AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಹಾಸ್ಟೆಲ್​​​ನಲ್ಲಿದ್ದ 15 ಕ್ವಿಂಟಲ್ ಗೋಧಿಯನ್ನು ಜೆಸಿಬಿಯಿಂದ ಗುಂಡಿ ತೋಡಿ ಮುಚ್ಚಿಸಿದ ವಾರ್ಡನ್!

ರಾಮನಗರ ಹೊರವಲಯದ ಹೆಲ್ತ್ ಸಿಟಿಯಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಪುರುಷರ ಹಾಸ್ಟೆಲ್​​ ವಾರ್ಡನ್‌ನ ನಿರ್ಲಕ್ಷ್ಯದಿಂದ 15 ಕ್ವಿಂಟಲ್ ಗೋಧಿ ಮಣ್ಣುಪಾಲಾಗಿರುವಂತಹ ಘಟನೆ ನಡೆದಿದೆ. ಹಾಸ್ಟೆಲ್ ಹಿಂಭಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆಸಿ ಮುಚ್ಚಿ ಹಾಕಲಾಗಿದೆ.

ಸರ್ಕಾರಿ ಹಾಸ್ಟೆಲ್​​​ನಲ್ಲಿದ್ದ 15 ಕ್ವಿಂಟಲ್ ಗೋಧಿಯನ್ನು ಜೆಸಿಬಿಯಿಂದ ಗುಂಡಿ ತೋಡಿ ಮುಚ್ಚಿಸಿದ ವಾರ್ಡನ್!
ಮಣ್ಣುಪಾಲಾಗಿರುವ ಗೋಧಿ
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 18, 2025 | 10:50 AM

Share

ರಾಮನಗರ, ಸೆಪ್ಟೆಂಬರ್​ 18: ಸರ್ಕಾರಿ ಹಾಸ್ಟೆಲ್​​ನಲ್ಲಿರುವ (Government Hostel) ಬಡ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಬೇಕಾದ ಆಹಾರ ಹಾಸ್ಟೆಲ್​​ ವಾರ್ಡನ್​ (Warden) ದಿವ್ಯ ನಿರ್ಲಕ್ಷ್ಯಕ್ಕೆ ಮಣ್ಣು ಪಾಲಾಗಿದೆ. ರಾಮನಗರ ಹೊರವಲಯದ ಹೆಲ್ತ್ ಸಿಟಿಯಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಪುರುಷರ ಹಾಸ್ಟೆಲ್​​ನಲ್ಲಿ ಘಟನೆ ನಡೆದಿದ್ದು, ಬರೋಬ್ಬರಿ 15 ಕ್ವಿಂಟಲ್ ಗೋಧಿಯನ್ನು ಜೆಸಿಬಿ ಮೂಲಕ ಗುಂಡಿ ತೋಡಿ ಮುಚ್ಚಲಾಗಿದೆ.

ಸರ್ಕಾರಿ ಹಾಸ್ಟೆಲ್​​​ ವಾರ್ಡನ್​​ ದಿವ್ಯ ನಿರ್ಲಕ್ಷ ಹಾಗೂ ಅಸಡ್ಡೆಯಿಂದಾಗಿ ಬಡ ವಿದ್ಯಾರ್ಥಿಗಳ‌ ಹೊಟ್ಟೆ ಸೇರಬೇಕಾದ ಗೋಧಿ ಮಣ್ಣು ಪಾಲಾಗಿದೆ. ಅಂದಹಾಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಪುರುಷರ ಈ ಒಂದು ಹಾಸ್ಟೆಲ್​ನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 125 ವಿದ್ಯಾರ್ಥಿಗಳಿದ್ದಾರೆ.

15 ಕ್ವಿಂಟಲ್​​ ಗೋಧಿ ಮಣ್ಣುಪಾಲು

ವಿದ್ಯಾರ್ಥಿಗಳ ಹಸಿವು ನೀಗಿಸಲು ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ 30 ಕ್ವಿಂಟಲ್ ಗೋಧಿ ಸರಬರಾಜು ಆಗಿತ್ತು. ಈ ಗೋಧಿಯನ್ನು ಸರಿಯಾಗಿ ಬಳಕೆ ಮಾಡದ ಹಾಸ್ಟೆಲ್​​ ವಾರ್ಡನ್ ಯೋಗಿಶ್, ಹುಳು ಹಿಡಿದಿದೆ ಎಂದು ತಾಲ್ಲೂಕು ಬಿಸಿಎಂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಕಾರಣ ಕೇಳಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಬಳಿಕ ಅಧಿಕಾರಿಗಳ ಸೂಚನೆಯಂತೆ 15 ಕ್ವಿಂಟಲ್​​ ಗೋಧಿಯನ್ನು ಸ್ವಚ್ಚಗೊಳಿಸಿ ಕನಕಪುರ ಹಾಸ್ಟೆಲ್​​ಗೆ ರವಾನಿಸಿ, ಉಳಿದ ಗೋಧಿಯನ್ನು ಬಳಸುವಂತೆ ಸೂಚಿಸಲಾಗಿತ್ತು. ಆದರೆ ಆ ಉಳಿದ ಗೋಧಿಯನ್ನು ಬಳಸದೆ ಹುಳು ಹಿಡಿಯುವಂತೆ ಮಾಡಿದ್ದರು. ಬಳಿಕ ಹಾಸ್ಟೆಲ್ ಹಿಂಭಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆಸಿ ಮುಚ್ಚಿ ಹಾಕಿಸಿದ್ದರು.

ಇದನ್ನೂ ಓದಿ: ಶಿರಾ: ಕಳೆಪೆ ಗುಣಮಟ್ಟದ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಈ ಬಗ್ಗೆ ಟಿವಿ9 ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿಯನ್ನ ಸ್ಥಳಕ್ಕೆ ಕರೆಸಲಾಗಿತ್ತು. ಸ್ಥಳಕ್ಕೆ ಬಂದ ಬಿಸಿಎಂ ಇಲಾಖೆ ತಾಲೂಕು ಅಧಿಕಾರಿ ಮಧುಮಲಾ, ಜೆಬಿಸಿ ಮೂಲಕ ಸ್ಥಳದಲ್ಲಿ ಗುಂಡಿ ತೆಗಿಸಿದಾಗ ಬಡ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಿದ್ದ ಗೋಧಿ ಮಣ್ಣುಪಾಲಾಗಿರುವುದು ಬೆಳಕಿಗೆ ಬಂದಿದೆ.

Food

ಅಂದಹಾಗೆ ಕಳೆದ ವರ್ಷ ಕೂಡ ಇದೇ ಹಾಸ್ಟೆಲ್​ನ ವಾರ್ಡನ್ ಆಗಿದ್ದ ಯೋಗಿಶ್, 15 ಕ್ವಿಂಟಲ್ ಅಷ್ಟು ವಿದ್ಯಾರ್ಥಿಗಳ ಆಹಾರವನ್ನ ಹಾಳು ಮಾಡಿದ್ದ. ಇದೀಗ ಸುಮಾರು 30 ಕ್ವಿಂಟಲ್ ಗೋಧಿಯನ್ನ ಹುಳು ಹಿಡಿಯುವಂತೆ ಮಾಡಿದ್ದಾನೆ. ಇನ್ನು ಒಂದು ವೇಳೆ ಹಾಸ್ಟೆಲ್​ನಲ್ಲಿ ಹೆಚ್ಚುವರಿ ಆಹಾರ ಪದಾರ್ಥ ಇದ್ದರೇ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬೇರೊಂದು ಹಾಸ್ಟೆಲ್​ಗೆ ಶಿಫ್ಟ್ ಮಾಡಬಹುದಿತ್ತು. ಅಲ್ಲಿರುವ ವಿದ್ಯಾರ್ಥಿಗಳ ಹೊಟ್ಟೆಯನ್ನಾದರೂ ತುಂಬಿಸುತ್ತಿತ್ತು. ಆದರೆ ವಾರ್ಡನ್ ‌ಯೋಗಿಶ್​​ನ ಅಸಡ್ಡೆ, ದಿವ್ಯಾ ನಿರ್ಲಕ್ಷ್ಯದಿಂದ ರಾಶಿ ರಾಶಿ ಗೋಧಿ ಮಣ್ಣಪಾಲಾಗಿದೆ. ಈ‌ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲು ಸಹ ತಾಲೂಕು ಅಧಿಕಾರಿ ಮಧುಮಲಾ ಮುಂದಾಗಿದ್ದಾರೆ.

ಸಚಿವ ಶಿವರಾಜ್ ತಂಗಡಗಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶಿವರಾಜ್ ತಂಗಡಗಿ, ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಇವತ್ತು ಅಥವಾ ನಾಳೆ ವಸತಿ‌ ನಿಲಯಕ್ಕೆ ಅಧಿಕಾರಿಗಳನ್ನ ಕಳಿಸುತ್ತೇನೆ. ಪರಿಶೀಲನೆ ಮಾಡುವುದಕ್ಕೆ ಸೂಚನೆ ನೀಡುತ್ತೇವೆ. ನಿಜವಾಗಲೂ ಇದನ್ನು ನಾವು ಸಹಿಸಲ್ಲ. ಸಹಿಸಿಕೋಳ್ಳುವ ಪ್ರಶ್ನೆ ಇಲ್ಲ. ಬಡ ಮಕ್ಕಳಿಗೆ ಸೇರಬೇಕಾದ ಆಹಾರ ಅದು. ಅಧಿಕಾರಿಗಳು ಇತರಹ ಮಾಡಿದರೆ ಸಹಿಸಲ್ಲ ಎಂದಿದ್ದಾರೆ.

ಇದನ್ನೂ ಓದಿ: ತುಮಕೂರು: ಸರ್ಕಾರಿ ವಸತಿ ನಿಲಯದ 20 ವಿದ್ಯಾರ್ಥಿಗಳು ಅಸ್ವಸ್ಥ

ಬಡ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಾದ ಗೋಧಿ ಮಣ್ಣುಪಾಲಾಗುವಂತೆ ಮಾಡಿರುವುದು ವಾರ್ಡನ್​​ನ ಅಸಡ್ಡೆಗೆ ಎತ್ತಿ ಹಿಡಿದ ಕೈಗನ್ನಡಿಯಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:43 am, Thu, 18 September 25