್ರೆ ಆರಂಭ
ಮೂರನೇ ದಿನದ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.
ರಾಜ್ಯದ ಜನರ ಪ್ರಾಣ ಉಳಿಯಬೇಕು, ಎರಡನೇ ಮಾತಿಲ್ಲ: ಸಿದ್ದು ಹೇಳಿಕೆ
ಪಾದಯಾತ್ರೆ ಮೊದಲು ನಡೆಸಿದ ಸುದ್ದಿಗೋಷ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಜನರ ಪ್ರಾಣ ಉಳಿಯಬೇಕು, ಎರಡನೇ ಮಾತಿಲ್ಲ ಎಂದು ಹೇಳಿದ್ದಾರೆ.
ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ; ಸಿದ್ದರಾಮಯ್ಯ
2ನೇ ಅಲೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಒದಗಿಸಲು ಆಗಿಲ್ಲ. ಲಸಿಕೆ ಕೊಡಲು ಆಗಿಲ್ಲ, ಐಸಿಯು ಬೆಡ್‌ಗಳನ್ನು ಒದಗಿಸಿಲ್ಲ. ಬಿಜೆಪಿ ಬೇಜವಾಬ್ದಾರಿಯಿಂದ ನೂರಾರು ಜನರು ಮೃತಪಟ್ಟರು ಅಂತ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಆಕ್ಸಿಜನ್ ಸಿಗದೆ ಯಾರೂ ಸತ್ತಿಲ್ಲ ಎಂದು ಸಂಸತ್‌ನಲ್ಲಿ ಹೇಳಿದ್ರು. ಕೇಂದ್ರ ಸಚಿವರೊಬ್ಬರು ಈ ರೀತಿಯಾಗಿ ಸದನದಲ್ಲಿ ಹೇಳುತ್ತಾರೆ. ಇವರು ಬೇಜವಾಬ್ದಾರಿತನದಿಂದ ಹೆಚ್ಚು ಸಾವುಗಳು ಆಯಿತು. ಇವರು ನಮ್ಮ ಡಿಕೆಶಿಗೆ ಟೆಸ್ಟ್ ಮಾಡಿಸುವುದಕ್ಕೆ ಬರುತ್ತಾರೆ. ಡಿಕೆಶಿಗೆ ಪಾಸಿಟಿವ್ ಮಾಡಿಸಬೇಕೆಂದು ಪ್ರಯತ್ನ ಮಾಡ್ತಿದ್ದಾರೆ. ಇವರು ಏನೇ ಪ್ರಯತ್ನ ಮಾಡಿದರೂ ಅದ್ಯಾವುದೂ ಆಗಲ್ಲ. ಶತಪ್ರಯತ್ನ ಮಾಡಿದರೂ ನಮ್ಮ ಪಾದಯಾತ್ರೆ ತಡೆಯಲು ಆಗಲ್ಲ. ನಮ್ಮ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆಯಾಗಬಾರದು. ಹೀಗಾಗಿ ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಅಂತ ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ನಾನು ಮಾಡಿದ ಬಳ್ಳಾರಿ ಯಾತ್ರೆಯಿಂದ ಭಯ ಶುರುವಾಗಿದೆ. ಆಗ ಆದಂತೆ ಮತ್ತೆ ಆಗುತ್ತೆ ಎಂಬ ಭಯ ಸಿಎಂಗೆ ಇದೆ. ಹೀಗಾಗಿ ನಮ್ಮ ಪಾದಯಾತ್ರೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಆದರೆ ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ್ದರಲ್ಲಾ. ಆಗ ಇವರು ರೈತರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ನಾವು ಹೋರಾಟ ಮಾಡ್ತಿದ್ದೇವೆ. ಹೋರಾಟಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಈಗಾಗಲೇ ಇವರು ನಮ್ಮ ಪೊಲಿಟಿಕಲ್ ಗಿಮಿಕ್ ಅನ್ನುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ಕಿಡಿ
‘ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಕಾರಣ’ ಎಂದು ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂತಹ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡಬೇಡಿ. ನಾವು ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರಿಗೆ 1 ಲಕ್ಷ ಮಾಸ್ಕ್‌ಗಳನ್ನು ನೀಡಿದ್ದೇವೆ. ಪ್ರತಿನಿತ್ಯ ಸ್ಯಾನಿಟೈಸ್ ಮಾಡಿಕೊಂಡು ಪಾದಯಾತ್ರೆ ಮಾಡ್ತಿದ್ದೇವೆ. ಲಾಕ್‌ಡೌನ್ ಮಾಡಿದರೆ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಲಾಕ್‌ಡೌನ್ ಮಾಡಿದರೆ ದುಡಿಯುವ ವರ್ಗಕ್ಕೆ ಸಹಾಯ ಮಾಡಿ. ಪ್ರತಿಯೊಬ್ಬರಿಗೆ 10 ಸಾವಿರ ರೂಪಾಯಿನ್ನು ನೀಡಬೇಕು. ಅವರು ಬದುಕುವುದಕ್ಕೆ ಒಂದು ದಾರಿಯನ್ನು ಮಾಡಿಕೊಡಬೇಕು. ಈ ಹಿಂದೆ ಘೋಷಿಸಿದ್ದ ಪರಿಹಾರವನ್ನು ಈವರೆಗೂ ಕೊಟ್ಟಿಲ್ಲ. ರೈತರು ಸೇರಿದಂತೆ ಯಾರಿಗೂ ಯಾವುದೇ ಪರಿಹಾರವನ್ನು ನೀಡಿಲ್ಲ. ನಿಮ್ಮ ಬೇಜವಾಬ್ದಾರಿತನದಿಂದ ಬಹಳಷ್ಟು ಜನರು ಸತ್ತು ಹೋದರು ಅಂತ ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತಮಿಳುನಾಡಿನಲ್ಲಿ ಬಿಜೆಪಿ ಮತ ಹೆಚ್ಚಿಸಿಕೊಳ್ಳಲು ನೋಡುತ್ತಿದೆ; ಸಿದ್ದರಾಮಯ್ಯ
ತಮಿಳುನಾಡಿನಲ್ಲಿ ಬಿಜೆಪಿ ಮತ ಹೆಚ್ಚಿಸಿಕೊಳ್ಳಲು ನೋಡುತ್ತಿದೆ. ಹೀಗಾಗಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನರಿಗೆ ಮೋಸ ಆಗಲು ನಾವು ಬಿಡಲ್ಲ ಅಂತ ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜನರಿಗಾಗಿ ನಾವು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ನಮಗೆ ಇಲ್ಲ. ಹೆಚ್ಚು ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಬಿಜೆಪಿ. ರೋಗವನ್ನು ಹೆಚ್ಚು ಹಬ್ಬಿಸಿರುವುದು ಬಿಜೆಪಿ ನಾಯಕರೇ ಅಂತ ಹೇಳಿದ್ದಾರೆ.
ಹೆಗಲ ಮೇಲೆ ಕುಳಿತುಕೊಂಡು ಹೋಗಿದ್ದಾನಲ್ಲಪ್ಪಾ?- ಸಿದ್ದರಾಮಯ್ಯ
ಹೆಗಲ ಮೇಲೆ ಕುಳಿತುಕೊಂಡು ಹೋಗಿದ್ದಾನಲ್ಲಪ್ಪಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಿಮ್ಮ ರೇಣುಕಾಚಾರ್ಯ ವಿರುದ್ಧ ಏನು ಕೇಸ್ ಹಾಕಿದ್ದೀರಿ. ಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆಗ ಕೊವಿಡ್ ನಿಯಮಗಳು ಉಲ್ಲಂಘನೆ ಆಗಿಲ್ಲವೇ? ಗುತ್ತೇದಾರ್ ನೂರಾರು ಜನರನ್ನು ಸೇರಿಸಿ ಧರಣಿ ಮಾಡಿದ್ರು. ಕೇಂದ್ರ ಸಚಿವೆ ಶೋಭಾ ಸಹ ನೂರಾರು ಜನರನ್ನು ಸೇರಿಸಿದ್ರು. ಇವರೆಲ್ಲರ ಮೇಲೆ ಕೇಸ್ ಹಾಕಿದ್ದೀರೇನಪ್ಪಾಅಂತ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.
ಇಂತಹ ಕೇಸ್‌ಗಳಿಗೆ ಹೆದರುವುದಿಲ್ಲ; ಸಿದ್ದರಾಮಯ್ಯ ಹೇಳಿಕೆ
ಕೇಂದ್ರ, ರಾಜ್ಯ ಎರಡೂ ಕಡೆಯೂ ನಿಮ್ಮ ಸರ್ಕಾರವಿದೆ. ನೀವು ಏಕೆ ಮೇಕೆದಾಟು ಯೋಜನೆಯನ್ನು ಮಾಡಿಲ್ಲ? ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎರಡೂವರೆ ವರ್ಷ ವಿಳಂಬ ಮಾಡಿದ್ದು ಏಕೆ? ರಾಜ್ಯದ ಜನರು 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ನೀವೇನು ಮಾಡಿದ್ದೀರಿ. ಯೋಜನೆಯಿಂದ ಎರಡೂವರೆ ಕೋಟಿ ಜನತೆಗೆ ಅನುಕೂಲ ಆಗುತ್ತದೆ. ತಮಿಳುನಾಡು, ಕರ್ನಾಟಕಕ್ಕೂ ಯೋಜನೆಯಿಂದ ಅನುಕೂಲವಾಗುತ್ತದೆ. ಕಾನೂನು ತೊಡಕು ಕೂಡ ಇಲ್ಲ. ತಮಿಳುನಾಡು ಪರವಾಗಿ ಏನೂ ಇಲ್ಲ. ಆದರೂ ಯೋಜನೆ ಮಾಡುವುದಕ್ಕೆ ತಡವೇಕೆಂದು ಪ್ರಶ್ನಿಸಿದರು. ಬೆಂಗಳೂರಿನ ಶೇ.30ರಷ್ಟು ಜನರಿಗೆ ಇನ್ನೂ ನೀರು ಕೊಟ್ಟಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೊರೊನಾ ಕಾರಣ ಹೇಳುತ್ತಾರೆ. ಕಾಂಗ್ರೆಸ್‌ನ 30 ಜನರ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ನಾವು ಇಂತಹ ಕೇಸ್‌ಗಳಿಗೆ ಹೆದರುವುದಿಲ್ಲ. ನಾವು ಹೆದರಿದ್ದೇವೆಂದು ತಿಳಿದರೆ ನೀವು ಮೂರ್ಖರಾಗುತ್ತೀರಿ ಅಂತ ಹೇಳಿದರು.
ಮೇಕೆದಾಟು ಯೋಜನೆಗೆ ನಿಮ್ಮ ಕೊಡುಗೆ ಏನಪ್ಪಾ? ಗೋವಿಂದ ಕಾರಜೋಳಗೆ ಸಿದ್ದರಾಮಯ್ಯ ಪ್ರಶ್ನೆ
ಅನಾರೋಗ್ಯ ಹಿನ್ನೆಲೆ ನಿನ್ನೆ ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದಿನಿಂದ ನಾನು ಪಾದಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಮೇಕೆದಾಟು ಪಾದಯಾತ್ರೆ 2 ದಿನದಿಂದ ಯಶಸ್ವಿಯಾಗಿ ನಡೆದಿದೆ. ಮೇಕೆದಾಟು ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತೆ. ರೈತರು, ಬೆಂಗಳೂರು ಜನತೆಗೆ ಹೆಚ್ಚು ಅನುಕೂಲವಾಗುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಆರಂಭ ಮಾಡಿದ ಯೋಜನೆಯಾಗಿದೆ. ಕಾರಜೋಳ ಪ್ರತಿದಿನ ವಿಳಂಬ ಮಾಡಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ವಿಳಂಬ ಮಾಡಿತು ಎಂದು ಕಾರಜೋಳ ಹೇಳುತ್ತಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಈ ರೀತಿಯಾಗಿ ಹೇಳುತ್ತಿದ್ದಾರೆ. ಕಾವೇರಿ ವಿವಾದ ಹಿನ್ನೆಲೆ ಯೋಜನೆ ಆರಂಭಿಸಲು ಆಗಿರಲಿಲ್ಲ. ನಮಗಿಂತ ಮುಂಚೆ ಬಿಜೆಪಿಯವರು ಅಧಿಕಾರದಲ್ಲಿ ಇದ್ದರು. ಆಗ ಬಿಜೆಪಿಗೆ ಬದ್ಧತೆ ಇದ್ದಿದ್ದರೆ ಯೋಜನೆ ಮಾಡಬೇಕಾಗಿತ್ತು. ನಾವು ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಮಾಡಿದೆವು. ಡಿಪಿಆರ್ ತಯಾರು ಮಾಡಿದವರು ನಾವು. ಡಿಪಿಆರ್ ಸಿಡಬ್ಲ್ಯುಸಿಗೆ ಸಲ್ಲಿಕೆ ಮಾಡಿದವರು ಕೂಡ ನಾವು. ನಾವು ಇಷ್ಟೆಲ್ಲಾ ಮಾಡಿದ್ದೇವೆ, ಬಿಜೆಪಿಯವರು ಏನು ಮಾಡಿದರು? ಅಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭೂಮಿಯ ಬೆಲೆ ಹೆಚ್ಚಾದ ಹಿನ್ನೆಲೆ ಹೊಸ ಡಿಪಿಆರ್ ಮಾಡಿದರು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಡಿಕೆಶಿ ಡಿಪಿಆರ್ ಮಾಡಿದ್ದರು. ನೀವೇನು ಮಾಡಿದ್ದೀರಿ ಮಿಸ್ಟರ್ ಗೋವಿಂದ ಕಾರಜೋಳ? ಮೇಕೆದಾಟು ಯೋಜನೆಗೆ ನಿಮ್ಮ ಕೊಡುಗೆ ಏನಪ್ಪಾ? ಅಂತ ಸಿದ್ದರಾಮಯ್ಯ ಸಚಿವ ಗೋವಿಂದ ಕಾರಜೋಳಗೆ ಪ್ರಶ್ನಿಸಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನೀರು ಬೇಕು; ಸಿದ್ದರಾಮಯ್ಯ
ಮೊದಲು 6,900 ಕೋಟಿ ಪ್ರಾಜೆಕ್ಟ್ ಮಾಡಿದ್ವಿ. ಬಳಿಕ ಲ್ಯಾಂಡ್ ಕಾಸ್ಟ್ ಜಾಸ್ತಿಯಾದಾಗ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಿದ್ದಾಗ 9 ಸಾವಿರ ಕೋಟಿ ಮಾಡಿದ್ವಿ. ನೀವೇನು ಮಾಡಿದ್ರಿ ಕಾರಜೋಳ? ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ನಿಮ್ಮದೇ ಸರ್ಕಾರ ಆಗಿದ್ರು ಎರಡೂವರೆ ವರ್ಷ ನೀವೇನ್ ಮಾಡಿದ್ರಿ ಕಾರಜೋಳ? 25 ಜನ ಎಂಪಿಗಳನ್ನ ಕೊಟ್ಟ ಈ ರಾಜ್ಯದ ಬಗ್ಗೆ ಕಾಳಜಿ ಇದೆಯಾ? ಸುಮಾರು ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವ ಪ್ರಾಜೆಕ್ಟ್ ಇದು. ತಮಿಳುನಾಡಿಗೂ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತಮಿಳುನಾಡಿಗೆ ಯಾವುದೇ ತಡೆಯಾಜ್ಞೆ ಕೊಟ್ಟಿಲ್ಲ. ಆಗಿದ್ರು ಈ ಸರ್ಕಾರದಿಂದ ಇಷ್ಟು ವಿಳಂಬ ಆಗಿದೆ. ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನೀರು ಬೇಕು. ಅವರ ತಪ್ಪನ್ನ ಮುಚ್ಚಿಕೊಳ್ಳಲು ಕೊರೊನಾದ ಕಾರಣ ಕೊಡ್ತಿದ್ದಾರೆ. ಮೂವತ್ತು ಜನರ ಮೇಲೆ ಕೇಸ್ ಹಾಕಿದ್ದಾರೆ ಇನ್ನು ಹಾಕಬಹುದು. ನಾವೂ ಈ ಕೇಸಿಗೆ ಹೆದರಿಕೊಳ್ತಿವಿ ಅಂದುಕೊಂಡ್ರೇ ಬಿಜೆಪಿಯ ಮೂರ್ಖತನವಿದೆ ಅಂತ ಸಿದ್ದರಾಮಯ್ಯ ಹೇಳಿದರು.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಹಾಕಲು 100 ಕೆಜಿ ಸೇಬಿನ ಹಾರ ಸಿದ್ಧ
ಕನಕಪುರ ಪುರಸಭೆ ಸರ್ಕಲ್‌ನಲ್ಲಿ ಕೈ ಕಾರ್ಯಕರ್ತರು ಜಮಾವಣೆಗೊಂಡಿದ್ದು ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಹಾಕಲು 100 ಕೆಜಿ ಸೇಬಿನ ಹಾರ ಸಿದ್ದಪಡಿಸಿದ್ದಾರೆ. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಜನಪದ ಕಲಾ ತಂಡಗಳು ರೆಡಿಯಾಗಿವೆ.
ಕನಕಪುರದ ಡಿಕೆಶಿ ನಿವಾಸಕ್ಕೆ ಸಿದ್ದರಾಮಯ್ಯ ಆಗಮನ
ಕನಕಪುರದ ಡಿಕೆ ಶಿವಕುಮಾರ್ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದು ಉಪಾಹಾರ ಸೇವಿಸಿ ಕಚೇರಿಗೆ ತೆರಳಲಿದ್ದಾರೆ. ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಡಿ.ಕೆ.ಶಿವಕುಮಾರ್ ಜತೆ ಚರ್ಚೆ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಗೆ ಶಾಸಕ ಸುರೇಶ್‌ಗೌಡ ವ್ಯಂಗ್ಯ
ಕಾಂಗ್ರೆಸ್ ಪಾದಯಾತ್ರೆಗೆ ಶಾಸಕ ಸುರೇಶ್‌ಗೌಡ ವ್ಯಂಗ್ಯವಾಡಿದ್ದಾರೆ. ಕೊರೊನಾ ಬರಲ್ಲವೆಂದು ಕಾಂಗ್ರೆಸ್ಸಿಗರು ಧೈರ್ಯವಾಗಿದ್ದಾರೆ. ಆದರೆ ನಮಗೆ ಕಾಂಗ್ರೆಸ್ ನಾಯಕರ ಜೀವ ಮುಖ್ಯ. ಅವರೆಲ್ಲರೂ ಇರಬೇಕು, ದೇಶ ಸೇವೆಯನ್ನು ಮಾಡಬೇಕು ಅಂತ ಮಂಡ್ಯದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಕೊವಿಡ್ ಗೈಡ್‌ಲೈನ್ಸ್ ಅನ್ವಯವಾಗಲ್ವಾ? ಎಷ್ಟೇ ದೊಡ್ಡವರಾದರೂ ನಿಯಮಗಳನ್ನು ಪಾಲಿಸಲೇಬೇಕು ಎಂದರು.
ಇಂದಿನ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗಿ
ಇಂದಿನಿಂದ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಜ್ವರದ ಕಾರಣದಿಂದ ಪಾದಯಾತ್ರೆಗೆ ಗೈರಾಗಿದ್ದ ಸಿದ್ದರಾಮಯ್ಯ ಇಂದು ಡಿಕೆಶಿ ಜೊತೆ ಹೆಜ್ಜೆ ಹಾಕಲಿದ್ದಾರೆ.
ಇಂದಿನಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ
ಇಂದಿನಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಲಿದ್ದಾರೆ. ಈಗಾಗಲೇ ಪಾದಯಾತ್ರೆ ಬಗ್ಗೆ ಜೆಡಿಎಸ್ ಕಿಡಿಕಾರಿದೆ. ರಾಮನಗರಕ್ಕೆ ಎಂಟ್ರಿ ಕೊಟ್ಟು ಡಿಕೆಶಿ ಹೊಸ ಸಂದೇಶ ರವಾನಿಸಲಿದ್ದಾರೆ. ಮುಂದಿನ ಚುನಾವಣೆಗೆ ತಾವು ಸಿದ್ಧವಿದ್ದೇವೆಂಬ ಸಂದೇಶ ರವಾನಿಸಲಿದ್ದಾರೆ.
ಪಾದಯಾತ್ರೆಯಲ್ಲಿ 3 ದಿನ ಮೌನವಾಗಿರಲು ಡಿಕೆಶಿ ನಿರ್ಧಾರ
ಪಾದಯಾತ್ರೆಯಲ್ಲಿ 3 ದಿನ ಮೌನವಾಗಿರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದು, ಇವರ ನಡೆ ಅಚ್ಚರಿ ಮೂಡಿಸಿದೆ. ರಾಜಕೀಯ ಸಲಹಾ ತಂಡ ನೀಡಿದ ಸಲಹೆ ಮೇರೆಗೆ ನಿರ್ಧಾರ ಮಾಡಲಾಗಿದೆ. ಆದರೆ 3 ದಿನ ಮೌನ ಬೇಡ ಅಂತ ಇತರೆ ನಾಯಕರು ಹೇಳಿದ್ದಾರೆ. ಪಾದಯಾತ್ರೆಯಲ್ಲಿ ಮಾತನಾಡಿದರೆ ಸಂದೇಶ ಹೋಗುತ್ತದೆ. ಹೀಗಾಗಿ ಮತಾನಾಡಿ ಅಂತ ಹಿರಿಯ ನಾಯಕರು ತಿಳಿಸಿದ್ದಾರೆ. ರಾಜಕೀಯ ಬೆಳವಣಿಗೆ ಮೇಲೆ ಡಿಕೆಶಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಇಂದು ಒಟ್ಟು 14.5 ಕಿಲೋಮೀಟರ್ ಪಾದಯಾತ್ರೆ
ಇಂದು ಮೂರನೇ ದಿನದ ಪಾದಯಾತ್ರೆ ನಡೆಯಲಿದೆ. ಕನಕಪುರ ಟೌನ್ನಿಂದ ಕನಕಪುರ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದವರೆಗೂ ಪಾದಯಾತ್ರೆ ನಡೆಯಲಿದೆ. ಇಂದು ಒಟ್ಟು 14.5 ಕಿಲೋಮೀಟರ್ ಪಾದಯಾತ್ರೆ ನಡೆಯುತ್ತದೆ. ಮೂರನೇ ದಿನ ಪಾದಯಾತ್ರೆ ಮುಗಿಸಿ ಚಿಕ್ಕೇನಹಳ್ಳಿಯಲ್ಲಿ ರಾತ್ರಿ ತಂಗಲಿದ್ದಾರೆ.
9.30ಕ್ಕೆ ಕನಕಪುರದಿಂದ ಪಾದಯಾತ್ರೆ ಪುನಾರಂಭ
3ನೇ ದಿನದ ಪಾದಯಾತ್ರೆ ಇಂದು ಕನಕಪುರದಿಂದ ಆರಂಭವಾಗುತ್ತದೆ. ಬೆಳಗ್ಗೆ 9.30ಕ್ಕೆ ಪುನಾರಂಭವಾಗುವ ಪಾದಯಾತ್ರೆ ಮಧ್ಯಾಹ್ನ 1 ಗಂಟೆಗೆ ವೀರಭದ್ರಸ್ವಾಮಿ ದೇಗುಲ ಬಳಿ ಆಗಮಿಸುತ್ತದೆ.
ಅಧಿಕಾರಿಗಳನ್ನು ಬಿಜೆಪಿ ನಾಯಕರು ಹೆದರಿಸಿದ್ದಾರೆ; ಡಿಕೆ ಶಿವಕುಮಾರ್
ಅಧಿಕಾರಿಗಳನ್ನು ಬಿಜೆಪಿ ನಾಯಕರು ಹೆದರಿಸಿದ್ದಾರೆ ಅಂತ ಡಿಕೆಶಿ ಹೇಳಿಕೆ ನೀಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ಮಾತನಾಡಿದ ಅವರು, ವಿಧಾನಸೌಧದಿಂದ ಹಿಡಿದು ಎಲ್ಲರಿಗೂ ಪಾಸಿಟಿವ್ ಬರುತ್ತೆ. ನಾಳೆ ಇಂಥ ನಾಟಕ ಶುರುವಾಗಬಹುದು. ಕರೆದೊಯ್ಯುವುದು ಪಾಸಿಟಿವ್ ಕೊಡೋದು ಮಾಡ್ತಿದ್ದಾರೆ. ನನಗೂ ಪಾಸಿಟಿವ್ ಕೊಟ್ಟುಬಿಡ್ತಾರೆ. 10 ಸಾವಿರ ಜನರಿದ್ದರು, 30 ಜನರ ಮೇಲೆ ಕೇಸ್ ಹಾಕಿದ್ದಾರೆ. ನನ್ನನ್ನ ಬಿಡಿ ನಾನು ಜೈಲಿಗೆ ಹೋಗಿ ಬಂದವನು. ಕೇಸ್ ಹಾಕಿರುವವರು ಕೋರ್ಟ್‌ನಲ್ಲಿ ನಿಂತ್ರೆ ಒಳ್ಳೇದಾಗುತ್ತಾ? ನನಗೆ ಇಂದು ದುಃಖದ ದಿನ. ಬಿಜೆಪಿಯವರು ನೀಚ ರಾಜಕಾರಣ ಮಾಡ್ತಾರೆಂದು ಗೊತ್ತಿಲ್ಲ ಅಂತ ಅಭಿಪ್ರಾಯಪಟ್ಟರು.
Published On - Jan 11,2022 8:35 AM