Mekedatu Padayatra 2.0 Highlights: ಎರಡನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯ; ಕೆಂಗೇರಿ ತಲುಪಿದ ಕೈ ನಾಯಕರು

| Updated By: ganapathi bhat

Updated on: Feb 28, 2022 | 9:35 PM

Congress Mekedatu Padayatra Updates: 2ನೇ ಹಂತದ ಪಾದಯಾತ್ರೆ ಮಾರ್ಚ್ 3 ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪುತ್ತದೆ. ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ.

Mekedatu Padayatra 2.0 Highlights: ಎರಡನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯ; ಕೆಂಗೇರಿ ತಲುಪಿದ ಕೈ ನಾಯಕರು
ಬಿಡದಿಯಿಂದ ಹೊರಟ ಪಾದಯಾತ್ರೆ

ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್ (Congress) ನಾಯಕರ ಪಾದಯಾತ್ರೆ ಮತ್ತೆ ನಿನ್ನೆಯಿಂದ (ಫೆ.27) ಆರಂಭವಾಗಿದೆ. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು (Mekedatu) ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ 2.O ಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3 ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ನಿನ್ನೆ ರಾಮನಗರದಿಂದ ಶುರುವಾದ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಇಂದು ಸಂಜೆ ಕೆಂಗೇರಿ ತಲುಪಿದೆ.

LIVE NEWS & UPDATES

The liveblog has ended.
  • 28 Feb 2022 09:33 PM (IST)

    ಎರಡನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯ

    ಕಾಂಗ್ರೆಸ್​ನ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆ ಇಂದು ಮುಕ್ತಾಯವಾಗಿದೆ. ಬಿಡದಿಯಿಂದ ಹೊರಟ ಪಾದಯಾತ್ರೆ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ತಲುಪಿದೆ. ನಾಳೆ ಕೆಂಗೇರಿಯಿಂದ ಪಾದಯಾತ್ರೆ ಮೆರವಣಿಗೆ ಆರಂಭ ಆಗಲಿದೆ.

  • 28 Feb 2022 06:44 PM (IST)

    ನೈಸ್ ರೋಡ್ ಜಂಕ್ಷನ್ ಬಳಿ ಪೊಲೀಸ್ ಬಂದೋಬಸ್ತ್

    ಕಣ್ ಮಿಣಿಕೆ ಬಳಿ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಹೂವಿನ ಸುರಿಮಳೆಗೈದಿದ್ದಾರೆ. ಪಾದಯಾತ್ರೆ ವೇಳೆ ಎಳನೀರು ಕುಡಿದು ಸಿದ್ದರಾಮಯ್ಯ ದಣಿವಾರಿಸಿಕೊಂಡಿದ್ದಾರೆ. ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆ ಹಿನ್ನಲೆ ನೈಸ್ ರೋಡ್ ಜಂಕ್ಷನ್ ಬಳಿ ಫುಲ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 600 ಪೊಲೀಸರ ನಿಯೋಜನೆ ಮಾಡಲಾಗಿದೆ. ಬಂದೋಬಸ್ತ್​ನಲ್ಲಿ ಪಾದಯಾತ್ರೆ ಸಾಗಲಿದೆ. ಕೆಂಗೇರಿ ಬಳಿ ಇವತ್ತಿನ ಪಾದಯಾತ್ರೆ ಅಂತ್ಯವಾಗಲಿದೆ.


  • 28 Feb 2022 06:43 PM (IST)

    ಈಶ್ವರಪ್ಪ ಮೆರವಣಿಗೆ ಮಾಡಿದರು; ಅವರ ಮೇಲೆ ಏಕೆ ಎಫ್​ಐಆರ್ ಹಾಕಿಲ್ಲ?

    ಉದ್ದೇಶ ಪೂರ್ವಕವಾಗಿ ನಮ್ಮ ಮೇಲೆ FIR ದಾಖಲಿಸಲಾಗಿದೆ. ನಿಷೇಧಾಜ್ಞೆ ಇದ್ದರೂ ಈಶ್ವರಪ್ಪ ಮೆರವಣಿಗೆ ಮಾಡಿದರು. ಆದರೂ ಈಶ್ವರಪ್ಪ ಮೇಲೆ ಏಕೆ ಎಫ್​ಐಆರ್ ಹಾಕಿಲ್ಲ. ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ದೂರು ದಾಖಲಿಸ್ತಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ನಾವು ಇದ್ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನಲ್ಲಿ ನಮ್ಮ ಫ್ಲೆಕ್ಸ್ ತೆಗೆಸುವುದು ಸರಿಯಲ್ಲ. ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಫ್ಲೆಕ್ಸ್​ ತೆಗೆಸಲಿ. ತೆಗೆಸುವುದಾದರೆ ಏಲ್ಲಾ ಫ್ಲೆಕ್ಸ್​ಗಳನ್ನು ತೆಗೆದುಹಾಕಲಿ ಎಂದು ಟಿವಿ9ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

  • 28 Feb 2022 06:35 PM (IST)

    ಬೆಂಗಳೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕಮಲ್ ಪಂತ್ ಮಾಹಿತಿ

    ಕಾಂಗ್ರೆಸ್ ಪಾದಯಾತ್ರೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರು ಹೊರವಲಯಕ್ಕೆ ಪಾದ ಯಾತ್ರೆ ಬಂದು ತಲುಪಲಿದೆ. ನಾಳೆ ನಾಡಿದ್ದು ಪಾದಯಾತ್ರೆ ಇರಲಿದೆ. ಹೀಗಾಗಿ ಬೆಂಗಳೂರು ಪೊಲೀಸರು ಸಂಪೂರ್ಣ ಭದ್ರತಾ ಸಿದ್ದತೆ ಮಾಡಿಕೊಂಡಿದ್ದಾರೆ. ಅಲ್ಲದೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಇದೆ. ಈ ಹಿನ್ನೆಲೆ ಬೆಂಗಳೂರಿನ‌ ಎಲ್ಲ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆಯಾ ವಿಭಾಗದಲ್ಲಿ ಪಾದಯಾತ್ರೆ ಇರುವಾಗ ಆ ವಿಭಾಗದ ಡಿಸಿಪಿ ಭದ್ರತೆ ನೋಡಿಕೊಳ್ಳಲಿದ್ದಾರೆ. ಅವರಿಗೆ ಉಳಿದ ವಿಭಾಗಗಳ ಪೊಲೀಸರು ಸಾಥ್ ನೀಡಲಿದ್ದಾರೆ. ಅಲ್ಲದೆ ಭದ್ರತೆಗೆಗಾಗಿ 40 ಕೆಎಸ್​ಆರ್​ಪಿ, 30 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸಂಚಾರ ನಿರ್ವಹಣೆ ಬಗ್ಗೆ ಬೆಂಗಳೂರು ಪೊಲೀಸ್ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸಂಚಾರ ವ್ಯತಯದ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

  • 28 Feb 2022 05:10 PM (IST)

    ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕಾಣಿಸಿಕೊಂಡ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್

    ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಕಾಣಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ನಾವೂ ಬೇಡ ಅಂತಾ ಬೇರೊಬ್ಬರನ್ನ ಕ್ಷೇತ್ರಕ್ಕೆ ತಂದಿದ್ದಾರೆ. ನಾನು ಕಾರ್ಯಕರ್ತರ ಜೊತೆ ಮಾತಾಡಿ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿಯವರಿಗೆ ಹೊಸಬರು ಬೇಕಾಗಿದೆ. ಹೀಗಾಗಿ ಕೆಲವರು ದುಡ್ಡು ಇರುವವರು ಜೆಡಿಎಸ್ ಗೆ ಬರ್ತಿದ್ದಾರೆ. ದೇವೇಗೌಡರು ನಮ್ಮನ್ನ ಬೆಳೆಸಿದರು. ಇದೀಗ ನಾವೂ ಕುಮಾರಸ್ವಾಮಿಯವರಿಗೆ ಬೇಡವಾಗಿದ್ದೇವೆ. ನಾನಿಲ್ಲಿ ನಾಯಕರನ್ನ ಭೇಟಿ ಮಾಡಲು ಬಂದಿದ್ದೇನೆ. ಪಾದಯಾತ್ರೆ ಸದ್ಯಕ್ಕೆ ಮಾಡೋದಿಲ್ಲ ಎಂದು ಶಾಸಕ ಶ್ರೀನಿವಾಸ್ ಟಿವಿ9 ಪ್ರತಿನಿಧಿ ಜೊತೆ ಮಾತನಾಡಿದ್ದಾರೆ.

  • 28 Feb 2022 04:41 PM (IST)

    ಕಾಂಗ್ರೆಸ್ ಓಟ್ ಬರುತ್ತೆ ಅನ್ನೊ ಭ್ರಮೆಯಲ್ಲಿದೆ

    ರಾಯಚೂರಿನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಹಿಜಾಬ್ ವಿವಾದಕ್ಕೆ ಎಸ್​ಡಿಪಿಐ, ಪಿಎಫ್​ಐ‌ ಕಾರಣ. ಆ ಸಂಘಟನೆಗಳನ್ನು ನಿಷೇಧಿಸುವಂತೆ ಅಂತ ಮುಸ್ಲೀಂ ಮುಖಂಡರ ಹೇಳ್ತಾರೆ. ಆದ್ರೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಿಜಾಬ್ ವಿವಾದಕ್ಕೆ ಬಿಜೆಪಿ ಕಾರಣ ಅಂತಾರೆ. ಇಲ್ಲೆ ಗೊತ್ತಾಗತ್ತೆ, ಕಾಂಗ್ರೆಸ್ ನಲ್ಲಿ ಎರಡು ಬಣಗಳಿದ್ದಾವೆ ಅಂತ. ಉಡುಪಿಯ 96 ಮಕ್ಕಳ ಪೈಕಿ 6 ಜನ ಮಾತ್ರ ಹಿಜಾಬ್ ಹಾಕಿದ್ರು. ಆ 6 ಜನರಿಗೆ ಯಾರೂ ಹಿಜಾಬ್ ಹಾಕಲು ಹೇಳಿದ್ದಾರೆ ಅಂತ ಕೇಳಬೇಕಿತ್ತು. ಆದ್ರೆ ಶಾಲೆ ಬಿಡ್ತಿವಿ, ಹಿಜಾಬ್ ಬಿಡಲ್ಲ ಅಂತ ಮಕ್ಕಳಿಂದ ಕಾಂಗ್ರೆಸ್ ನವರು ಹೇಳಿಸಿದ್ದಾರೆ. ಈಗಲೂ ಕಾಂಗ್ರೆಸ್ ಓಟ್ ಬರುತ್ತೆ ಅನ್ನೊ ಭ್ರಮೆಯಲ್ಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

  • 28 Feb 2022 03:43 PM (IST)

    ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು

    ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು ಮಾಡಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗದ ಅಧಿನಿಯಮ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 37 ಜನ ಕಾಂಗ್ರೆಸ್​ ನಾಯಕರ ವಿರುದ್ಧ FIR ದಾಖಲಿಸಲಾಗಿದೆ. A1 ಡಿ.ಕೆ ಶಿವಕುಮಾರ್, A2 ಸಿದ್ದರಾಮಯ್ಯ, A.3 ಡಿ.ಕೆ ಸುರೇಶ್​, A.4 ಎಸ್​ ರವಿ MLC ಮೇಲೆ FIR ದಾಖಲಾಗಿದೆ. ಐಜೂರು ಪೊಲೀಸ್​ ಠಾಣಾವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ತಾಹಶೀಲ್ದಾರ್ ವಿಜಯ್​ ಕುಮಾರ್​ ದೂರು ಆದರಿಸಿ FIR ದಾಖಲು ಮಾಡಲಾಗಿದೆ.

  • 28 Feb 2022 02:22 PM (IST)

    ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ; ಅಶ್ವಥ್ ನಾರಾಯಣ್

    ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ. ನೀರಿಗೆ ಕಾಂಗ್ರೆಸ್ ರಾಜಕೀಯ ಲೇಪ ಹಚ್ಚುತ್ತಿದೆ. ಕುಡಿಯುವ ನೀರಿಗೂ ರಾಜಕೀಯ ಬಣ್ಣ ಹಚ್ಚುತ್ತಿದೆ
    ನಾಡಿನ ನೆಲ, ಜಲ, ಭಾಷೆ ಬಂದಾಗ ಎಲ್ಲರೂ ಒಂದಾಗ್ತಾರೆ. ಆದರೆ ಕಾಂಗ್ರೆಸ್ ಸುಮ್ಮನೆ ರಾಜಕೀಯ ಮಾಡ್ತಿದೆ. 75 ವರ್ಷಗಳಲ್ಲಿ ಕಾಂಗ್ರೆಸ್ ಮೇಕೆದಾಟಿಗೆ ಏನೂ ಮಾಡಿಲ್ಲ. ಡಿಪಿಆರ್ ಕೂಡಾ ಅವರು ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ನಾನು ಖಂಡಿಸುತ್ತೇನೆ. ಮೇಕೆದಾಟು ಅನುಷ್ಠಾನ ಮಾಡಲು ನಮ್ಮ ರಾಜ್ಯ ಮತ್ತು ಕೇಂದ್ರ ಬದ್ದವಾಗಿದೆ ಅಂತ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

  • 28 Feb 2022 02:20 PM (IST)

    ಕಾಂಗ್ರೆಸ್​ನಿಂದ ಈ ಜನ್ಮದಲ್ಲಿ ಮೇಕೆದಾಟು ಯೋಜನೆ ಸಾಧ್ಯವಿಲ್ಲ; ಡಾ.ಅಶ್ವತ್ಥ್​​ ನಾರಾಯಣ ಹೇಳಿಕೆ

    ಕಾಂಗ್ರೆಸ್​ನಿಂದ ಈ ಜನ್ಮದಲ್ಲಿ ಮೇಕೆದಾಟು ಯೋಜನೆ ಸಾಧ್ಯವಿಲ್ಲ ಅಂತ ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್​​ ನಾರಾಯಣ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದರೂ ಸಾಧ್ಯವಿಲ್ಲ. ಇವರ ಜನ್ಮದಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡಲ್ಲ. ಡಿಕೆ ಶಿವಕುಮಾರ್, ಸುರೇಶ್ ರಾಮನಗರ ಅಭಿವೃದ್ಧಿ ಮಾಡಿಲ್ಲ. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಏನೂ ಕೆಲಸ ಮಾಡಿಲ್ಲ. ರಾಜಕೀಯ ಜನ್ಮ ಪಡೆದು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಅಂತ ಹೇಳಿದರು.

  • 28 Feb 2022 02:04 PM (IST)

    ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಪಾದಯಾತ್ರೆ ಅಷ್ಟೇ -ಸಂಸದ ಡಿ.ವಿ. ಸದಾನಂದ

    ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಪಾದಯಾತ್ರೆ ಅಷ್ಟೇ. ಇದೊಂದು ಕಾಂಗ್ರೆಸ್​ನ ಬೀದಿ ನಾಟಕ. ಕಾಂಗ್ರೆಸ್​ಗೆ ಬೇರೆ ವಿಷಯಗಳು ಇಲ್ಲ, ಹೀಗಾಗಿ ಪಾದಯಾತ್ರೆ ಗಿಮಿಕ್ ಮಾಡ್ತಿದೆ ಎಂದು ಬೆಂಗಳೂರಿನಲ್ಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ. ಈ ಪಾದಯಾತ್ರೆಯಿಂದ ಯಾವ ಸಾಧನೆಯೂ ಆಗಲ್ಲ. ನಮ್ಮ ಸರ್ಕಾರ ಮೇಕೆದಾಟು ವಿಚಾರದಲ್ಲಿ ಅನೇಕ ಕೆಲಸ ಮಾಡಿದೆ. ನಮಗೆ ಕ್ರೆಡಿಟ್ ಕೊಡಬಾರದು ಅಂತ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ. ಜನರು ಇದನ್ನು ನೂರಕ್ಕೆ ನೂರರಷ್ಟು ತಿರಸ್ಕಾರ ಮಾಡ್ತಾರೆ.

  • 28 Feb 2022 01:55 PM (IST)

    ಕಾಂಗ್ರೆಸ್ ಕುಡಿಯುವ ನೀರಿಗೂ ರಾಜಕೀಯ ಬಣ್ಣ ಹಚ್ಚುತ್ತಿದೆ -ಸಚಿವ ಡಾ. ಅಶ್ವಥ್ ನಾರಾಯಣ್

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ದೊಂಬರಾಟ ಮಾಡುತ್ತಿದೆ. ನೀರಿಗೆ ಕಾಂಗ್ರೆಸ್ ರಾಜಕೀಯ ಲೇಪ ಹಚ್ಚುತ್ತಿದೆ. ಕುಡಿಯುವ ನೀರಿಗೂ ರಾಜಕೀಯ ಬಣ್ಣ ಹಚ್ಚುತ್ತಿದೆ. ನಾಡಿನ ನೆಲ, ಜಲ, ಭಾಷೆ ಬಂದಾಗ ಎಲ್ಲರೂ ಒಂದಾಗ್ತಾರೆ. ಆದರೆ ಕಾಂಗ್ರೆಸ್ ಸುಮ್ಮನೆ ರಾಜಕೀಯ ಮಾಡ್ತಿದೆ. 75 ವರ್ಷಗಳಲ್ಲಿ ಕಾಂಗ್ರೆಸ್ ಮೇಕೆದಾಟಿಗೆ ಏನೂ ಮಾಡಿಲ್ಲ. ಡಿಪಿಆರ್ ಕೂಡಾ ಅವರು ಮಾಡಿಲ್ಲ.ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ನಾನು ಖಂಡಿಸುತ್ತೇನೆ. ಮೇಕೆದಾಟು ಅನುಷ್ಠಾನ ಮಾಡಲು ನಮ್ಮ ರಾಜ್ಯ ಮತ್ತು ಕೇಂದ್ರ ಬದ್ದವಾಗಿದೆ ಎಂದರು.

  • 28 Feb 2022 01:53 PM (IST)

    ‘ವಿಪಕ್ಷ ನಾಯಕ ಸಿದ್ದರಾಮಯ್ಯ ಮತೀಯವಾದಿ’ -ಸಿ.ಟಿ.ರವಿ

    ‘ವಿಪಕ್ಷ ನಾಯಕ ಸಿದ್ದರಾಮಯ್ಯ ಮತೀಯವಾದಿ’ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಮನಸ್ಥಿತಿ ತಾಲಿಬಾನ್‌ಗಿಂತ ಕಡಿಮೆಯಿಲ್ಲ. ಕೇಸರಿ ಪೇಟ ನೋಡಿದ್ರೆ ಸಿದ್ದರಾಮಯ್ಯ ಉರಿದುಬೀಳ್ತಾರೆ. ಕುಂಕುಮ ಕಂಡ್ರೆ ಹೆದರಿಕೆ ಆಗುತ್ತೆ ಎಂದು ಹೇಳುತ್ತಾರೆ. ಇದನ್ನೆಲ್ಲಾ ಸಿದ್ದರಾಮಯ್ಯನವರ ತಂದೆ ನೋಡಿದ್ದರೆ ಸಿದ್ದರಾಮಯ್ಯ ಎಂದು ಅವರಿಗೆ ಹೆಸರೇ ಇಡುತ್ತಿರಲಿಲ್ಲ.  ವಿಶ್ವದಲ್ಲಿ ಎಲ್ಲೂ ಕುಂಕುಮದಿಂದ ಭಯೋತ್ಪಾದನೆ ನಡೆದಿಲ್ಲ. ಸ್ಕಲ್ ಟೋಪಿಯ ಜನ ತಮ್ಮವರನ್ನು ಕೊಂದಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • 28 Feb 2022 12:36 PM (IST)

    ಉಕ್ರೇನ್​ನಲ್ಲಿ ಸುಮಾರು 454 ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ: ನೋಡಲ್ ಆಪೀಸರ್ ಮನೋಜ್ ರಾಜನ್

    454 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ನಿನ್ನೆ 30 ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ನಿನ್ನೆ ರಾತ್ರಿ ಉಡುಪಿ ಮೂಲದ ವಿದ್ಯಾರ್ಥಿ ಬೆಂಗಳೂರು ಏರ್​ಪೋರ್ಟ್​ಗೆ ಬಂದಿದ್ದಾರೆ. ಏರ್ ಏಷಿಯಾ ಫ್ಲೈಟ್​ನಲ್ಲಿ ಸಂಜೆ ಕೂಡ ಮತ್ತೊಂದಿಷ್ಟು ವಿದ್ಯಾರ್ಥಿಗಳು ಇದ್ದಾರೆ. ಹಂತ ಹಂತವಾಗಿ ಕರೆತರುವ ಕೆಲಸ ಆಗ್ತಿದೆ ಎಂದು ನೋಡಲ್ ಆಪೀಸರ್ ಮನೋಜ್ ರಾಜನ್ ಹೇಳಿದ್ದಾರೆ.

  • 28 Feb 2022 12:12 PM (IST)

    ಸಚಿವ ಕೆ.ಎಸ್.ಈಶ್ವರಪ್ಪನವರ ಬಗ್ಗೆ ಹೇಳಬೇಡಿ; ಅವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ನಾಲಾಯಕ್ -ಸಿದ್ದರಾಮಯ್ಯ

    ಸಚಿವ ಕೆ.ಎಸ್.ಈಶ್ವರಪ್ಪನವರ ಬಗ್ಗೆ ಹೇಳಬೇಡಿ. ಅವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ನಾಲಾಯಕ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಾದಯಾತ್ರೆ ಐದು ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ನಾಳೆ ಬೆಂಗಳೂರಿನಲ್ಲಿ ನಡೆಯುತ್ತದೆ. ಬಿಬಿಎಂಪಿ ಕಮಿಷನರ್​ಗೆ ಪಾದಯಾತ್ರೆ ಬಗ್ಗೆ ತಿಳಿಸಿದ್ದೇವೆ. ಯಾವುದೆ ಹೋರಾಟ ಮಾಡಿದಾಗ ಪ್ರಚಾರ ಆಗುತ್ತದೆ. ಬಿಜೆಪಿಯವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ನಿಜ ಹೇಳುತ್ತಿದ್ದೇವೆ. ಈಶ್ವರಪ್ಪ ನವರ ಹೆಸರು ಹೇಳಬೇಡಿ. ಅವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ನಾಲಾಯಕ್. ಕೂಡಲೇ ಯೋಜನೆಗೆ ಕೇಂದ್ರಸರ್ಕಾರ ಅನುಮತಿ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಗರಂ ಆಗಿದ್ದಾರೆ.

  • 28 Feb 2022 12:01 PM (IST)

    ಬಿಜೆಪಿಯವರು ಮೇಕೆದಾಟು ಯೋಜನೆ ಮಾಡದೇ ಕಾಲಹರಣ ಮಾಡ್ತಿದ್ದಾರೆ -ಕುಸುಮ ರವಿ

    ಮೇಕೆದಾಟು ಯೋಜನೆಗಾಗಿ ನಾವೂ ನಿರಂತರ ಹೋರಾಟ ಮಾಡ್ತಿವಿ. ನಾನೊಬ್ಬ ಬೆಂಗಳೂರಿನವಳಾಗಿ ನನಗೆ ಇದು ತುಂಬಾ ಮುಖ್ಯ ಎಂದು ಕುಸುಮ ರವಿ ತಿಳಿಸಿದ್ದಾರೆ. ಬಿಜೆಪಿಯವರು ಮೇಕೆದಾಟು ಯೋಜನೆ ಮಾಡದೇ ಕಾಲಹರಣ ಮಾಡ್ತಿದ್ದಾರೆ. ನಮ್ಮ ನೀರಿಗಾಗಿ ನಾವೂ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಯವರು ಬರೀ ಟೀಕೆ ಮಾಡೋದ್ರಲ್ಲಿ ಕಾಲ ಕಳೆಯೋದುಬಿಟ್ಟು ಯೋಜನೆ ಜಾರಿಮಾಡಲಿ ಎಂದರು.

  • 28 Feb 2022 11:52 AM (IST)

    ಪಾದಯಾತ್ರೆ ಸಾಗುವ ರಸ್ತೆಯಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದ ಮಹಿಳಾ ಕಾರ್ಯಕರ್ತೆಯರು

    ಮಹಿಳಾ ಕಾರ್ಯಕರ್ತೆಯರು ಪಾದಯಾತ್ರೆ ಸಾಗುವ ರಸ್ತೆಯಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಕೈ ಗುರುತು ಸೇರಿದಂತೆ ವಿಭಿನ್ನ ರೀತಿಯ ರಂಗೋಲಿಗಳನ್ನ ಬಿಡಿಸಿ ಕೈ ನಾಯಕರ ಗಮನ ಸೆಳೆದ ಕಾರ್ಯಕರ್ತೆಯರು.

  • 28 Feb 2022 11:51 AM (IST)

    ಉಕ್ರೇನ್​ನ ಕಾರ್ಕಿವ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿದ ಶಾಸಕ ಸಿದ್ದು ಸವದಿ

    ಉಕ್ರೇನ್​ನ ಕಾರ್ಕಿವ್​ನಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ವಿದ್ಯಾರ್ಥಿಗಳು ಸಿಲುಕಿದ್ದು ವಿದ್ಯಾರ್ಥಿಗಳ ಪೋಷಕರನ್ನು ಶಾಸಕ ಸಿದ್ದು ಸವದಿ ಭೇಟಿ ಮಾಡಿದ್ದಾರೆ. ಶಾಸಕ ಸವದಿ‌ ಮುಂದೆ ವಿದ್ಯಾರ್ಥಿಗಳ ಪೋಷಕರು ಕಣ್ಣೀರು ಹಾಕಿದ್ದಾರೆ. ಕಿರಣ ಸಿಂಗಾಡಿ, ಕಿರಣ ಸವದಿ, ಪ್ರಜ್ವಲ್ ಹಿಪ್ಪರಗಿ, ಪ್ರಜ್ವಲ್ ಕುಮಾರ್ ತಿಮ್ಮಾಪುರ, ಅಶ್ವತ್ ಕುಮಾರ್ ಗುರವ ಮನೆಗೆ ಸಿದ್ದು ಸವದಿ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ಹೇಳಿದ್ದಾರೆ.

  • 28 Feb 2022 10:32 AM (IST)

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಬಿ ಸಿ ಪಾಟೀಲ್ ಆಕ್ರೋಶ

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಬಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಜನರು ಕಾಂಗ್ರೆಸ್ ಪಕ್ಷಕ್ಕೆ ಛೀ ಥೂ ಅಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮೂರು ದಿನ ವಿಧಾನಸೌಧದಲ್ಲಿ ನಿದ್ದೆ ಮಾಡಿದೆ ಇನ್ನೂ ಎಚ್ಚರ ಆಗಿಲ್ಲ. ಆರು ದಿನ ಕಲಾಪ ಹಾಳು ಮಾಡಿದ್ದಾರೆ. ಯಾವ ಪುರುಷಾರ್ಥಕ್ಕೆ ಮಾಡಿದ್ರೋ ಅಂತ ಗದಗದಲ್ಲಿ ಕಿಡಿ ಕಾರಿದ್ದಾರೆ. ಯಾವ ಅಭಿವೃದ್ಧಿ, ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ಅದಕ್ಕೆ ಜನರು ಕಾಂಗ್ರೆಸ್ ಅಂದ್ರೆ ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದಾರೆ. ಜನರ ಗಮನ ಸೆಳೆಯಲು ಮೇಕೆದಾಟು 2.O. ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಯಾರೂ ವಿರೋಧ ಮಾಡಿದ್ದಾರೆ. ಬಿಜೆಪಿ ಮೇಕೆದಾಟುಗೆ ವಿರೋಧ ಇಲ್ಲ. ಈಗಾಗಲೇ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಪರಿಸರ ಇಲಾಖೆಯಿಂದ ಕ್ಲೀಯರನ್ಸ್ ಸಿಕ್ಕ ತಕ್ಷಣ ಕೆಲಸ ಆರಂಭ ಆಗುತ್ತೆ ಅಂತ ಹೇಳಿದರು.

  • 28 Feb 2022 10:29 AM (IST)

    ಪಾದಯಾತ್ರೆಗೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಗೆ ಆಗಮಿಸಿದರು.

  • 28 Feb 2022 10:25 AM (IST)

    ನಮಗೆ ಅನುಮತಿ ನೀಡದಿದ್ದರೂ ಹೋರಾಟ ಮಾಡುತ್ತೇವೆ

    ಪಾದಯಾತ್ರೆಗೆ ಬಿಬಿಎಂಪಿ ಅನುಮತಿ ನಿರಾಕರಣೆ ಹಿನ್ನೆಲೆ, ನಮಗೆ ಅನುಮತಿ ನೀಡದಿದ್ದರೂ ಹೋರಾಟ ಮಾಡುತ್ತೇವೆ ಅಂತ ಬಿಡದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅನುಮತಿ‌ ಸಿಕ್ಕಿದೆ. ಕೊವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ ಅಂತ ಹೇಳಿದರು.

  • 28 Feb 2022 10:19 AM (IST)

    ಪಾದಯಾತ್ರೆಗೆ ಇನ್ನು ಆಗಮಿಸಿದ ಸಿದ್ದರಾಮಯ್ಯ

    ಇದೀಗ ಪಾದಯಾತ್ರೆ ಆರಂಭವಾಗಿದೆ. ಆದರೆ ಸಿದ್ದರಾಮಯ್ಯ ಪಾದಯಾತ್ರೆಗೆ ಇನ್ನು ಆಗಮಿಸಿಲ್ಲ.

  • 28 Feb 2022 10:18 AM (IST)

    ಕೆಲವೇ ಹೊತ್ತಲ್ಲಿ ಕೈ ಪಾದಯಾತ್ರೆಗೆ ಚಾಲನೆ

    ಬಿಡದಿಯ ಬಾಲಗಂಗಾಧರನಾಥ ಸ್ವಾಮೀಜಿ ಸರ್ಕಲ್ ಬಳಿಯಿಂದ ಕೆಲವೇ ಹೊತ್ತಿನಲ್ಲಿ ಕೈ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಕೈ ನಾಯಕರು ಮಾಜಿ ಶಾಸಕ ಎಚ್ ಸಿ ಬಾಲಕೃಷ್ಣಗೆ ಇಂದು 57 ನೇ ಜನ್ಮದಿನ ಹಿನ್ನೆಲೆ ವೇದಿಕೆಯಲ್ಲಿ ಬೃಹತ್ ಕೇಕ್ ಕಟ್ ಮಾಡಿದರು.

  • 28 Feb 2022 10:15 AM (IST)

    ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಡಿಕೆಶಿ ವಾಗ್ದಾಳಿ

    ಸಚಿವ ಕೆ.ಎಸ್.ಈಶ್ವರಪ್ಪನಿಗೆ ಸ್ವಲ್ಪ ತೊಂದರೆ ಇದೆ. ಮೆಂಟಲ್ ಆಸ್ಪತ್ರೆಗೆ ಸೇರಿಸಲು ಬೆಡ್ ಹುಡುಕುತ್ತಿದ್ದೇನೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಚೆನ್ನಾಗಿ ಇದೆ. ಅದು ಇಲ್ಲ ಅಂದರೆ ಬೇರೆ ಆಸ್ಪತ್ರೆಗೆ ಸೇರಿಸೋಣ ಅಂತ ಬಿಡದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

  • 28 Feb 2022 10:13 AM (IST)

    ಹೋರಾಟಗಾರರಿಗೆ ಯಾರ ಅನುಮತಿ‌ ಬೇಕು; ಡಿಕೆಶಿ

    ನೀವೆಲ್ಲ ಟೆಂಪಲ್ ರನ್ ಅಂತಾ ಕರೆಯುತ್ತೀರಿ. ದೇವಸ್ಥಾನಗಳಲ್ಲಿ ದೇವರನ್ನ ಪೂಜೆ ಸಲ್ಲಿಸಿ ಹೊರಡುತ್ತೇವೆ. ಬಾಲಗಂಗಾಧರನಾಥ ಸ್ವಾಮೀಜಿಯವರು ಇದೇ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಹೊರಡುತ್ತಿದ್ದರು. ದನಕರಗಳನ್ನ ಬೆಂಗಳೂರಿಗೆ ಹೊರಡಿಸುತ್ತಿದ್ದೆ. ಬೇಡ ಎಂದು ಸುಮ್ಮನಾದೇ. ಕಿವಿಯಲ್ಲಿ ಕೇಳುವುದು ಸುಳ್ಳು ಕಣ್ಣಲ್ಲಿ‌ ಕಾಣುವುದು ನಿಜ. ವಿರೋಧ ಪಕ್ಷದವರು ಮಾತನಾಡುವುದನ್ನ ನಾವು ಕಿವಿಯಲ್ಲಿ‌ ಕೇಳುತ್ತಿದ್ದೇವೆ. ನಾವು‌ ಮಾಡುವ ಕೆಲಸವನ್ನ‌ ಕಣ್ಣಿನಲ್ಲಿ‌ ನೋಡುತ್ತಿದ್ದೀರಿ. ಹುರಿ ಬಿಸಿಲಿನಲ್ಲಿ ರೆಸ್ಟ್ ಪಡೆಯದೇ ಪಾದಯಾತ್ರೆಯಲ್ಲಿ‌ ನಡೆದಿದ್ದಾರೆ. ಹೋರಾಟಗಾರರಿಗೆ ಯಾರ ಅನುಮತಿ‌ ಬೇಕು. ಸಿಎಂ ಅವರಿಗೆ ತಿಳಿಸಿದ್ದೇವೆ. ಟ್ರಾಫಿಕ್ ‌ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಕೊವಿಡ್ ನಿಯಮ ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಪಾದಯಾತ್ರೆ ಶುರು ಮಾಡುತ್ತೇವೆ ಎಂದೇ ನಿಯಮಗಳನ್ನ ಹಾಕುತ್ತಾರೆ. ಈಶ್ವರಪ್ಪ, ರಾಘವೇಂದ್ರ ರನ್ನ ಯಾಕೆ ಬಂಧನ ಮಾಡಿಲ್ಲ. ಎಫ್ ಐ ಆರ್ ಯಾಕೆ ಹಾಕಿಲ್ಲ. ಬಜರಂಗದಳದವರು ಮಾಡಿದ್ದಾರೆ. ಅವರ‌ ಮೇಲೆ ಕೇಸ್ ಹಾಕಿಲ್ಲ. ಇವರಿಗೆ ‌ಒಂದು‌ ನ್ಯಾಯ ನಮಗೆ ಒಂದು ನ್ಯಾಯಾನಾ. ಐದು ದಿನ ಕಷ್ಟ ಆಗಬಹುದು. ಐವತ್ತು ವರ್ಷ ಆರಾಮಾಗಿ ಇರಬಹುದು. ಜನರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ರಸ್ತೆ ಬದಲಾವಣೆ ಆಗಿದೆ. ಯಾವುದೆ ತೊಂದರೆ ಆಗುವುದಿಲ್ಲ. ಈಶ್ವರಪ್ಪ ಹೇಳಿರುವುದು ನೂರಕ್ಕೆ ನೂರು ಸತ್ಯ. ಪ್ರಧಾನಿ ಮೋದಿ ಅವರು ಎರಡು ಕೋಟಿ ಜನರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ರು. ಯಾರಿಗೂ ಕೊಡಲಿಲ್ಲ. ಉದ್ಯೋಗ ಇಲ್ಲದಂತೆ ಮಾಡಿರುವುದು ಬಿಜೆಪಿ ಸರ್ಕಾರ. ಉದ್ಯೋಗ ಇಲ್ಲದಕ್ಕೆ ಜನರು ಪಾದಯಾತ್ರೆ ಬಂದು ನಡೆಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಿಜೆಪಿ ‌ಸರ್ಕಾರ, ಮೋದಿ ಅಂತ ಡಿಕೆ ಶಿವಕುಮಾರ್ ಟಿವಿಗೆ ಹೇಳಿಕೆ ನೀಡಿದ್ದಾರೆ.

  • 28 Feb 2022 09:58 AM (IST)

    ವೇದಿಕೆಗೆ ಆಗಮಿಸಿದ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಮಾಜಿ ಶಾಸಕ ಬಾಲಕೃಷ್ಣ

    ಆದಿ ಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಬಾನಂದೂರು ಗ್ರಾಮದ ಬಳಿ‌ ಇರೋ ಆದಿ ಚುಂಚನಗಿರಿ ಮಠದಲ್ಲಿ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ. ಎರಡನೇ ದಿನದ ಪಾದಯಾತ್ರೆಗೂ ಮುನ್ನ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿದೆ. ಸದ್ಯ ವೇದಿಕೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಮಾಜಿ ಶಾಸಕ ಬಾಲಕೃಷ್ಣ ಆಗಮಿಸಿದ್ದಾರೆ.

  • 28 Feb 2022 09:34 AM (IST)

    ಡಿಕೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು

    ಬಿಡದಿ ಸರ್ಕಲ್ ಬಳಿ ಡಿಕೆ ಶಿವಕುಮಾರ್ ಆಗಮಿಸಿದ್ದು ಡಿಕೆ ಶಿವಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಘಟನೆ ನಡೆದಿದೆ.

  • 28 Feb 2022 09:25 AM (IST)

    ಪಾದಯಾತ್ರೆಗೂ ಮುನ್ನ ಡಿಕೆಶಿ ಟೆಂಪಲ್ ರನ್

    ಪಾದಯಾತ್ರೆಗೂ ಮುನ್ನ ಡಿಕೆಶಿ ಟೆಂಪಲ್ ರನ್ ಮಾಡುತ್ತಿದ್ದಾರೆ. ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಾಗಡಿ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹುಟ್ಟುಹಬ್ಬ ಹಿನ್ನೆಲೆ ಇದೇ ವೇಳೆ ದೇವಸ್ಥಾನದ ಮುಂಭಾಗ ಡಿಕೆಶಿ ಹುಟ್ಟುಹಬ್ಬ ಆಚರಿಸಿದರು.

  • 28 Feb 2022 09:24 AM (IST)

    ಆದಿ ಚುಂಚನಗಿರಿ ಮಠದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ

    ರಾಮನಗರ ತಾಲೂಕಿನ ಬಾನಂದೂರು ಗ್ರಾಮದ ಆದಿ ಚುಂಚನಗಿರಿ ಮಠದಲ್ಲಿ ಡಿಕೆಶಿ ಪೂಜೆ ಸಲ್ಲಿಸಿದರು. ಎರಡನೇ ದಿನದ ಪಾದಯಾತ್ರೆಗೂ ಮುನ್ನಾ ಪೂಜೆ ಸಲ್ಲಿಸಿದ್ದಾರೆ.

  • 28 Feb 2022 09:17 AM (IST)

    ಬಿಡದಿ ಮುಖ್ಯ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜ್ಯಾಮ್

    ಪಾದಯಾತ್ರೆ ಹಿನ್ನೆಲೆ ಬಿಡದ ಮುಖ್ಯ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜ್ಯಾಮ್ ಆಗಿದೆ.

  • 28 Feb 2022 09:16 AM (IST)

    ಕೆಲವೇ ಹೊತ್ತಿನಲ್ಲಿ ಮೇಕೆದಾಟು ಪಾದಯಾತ್ರೆ ಆರಂಭ

    ಕೆಲವೇ ಹೊತ್ತಿನಲ್ಲಿ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯ ಎರಡನೇ ದಿನದ ಯಾತ್ರೆ ಆರಂಭವಾಗಲಿದೆ. ಬಿಡದಿ ಸರ್ಕಲ್​ನಿಂದ ಕೆಂಗೇರಿಯವರೆಗೆ ಪಾದಯಾತ್ರೆ ನಡೆಲಿದೆ.

  • 28 Feb 2022 09:01 AM (IST)

    20 ಕಿಲೋಮೀಟರ್ ನಡೆಯಲಿರುವ ಕಾಂಗ್ರೆಸ್ ನಾಯಕರು

    ಮೊದಲ ದಿನದ ಪಾದಯಾತ್ರೆ ನಿನ್ನೆ ಬಿಡದಿಗೆ ಅಂತ್ಯವಾಗಿತ್ತು. ಇಂದು 9 ಗಂಟೆಗೆ ಆರಂಭವಾಗುತ್ತದೆ. ನಾಯಕರು ಇಂದು ಸುಮಾರು 20 ಕಿಲೋಮೀಟರ್ ನಡೆಯುತ್ತಾರೆ.

  • 28 Feb 2022 09:00 AM (IST)

    ಬೆಳಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭ

    ರಾಮನಗರ ತಾಲೂಕಿನ ಬಿಡದಿಯಿಂದ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಹೊರಡಲಿದೆ.

  • 28 Feb 2022 08:59 AM (IST)

    ಇಂದು ಬೆಂಗಳೂರು ಪ್ರವೇಶಿಸಲಿರೋ ಕಾಂಗ್ರೆಸ್ ಪಾದಯಾತ್ರೆ ‌

    ಇಂದು ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಬೆಂಗಳೂರು ಪ್ರವೇಶಿಸುತ್ತದೆ.

     

  • 28 Feb 2022 08:58 AM (IST)

    ಇಂದು ಬಿಡದಿಯಿಂದ ಕೆಂಗೇರಿವರೆಗೆ ಪಾದಯಾತ್ರೆ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು 2ನೇ ದಿನದ ಕಾಂಗ್ರೆಸ್ ಪಾದಯಾತ್ರೆ
    ಬಿಡದಿಯಿಂದ ಕೆಂಗೇರಿವರೆಗೆ ನಡೆಯಲಿದೆ.

     

Published On - 8:51 am, Mon, 28 February 22

Follow us on