ರಾಮನಗರ: ವೃದ್ಧಾಶ್ರಮದ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಲಾಗಿದೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ. ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ನಿರಾಶ್ರಿತರ ಮತ್ತು ವೃದ್ಧರ ಆಶ್ರಮದಲ್ಲಿ ಯುವತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಈ ಸಂಬಂಧ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು ತನಿಖೆಗೆ ಆಗ್ರಹಿಸಲಾಗಿದೆ.
ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರವೆಸಗಿ, ಬಲವಂತದ ಮದುವೆ ಮಾಡಿ ಮೂರು ತಿಂಗಳಗಳ ಕಾಲ ಆಶ್ರಮದಲ್ಲಿ ಇಟ್ಟುಕೊಂಡು ಕಿರುಕುಳ ನೀಡಲಾಗಿದೆ ಎಂದು ನೊಂದ ಯುವತಿ ಆರೋಪಿಸಿದ್ದಾರೆ. ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಯುವತಿಗೆ ಆಶ್ರಮದ ಮಾಲಕೀ ಪ್ರೀತಿ ಹಾಗೂ ಆಕೆಯ ಸ್ನೇಹಿತರಾದ ಸೌಮ್ಯ, ಯೋಗೇಶ್ ಕಿರುಕುಳ ನೀಡಿ ಚಿತ್ರಹಿಂಸೆ ಮಾಡಿದ್ದಾರಂತೆ. ಈ ಬಗ್ಗೆ ನೊಂದ ಯುವತಿ ರಾಮನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆಗೆ ಶರಣು!
ಅಣ್ಣ ಸ್ವಾಮಿ ಎಂಬಾತನ ಜೊತೆ ಜಗಳವಾಡಿಕೊಂಡು ಬಂದಿದ್ದ ಯುವತಿ, ಬಸ್ ನಿಲ್ದಾಣದಲ್ಲಿ ಇರುವುದನ್ನ ಕಂಡು ಆಶ್ರಯ ನೀಡುವುದಾಗಿ ಹೇಳಿ ಅಮ್ಮನ ಮಡಿಲು ಆಶ್ರಮದ ಮಾಲಕಿ ಪ್ರೀತಿ ಎಂಬುವವರು ಕರೆದುಕೊಂಡ ಹೋಗಿದ್ದಾರೆ. ಬಳಿಕ ಯೋಗೇಶ್ ಎಂಬಾತ ಯುವತಿಯ ಮುಗ್ಧತೆ ಬಳಸಿಕೊಂಡು ಕಾಮಕ್ಕೆ ಬಳಸಿಕೊಂಡಿದ್ದಾನೆ. ಆನಂತರ ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ ಎಂದು ನೊಂದ ಯುವತಿ ಆರೋಪಿಸಿದ್ದಾಳೆ.
ಇಂಜೆಕ್ಷನ್ ಕೊಟ್ಟು, ಎಳನೀರಿನಲ್ಲಿ ಮತ್ತು ಬರುವ ಪೌಡರ್ ಹಾಕಿ ಅತ್ಯಾಚಾರ ಎಸಗಲಾಗಿದೆ. ನಂತರ ಪ್ರೀತಿ, ಸೌಮ್ಯ, ಯೋಗೇಶ್ ಮೂವರು ಸೇರಿ ಕೆಂಗೇರಿ ಮೂಲದ ಚಂದ್ರಶೇಖರ್ ಜೊತೆ ಧರ್ಮಸ್ಥಳದಲ್ಲಿ ಮದುವೆ ಮಾಡಿಸಿದ್ದಾರೆ. ಬಳಿಕ ಆಶ್ರಮದಲ್ಲೇ ಫಸ್ಟ್ ನೈಟ್ ಮಾಡಿಸಲು ಈ ಮೂವರು ಮುಂದಾಗಿದ್ದು ಮೂರು ತಿಂಗಳಗಳ ಕಾಲ ಆಶ್ರಮದಿಂದ ಹೊರಬಿಡದೇ ಕಿರುಕುಳ ನೀಡಿದ್ದಾರೆ. ಅಣ್ಣನ ಬಳಿ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾಡಳಿತದಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ನಡೆಯುತ್ತಿದ್ದ ಅಮ್ಮನ ಮಡಿಲು ಆಶ್ರಮದಲ್ಲಿ ಕೆಲ ಯುವತಿಯರನ್ನ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ರಾಮನಗರ ಮಹಿಳಾ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ