ಡಿಕೆ ಸಹೋದರರನ್ನು ಕಿರಾತಕ ಎಂದಿದ್ದಕ್ಕೆ ಇಕ್ಬಾಲ್ ಹುಸೇನ್ ಕಿಡಿ: ಜೆಡಿಎಸ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Mar 12, 2024 | 9:36 AM

ಡಿಕೆ ಸಹೋದರರನ್ನು ಕಿರಾತಕರು ಎಂದು ಕರೆದಿದ್ದಕ್ಕೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಮತ್ತು ಆ ಪಕ್ಷದ ನಾಯಕರ ವಿರುದ್ಧ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವಿರುದ್ಧ ಇಕ್ಬಾಲ್ ಹುಸೇನ್ ಮಾಡಿರುವ ವಾಗ್ದಾಳಿ, ಜೆಡಿಎಸ್ ನಾಯಕರಿಗೆ ಹಾಕಿರುವ ಸವಾಲುಗಳ ಮಾಹಿತಿ ಇಲ್ಲಿದೆ.

ಡಿಕೆ ಸಹೋದರರನ್ನು ಕಿರಾತಕ ಎಂದಿದ್ದಕ್ಕೆ ಇಕ್ಬಾಲ್ ಹುಸೇನ್ ಕಿಡಿ: ಜೆಡಿಎಸ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ
ಇಕ್ಬಾಲ್ ಹುಸೇನ್
Follow us on

ರಾಮನಗರ, ಮಾರ್ಚ್​ 12: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸಹೋದರರ ವಿರುದ್ಧ ‘ಕಿರಾತಕ’ ಪದ ಬಳಕೆ ಮಾಡಿದ್ದಕ್ಕೆ ರಾಮನಗರ ಕಾಂಗ್ರೆಸ್ (Congress) ಶಾಸಕ ಇಕ್ಬಾಲ್ ಹುಸೇನ್ (Iqbal Hussain) ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ನಮ್ಮ ನಾಯಕರು ಕಿರಾತಕರಲ್ಲ, ನೀವು ಕಿರಾತಕರು. ಆ‌ ಪದ‌ ನಿಮಗೆ ಅನ್ವಯಿಸುತ್ತದೆಯೇ ವಿನಃ ನಮ್ಮ ನಾಯಕರಿಗಲ್ಲ. ನಾನೋಬ್ಬ ಅಲ್ಪಸಂಖ್ಯಾತ, ಜನ ನನಗೆ ಪ್ರೀತಿ ಮತ್ತು ನೀತಿ ಮೇಲೆ‌ ಗೆಲ್ಲಿಸಿದ್ದಾರೆಯೇ ಹೊರತು ಜಾತಿ ನೋಡಿಯಲ್ಲ ಎಂದು ಜೆಡಿಎಸ್ (JDS) ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಹಳ್ಳಿಗಳಲ್ಲಿ‌ ನಡೆಯುತ್ತದೆ ಅಂತ ನೀವು ನಿಮ್ಮ ಚೇಲಾಗಳಿಗೆ ಹೇಳಿ ಕಿತಾಪತಿ ಮಾಡಬಹುದು. ಜನ ನನ್ನ ಕ್ಷೇತ್ರದಲ್ಲಿ ನೆಮ್ಮದಿಯಿಂದ ಇದ್ದಾರೆ. ಚುನಾವಣೆಯ ಬಳಿಕ ಪಕ್ಷ, ಜಾತಿ‌ ಭೇದ ಮರೆತು ಕೆಲಸ‌‌ಮಾಡುತ್ತಾ ಇದ್ದೇವೆ. ಬಹಳಷ್ಟು ನಾಯಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾ ಇದ್ದಾರೆ. ನಮ್ಮ ಕೆಲಸ, ನಮ್ಮ ಪ್ರೀತಿ, ವಿಶ್ವಾಸ ನೋಡಿ ಬರುತ್ತಾ ಇದ್ದಾರೆ ಎಂದು ಇಕ್ಬಾಲ್ ಹೇಳಿದರು.

ರಾಮನಗರದಲ್ಲಿ ಕಮಿಷನ್ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಹೆಚ್​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಹುಸೇನ್, ನಿಮ್ಮ ಸರಕಾರ ಇದ್ದಾಗ‌ ಏನೇನು ಮಾಡಿದ್ದೀರಿ ನೋಡಿದ್ದೇವೆ. ಪಿಡಿಓ ಮಟ್ಟದಲ್ಲಿ ಹಣದ ವವ್ಯಹಾರ ಮಾಡಿದ್ದೀರಿ. ಅಧಿಕಾರಿಗಳ ಜೊತೆ ಹೇಗೆ ನಡೆದುಕೊಂಡಿದ್ದೀರಿ ಎಂಬುದನ್ನು ಅಧಿಕಾರಿಗಳೇ ಹೇಳಿದ್ದಾರೆ. ಜಮೀನ್ದಾರರ ಮಕ್ಕಳು ನಾವು, ನಮಗೆ ಬೇಕಾದಷ್ಟು ದೇವರು ಕೊಟ್ಟಿದ್ದಾನೆ. ಒಂದು ಟೀ ನೂ ಕುಡಿದವರಲ್ಲ, ಮದ್ಯಪಾನ ಮಾಡಿದವರೂ ಅಲ್ಲ. ಕಮಿಷನ್ ಆರೋಪ ಒಂದೇ‌ ಒಂದು ಸಾಬೀತಾದರೆ ರಾಜಕಾರಣ ಬಿಟ್ಟು,‌ ನಿಮ್ಮ ಮುಖುನೂ ನೋಡಲ್ಲ ಎಂದು ಸವಾಲು ಹಾಕಿದರು.

ಜನ ಅವರ (ಜೆಡಿಎಸ್​​) ಸ್ಥಾನಮಾನ ಎಲ್ಲಿದೆ ಅಂತ ತೋರಿಸಿದ್ದಾರೆ. ಒಂದು ಕಾಲದಲ್ಲಿ‌ ಜನರು ಅವರಿಗೆ ಒಂದ್ ಸ್ಥಾನ ಕೊಟ್ಟಿದ್ದರು. ಜಾತಿಯೋ ಮತ್ತೊಂದೋ ಏನೋ, ದೇಶದಲ್ಲಿಯೂ ಒಂದು ಸ್ಥಾನ ಕೊಟ್ಟಿದ್ದರು. ನಿಮ್ಮ ಹತಾಶೆಯಿಂದ ಹೀಗೆ ಮಾತನಾಡುತ್ತಾ ಇದ್ದೀರಿ. ಜನಗಳ ಬಗ್ಗೆ ಆಲೋಚನೆ‌ ನಿಮಗಿಲ್ಲ, ‌ನಿಮ್ಮ ಹತಾಶೆ ಬಗ್ಗೆ ಆಲೋಚನೆ ಇದೆ. ಕಿರಾತಕರು, ಲೂಟಿಕೋರರು ಅಂತ ಪದ ಬಳಸುತ್ತೀರಲ್ಲವೇ ಅದೆಲ್ಲ ನಿಮ್ಮಲ್ಲಿ ಅಡಗಿರುವ ವಿಷ. ನಮ್ಮಲ್ಲಿ ಅದೆಲ್ಲಾ ಇಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಅಷ್ಟೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮಗೆ ರಾಜಕಾರಣದ ಬದುಕನ್ನು ತೋರಿಸಿದವರೇ ರಾಮನಗರದ ಜನ. ಈ ದೇಶಕ್ಕೆ,‌ ಈ ರಾಜ್ಯಕ್ಕೆ ರಾಜಕೀಯಕ್ಕೆ ಪರಿಚಯ ಮಾಡಿದವರೇ ರಾಮನಗರದ ಜನ. ಆದರೆ, ನೀವು ಸರಿಯಾದ ರೀತಿ ಮಾಡಲೇ ಇಲ್ಲ. ನೀವು ಅಧಿಕಾರ ಸಿಕ್ಕಿದಾಗ ತೋರಿಸಿರುವ ಅಹಂ ನಿಮ್ಮನ್ನು ತಿಂದು‌ ಹಾಕಿದೆ, ಬೇರೇನಿಲ್ಲ. ನಿಮ್ಮನ್ನು ಮುಖ್ಯಮಂತ್ರಿ ಮಾಡಿ ಅರ್ಕಾವತಿಯ ಕೊಳಕು ನೀರು ಕುಡಿಯಬೇಕಾ? ಬೆಂಗಳೂರು ಸ್ಯಾನಟಿರಿ ನೀರು ಫಿಲ್ಟರ್ ಮಾಡಿ ಕುಡಿಯಬೇಕು ಎನ್ನಲು ನಿಮಗೆ ಹುದ್ದೆ ಕೊಡಬೇಕಾ? ಮುಖ್ಯಮಂತ್ರಿ ಆಗಿ ಒಂದು ಸೈಟ್ ಕೊಡೋದಕ್ಕೆ ಆಗಿರಲಿಲ್ಲ. ನಿಮ್ಮ ಪೆನ್ನು ಪೇಪರ್ ಬಳಸಿ ರಾಮನಗರವನ್ನು ಮಾದರಿ ಮಾಡಬಹುದಾಗಿತ್ತು. ಒಂದೇ‌ ಒಂದು ರಸ್ತೆಯನ್ನೂ ಮಾಡಿಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್

ಅನಿತಾ ಕುಮಾರಸ್ವಾಮಿ ತಂದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಲ್ಲಿಗೆ ಬಂದು ಒಂದೇ ಒಂದು ಕೆಲಸ ತೋರಿಸಲಿ. ರಾಜಕಾರಣಕ್ಕೋಸ್ಕರ ಏನೇನೋ ಮಾತಾಡೋದಲ್ಲ. ರಾಜಕಾರಣಕ್ಕಾಗಿ ಯಾರನ್ನೋ ತಬ್ಕೊಂಡು, ಯಾರದ್ದೋ ಶಾಲು ಹಾಕಿಕೊಂಡಿದ್ದಾರೆ. ಬಿಜೆಪಿ ವಕ್ತಾರರಂತೆ ಮಾತನಾಡುತ್ತೀರಲ್ಲ, ನಿಮ್ಮ ಪಕ್ಷ, ನಿಮ್ಮ ಸಿದ್ಧಾಂತವನ್ನೇ ಮರೆತು ಬಿಟ್ಟದ್ದೀರಿ ಎಂದು ಕುಹಕವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ