ರಾಮನಗರದಲ್ಲಿ ಭೀಕರ ಅಪಘಾತ; 2 ಕಾರು, ಬೈಕ್ ಮೇಲೆ ಟಿಪ್ಪರ್ ಬಿದ್ದು 6 ಜನರ ದುರ್ಮರಣ
ಜೆಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಅಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೈಕ್ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮನಗರ: ಜಿಲ್ಲೆಯ ಕುಂಬಳಗೋಡು ಬಳಿ ಭೀಕರ ಅಪಘಾತ (Accident) ಸಂಭವಿಸಿದೆ. 2 ಕಾರು ಮತ್ತು ಒಂದು ಬೈಕ್ ಮೇಲೆ ಟಿಪ್ಪರ್ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ಎರಡು ಕಾರುಗಳಲ್ಲಿ (Car) ತಲಾ 5 ರಂತೆ 10 ಜನ ತೆರಳುತ್ತಿದ್ದರು. ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೆಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಅಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೈಕ್ (Bike) ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
KA-02 MM- 7749 ಕಾರಿನಲ್ಲಿದ್ದ ನಾಲ್ವರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಮೃತ ದುರ್ದೈವಿಗಳು. KA 05 MJ 9924 ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿದ್ದು, ಮೃತರನ್ನು ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್ ಎಂದು ಗುರುತಿಸಲಾಗಿದೆ. ಬೈಕ್ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಟ್ಟು ಜಲ್ಲಿ ಲಾರಿ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವಿಕುಮಾರ್ ಅಮಾನತು 50,000 ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆಬಿದ್ದಿದ್ದ ಕೋಲಾರ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವಿಕುಮಾರ್ ಅವರನ್ನು ಅಮಾನತ್ತು ಮಾಡಲಾಗಿದೆ. ಗುತ್ತಿಗೆದಾರ ಗಿರೀಶ್ರಿಂದ ಲಂಚ ಸ್ವೀಕರಿಸುವಾಗ ಡಿ.20ರಂದು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆಬಿದ್ದಿದ್ದ ಸರ್ಜನ್, ನ್ಯಾಯಾಂಗ ಬಂಧನದಲ್ಲಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ರವಿಕುಮಾರ್ ಬಿಡುಗಡೆಯಾಗಿದ್ದಾರೆ. ಆದರೆ ಡಿ.21ರಿಂದಲೇ ಸರ್ಕಾರ ಸರ್ಜನ್ ಡಾ.ರವಿಕುಮಾರ್ರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಬೆಂಗಳೂರು: ಮಹಿಳೆಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲ ವಿಡಿಯೋ ತೋರಿಸಿದ್ದ ಆರೋಪಿ ಬಂಧನ ಬೆಂಗಳೂರು: ಮಹಿಳೆಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲ ವಿಡಿಯೋ ತೋರಿಸಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ನಗರದ ಮಾರುತಿ(23) ಬಂಧಿತ ಆರೋಪಿ. ದಿನಸಿ ಅಂಗಡಿ ನಡೆಸುತ್ತಿದ್ದ ಮಹಿಳೆಯಿಂದ ಮೊಬೈಲ್ ನಂಬರ್ ಪಡೆದಿದ್ದ ಆರೋಪಿ, ಆಗಾಗ ಪ್ರಾವಿಜನ್ ಸ್ಟೋರ್ಗೆ ಬರುತ್ತಿದ್ದ. 25 ವರ್ಷದ ಮಹಿಳೆಗೆ ವಿಡಿಯೋ ಕಾಲ್ ಮುಖಾಂತರ ಖಾಸಗಿ ಅಂಗ ತೋರಿಸದ್ದ. ಈ ಬಗ್ಗೆ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಬಾಗಲಗುಂಟೆ ಠಾಣೆಯಲ್ಲಿ IPC1860, ರೀತ್ಯಾ 354(D)ಪ್ರಕರಣ ದಾಖಲು ಮಾಡಲಾಗಿದೆ.
ಮಂಡ್ಯ: ವಿದ್ಯುತ್ ಶಾರ್ಟ್ ಸೆರ್ಕ್ಯೂಟ್; ಹೊತ್ತಿ ಉರಿದ ಅಂಗಡಿಗಳು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಬೆಳ್ಳೆಕೆರೆ ಸರ್ಕಲ್ ಬಳಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ನಿಂದ ಆಟೋಮೊಬೈಲ್ ಮಳಿಗೆ, 2 ಕೋಳಿ ಅಂಗಡಿಗಳಿಗೆ ಬೆಂಕಿ ತಗುಲಿದೆ. ಮೊಗಣ್ಣ ಹಾಗೂ ಯೋಗಾನಂದ ಅವರಿಗೆ ಸೇರಿದ ಅಂಗಡಿಗಳು ಸಂಪೂರ್ಣ ಭಸ್ಮ ಆಗಿದೆ. ಸರ್ವೀಸ್ ಸ್ಟೇಷನ್ನಲ್ಲಿದ್ದ ಐದಾರು ಬೈಕ್, ಆಯಿಲ್, ಟೈರ್ಗಳು ಬೆಂಕಿಗೆ ಆಹುತಿಯಾಗಿದೆ. ಮಾಲೀಕರಿಗೆ ಸುಮಾರು 15 ಲಕ್ಷ ರೂ. ಗಳಿಗೂ ಹೆಚ್ಚು ನಷ್ಟವಾಗಿದೆ.
ನೆಲಮಂಗಲದಲ್ಲಿ ಕಾಡು ಪ್ರಾಣಿಗಳ ಬೇಟೆ ಪ್ರಕರಣ; 6 ಜನರ ವಿರುದ್ಧ ಪ್ರಕರಣ ದಾಖಲು ನೆಲಮಂಗಲದಲ್ಲಿ ಕಾಡು ಪ್ರಾಣಿಗಳ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 51(B) ಅಡಿಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಉಮೇಶ್, ಹನುಮಯ್ಯ, ಮಂಜುನಾಥ್, ಹೇಮಂತ್, ಜಯರಾಮಯ್ಯ, ಶಿವಲಿಂಗ, ವಿರುದ್ಧ ಕೇಸ್ ದಾಖಲಾಗಿದೆ.
ಕೊಂದ ಕಾಡು ಪ್ರಾಣಿಗಳನ್ನು ಕೋಲಿನಲ್ಲಿ ನೇತು ಹಾಕಿ ಸಂಭ್ರಮ ಪಟ್ಟಿದ್ದರು. ಹೆಚ್ಚು ಜನ ಸೇರಿ ಕೊವಿಡ್ ನಿಯಮ ಉಲ್ಲಂಘನೆ ಮಾಡಿ ಸಂಭ್ರಮಚಾರಣೆ ನಡೆಸಿದ್ದರು. ಜನವರಿ7 ರಂದು ಯಂಟಗಾನಹಳ್ಳಿಯಲ್ಲಿ ಘಟನೆ ನಡೆದಿತ್ತು. ಸದ್ಯ ನೆಲಮಂಗಲ ಗ್ರಾಮಾಂತರ ಠಾಣೆ ಹಾಗೂ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಹಿಟ್ ಅಂಡ್ ರನ್ ಪ್ರಕರಣ; ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಮುಂದೆ ಹೋಗುತ್ತಿದ್ದ ಬೈಕ್ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ತಂಬೇನಹಳ್ಳಿ ಬಳಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ವೆಂಕಟೇಶ್ (35) ಮೃತ ಬೈಕ್ ಸವಾರ. ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಒಂದೇ ದಿನ ಎರಡು ಅಪಘಾತದಿಂದ ಪಾರಾದ ಬೈಕ್ ಸವಾರ: ವಿಡಿಯೋ ವೈರಲ್
Nice Road Accident: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವು
Published On - 7:36 pm, Mon, 10 January 22