ರಾಮನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ದೋಖಾ; ನಕಲಿ ಕೀ, ಬಿಲ್ ಸೃಷ್ಟಿಸಿ ಲಕ್ಷಾಂತರ ರೂ. ಗುಳುಂ ಮಾಡಿದ ನೌಕರ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೌಕರನಾಗಿದ್ದ ಮಂಜುನಾಥ್ ಎಂಬಾತ ಹಾಸ್ಟೆಲ್ ಒಂದರಲ್ಲಿ ಅಡುಗೆ ಭಟ್ಟನಾಗಿದ್ದ ತದನಂತರ ಇಲಾಖೆಯ ಕಚೇರಿಯಲ್ಲಿ ಕೆಲಸಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದ್ದು, ಅಲ್ಪಸ್ವಲ್ಪ ಕಂಪ್ಯೂಟರ್ ಜ್ಷಾನ ಹೊಂದಿದ್ದ ಆತ, ಅಧಿಕಾರಿಗಳ ಡಿಎಸ್ಸಿ(Digital Signature Certificate) ಕೀಗಳನ್ನ ಬಳಸಿ, ನಕಲಿ ಬಿಲ್ಗಳನ್ನ ಸೃಷ್ಠಿಸಿ, ಲಕ್ಷಾಂತರ ರೂ ಹಣವನ್ನ ಸರ್ಕಾರಕ್ಕೆ ಪಂಗನಾಮ ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ರಾಮನಗರ: ತಾಲೂಕಿನ ಬಿಸಿಎಂ ಇಲಾಖೆಯಲ್ಲಿ ಡ್ರಿ ಗ್ರೂಪ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್, ಖಜಾನೆ-2 ರಲ್ಲಿ ಅಧಿಕಾರಿಗಳ ಡಿಎಸ್ಸಿ (Digital Signature Certificate) ಕೀಗಳನ್ನ ಬಳಸಿ ಹಾಸ್ಟೆಲ್ಗಳ ಬಾಡಿಗೆ ಮತ್ತು ವಿದ್ಯುತ್ ಬಿಲ್ಲನ್ನು ಪಾವತಿ ಮಾಡುವ ಸಂಬಂಧ ನಕಲಿ ಬಿಲ್ಲುಗಳನ್ನು ಸೃಷ್ಠಿಸಿ 2019 ರಿಂದ 2022ರವರೆಗೂ ತಾಲೂಕು ಕಲ್ಯಾಣ ಅಧಿಕಾರಿಗಳ ಸಹಿಗಳನ್ನ ಪೋರ್ಜರಿ ಮಾಡಿ ಸುಮಾರು 76 ಲಕ್ಷದ 57 ಸಾವಿರ ಹಣವನ್ನ ದೋಖಾ ಮಾಡಿದ್ದಾನೆ. ಅಲ್ಲದೆ ಹಣವನ್ನ ನೇರವಾಗಿ ಬಾಡಿಗೆ ಕೊಟ್ಟವರಿಗೆ ಹೋಗದೇ ಪತ್ನಿ ವೀಣಾ, ಅತ್ತೆ ಜಯಮ್ಮ, ಸಂಬಂಧಿಕರಾದ ಎಂ ಎಲ್ ಜಯರಾಮಯ್ಯ, ರವಿ, ಸಿದ್ದರಾಜು, ಮುನಿರತ್ನ ಎಂಬುವವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ಇತ್ತೀಚೆಗೆ ಆಡಿಟ್ ನಡೆಸಿದಾಗ ಕೆಲವಷ್ಟು ವ್ಯತ್ಯಾಸಗಳು ಕಂಡು ಬಂದಿದೆ. ಹೀಗಾಗಿ ಇಲಾಖೆ ಪರಿಶೀಲನೆ ನಡೆಸಿದ ವೇಳೆ ಮಂಜುನಾಥ್ ಆಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ.
ಇನ್ನು ಬಿಸಿಎಂ ಹಾಸ್ಟೆಲ್ಗಳಿಗಾಗಿ ರಾಮನಗರ, ಬಿಡದಿ ಹಾಗೂ ಲಕ್ಷೀಪುರ ಗ್ರಾಮದಲ್ಲಿ ಕಟ್ಟಡಗಳನ್ನ ಬಾಡಿಗೆ ಪಡೆಯಲಾಗಿದೆ. ಆನಂತರ ಕಟ್ಟಡದ ಮಾಲೀಕರುಗಳು ಓಚರ್ಗಳಿಗೆ ಸಹಿ ಮಾಡಿದ ನಂತರ ಖಜಾನೆ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ನೇರವಾಗಿ ಅವರ ಅಕೌಂಟ್ಗಳಿಗೆ ಕಟ್ಟಡದ ಬಾಡಿಗೆ ಹಣ ಹೋಗುತ್ತದೆ. ಇದಕ್ಕೆ ಅಧಿಕಾರಿಗಳು ಸಹಿ ಮಾಡುತ್ತಾರೆ. ಆದರೆ ಆರೋಪಿ ಮಂಜುನಾಥ್ ಅದೇ ಹಾಸ್ಟೆಲ್ಗಳ ಕಟ್ಟಡಗಳಿಗೆ ನಕಲಿ ಮಾಲೀಕರನ್ನ, ನಕಲಿ ಬಿಲ್ಗಳನ್ನ ಸೃಷ್ಠಿಸಿ, ಅಧಿಕಾರಿಗಳ ಸಹಿ ಫೋರ್ಜರಿ ಮಾಡಿ ಖಜಾನೆ ಇಲಾಖೆಗೆ ಕಳುಹಿಸಿ ಹಣವನ್ನ ತನ್ನ ಪತ್ನಿ, ಅತ್ತೆ, ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹೋಗುವಂತೆ ಮಾಡಿದ್ದಾನೆ. ಇದಕ್ಕಾಗಿ ಅಧಿಕಾರಿಗಳ ಡಿಸಿಇ ಕೀಯನ್ನ ಕೂಡ ಪೋರ್ಜರಿ ಮಾಡಿದ್ದಾನೆ. ಇದೇ ರೀತಿ ಹಲವು ಹಾಸ್ಟೆಲ್ಗಳ ಕಟ್ಟಡದ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಎಂದು ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ಹಣವನ್ನು ಲಪಟಾಯಿಸಿಕೊಂಡಿದ್ದಾನೆ.
ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಬಂದಂತಹ ಹಣದಲ್ಲಿ ಸ್ವಗ್ರಾಮ ನಾಗೇನಹಳ್ಳಿ 25 ಲಕ್ಷ ರೂ ವೆಚ್ಚದಲ್ಲಿ ಮನೆಯನ್ನ ಕಟ್ಟಿಸಿದ್ರೆ ಉಳಿದ ಹಣವನ್ನ ಇಸ್ಪೀಟ್ ಆಡಿ ಕಳೆದಿದ್ದಾನೆ. ಇನ್ನು ಇಲಾಖೆ ತನಿಖೆಯಲ್ಲಿ ಆಕ್ರಮ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಸ್ಪೆಂಡ್ ಕೂಡ ಮಾಡಲಾಗಿದೆ. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿ ಮಹದೇವಸ್ವಾಮಿ ರಾಮನಗರ ಸಿಇಎನ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಐಟಿ ಆಕ್ಟ್ 66, 66(ಸಿ) 66(ಡಿ) ಹಾಗೂ ಐಪಿಸಿ 406, 409, 417, 420, 465, 467, 468, 471 ರ ಅಡಿ ಪ್ರಕರಣ ದಾಖಲಿಸಿಕೊಂಡು ಮಂಜುನಾಥ್ನನ್ನ ಬಂಧಿಸಿ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ರಾಮನಗರ ಠೇವಣಿದಾರರಿಗೆ ದೋಖಾ, ಪಂಚವಟಿ ಮಲ್ಟಿಸ್ಟೇಟ್ ಕೋಅಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ ಭಾರೀ ವಂಚನೆ
ಇನ್ನು ಕಳೆದ ನಾಲ್ಕು ವರ್ಷಗಳಿಂದ ಸಾಮಾನ್ಯ ಅಡುಗೆ ಭಟ್ಟ ಲಕ್ಷಾಂತರ ರೂ ಹಣವನ್ನ ಪಂಗನಾಮ ಹಾಕಿದ್ರು, ಅಧಿಕಾರಿಗಳು ತಿಳಿಯದೆ ಇದ್ದಂತೆ ಇದ್ದಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿ ಮಂಜುನಾಥ್ಗೆ ಇಲಾಖೆಯ ಕೆಲ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಹಣದಾಸೆಗೆ ಅಧಿಕಾರಿಗಳ ಸಹಿಯನ್ನ ನಕಲಿ ಮಾಡಿ ಸರ್ಕಾರದ ಲಕ್ಷಾಂತರ ರೂ ಎಗರಿಸಿದ್ದಾನೆ. ಪೊಲೀಸರ ತನಿಖೆಯಿಂದ ಮತ್ತಷ್ಟು ಸತ್ಯಾಂಶ ಹೊರಬರಲಿದೆ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ