Nice Road Accident: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವು
ಮತ್ತೊಂದು ಕ್ವಾಲಿಸ್ ಕಾರಲ್ಲಿದ್ದ ನಾಲ್ವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನೈಸ್ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುವುದು ಮುಂದುವರಿದಿದೆ. ಬೆಂಗಳೂರು ಹೊರವಯದಲ್ಲಿರುವ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮತ್ತೊಂದು ಕ್ವಾಲಿಸ್ ಕಾರಲ್ಲಿದ್ದ ನಾಲ್ವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ರಸ್ತೆ ಕಡೆ ಹೊರಟಿದ್ದ ವ್ಯಾಗನರ್ ಕಾರಿನಲ್ಲಿ ಇಬ್ಬರು ಪುರುಷರು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ಕು ಜನ ಪ್ರಯಾಣಿಸ್ತಿದ್ರು. ಅ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿತ್ತು. ಅ ನಾಲ್ವರು ಸ್ಥಳದಲ್ಲೇ ಉಸಿರು ಚೆಲ್ಲಿದರು. ಇದೇ ವೇಳೆ ಅ ಕಾರಿನ ಮುಂದೆ ಚಲಿಸುತ್ತಿದ್ದ ಕ್ವಾಲಿಸ್ ಗಾಡಿಯಲ್ಲೂ ಕೂಡ ನಾಲ್ವರೂ ಪ್ರಯಾಣಿಸ್ತಿದ್ದರು. ಅ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಅವರೆಲ್ಲರನ್ನೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅಪಘಾತವಾಗ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಲಾರಿ ಚಾಲಕನಿಗೆ ಶೋಧ ಕಾರ್ಯ ನಡೆಸಿದ್ದಾರೆ. ಮೇಲ್ನೋಟಕ್ಕೆ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ತಿಳಿದುಬಂದಿರುವುದಾಗಿ ಕುಲದೀಪ್ ಕುಮಾರ್ ಜೈನ್, ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ, ತಿಳಿಸಿದ್ದಾರೆ.
ಮತ್ತೊಂದು ಅವಘಡದಲ್ಲಿ ಕಾರುಗಳನ್ನ ಸಾಗಿಸುತ್ತಿದ್ದ ಟ್ರಕ್ ನೈಸ್ ರಸ್ತೆಯ ಪುರವಂಕರ ಜಂಕ್ಷನ್ ಬಳಿ ಪಲ್ಟಿಯಾಗಿದೆ. ಇದರಿಂದ ನೈಸ್ ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. 10 ಹೊಸ ಹ್ಯುಂಡೈ ಕಾರುಗಳಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ಟ್ರಕ್ ರಸ್ತೆಗೆ ಅಡ್ಡಲಾಗಿರುವ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ. ಕ್ರೇನ್ ಮೂಲಕ ಟ್ರಕ್ ಮೇಲಕ್ಕೆತ್ತುವ ಪ್ರಯತ್ನ ನಡೆದಿದೆ. ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರಿಂದ ಸ್ಥಳದಲ್ಲಿ ಜಖಂಗೊಂಡು ನಿಂತಿದ್ದ ವಾಹನಗಳ ತೆರವು ಕಾರ್ಯ ನಡೆದಿದೆ.
Karnataka | Four people died and many others sustained injuries in a collision between vehicles on Nice road near Purvankara Apartment in Bengaluru yesterday: Kuldeep Jain, DCP Traffic West pic.twitter.com/jL3B3LC72I
— ANI (@ANI) January 7, 2022
Published On - 6:56 am, Sat, 8 January 22