ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಶುದ್ಧ ರಾಜಕೀಯ ಪಿತೂರಿ; ಸದನದಲ್ಲಿ ಸಚಿವ ಸುಧಾಕರ
ನೇರವಾಗಿ ಯುದ್ಧಕ್ಕೆ ಬಂದರೆ ಯುದ್ಧ ಮಾಡಬಹುದು. ಆದರೆ ಹಿಂದಿನಿಂದ ಬಂದು ಯುದ್ಧ ಮಾಡಿದರೆ ಏನು ಮಾಡಬೇಕು. ಕಾನೂನಿನಿಂದ ರಕ್ಷಣೆ ಪಡೆಯಲು ಇರುವ ಅವಕಾಶವನ್ನು ನಾವು ಉಪಯೋಗಿಸಿಕೊಂಡಿದ್ದೇವೆ. ಅದರಲ್ಲಿ ಯಾವ ತಪ್ಪಿದೆ?
ಬೆಂಗಳೂರು: ರಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣ ಶುದ್ಧ ರಾಜಕೀಯ ಪಿತೂರಿಯಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಏನನ್ನು ಬೇಕಾದರೂ ಮಾಡಬಹುದು. ಡೀಪ್ ವಿಡಿಯೋ ಮಾರ್ಫಿಂಗ್ ಎಂಬ ತಂತ್ರವಿದೆ. ಒಂದು ಫೋಟೊ ಇಟ್ಟುಕೊಂಡು ಏನು ಬೇಕಾದರೂ ಮಾಡಬಹುದು. ವಿಡಿಯೋ ಸುಳ್ಳು ಎಂದು ಖಚಿತವಾದರೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬೇಕಾದರೂ ಪ್ರಸಾರ ಮಾಡಿಕೊಳ್ಳಲಿ. ಆದರೆ ತನಿಖೆ ಆಗದೇ ನಕಲಿ ವಿಡಿಯೋವನ್ನು ಪ್ರಸಾರ ಮಾಡುವುದು ತಪ್ಪಾಗುತ್ತದೆ. ಎಲ್ಲರಿಗೂ ಅವರವರ ಗೌರವ ಅತ್ಯಂತ ಮುಖ್ಯವಾಗುತ್ತದೆ ಎಂದು ಡಾ. ಕೆ.ಸುಧಾಕರ್ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ಗೆ ಹೋದ ಕ್ರಮವನ್ನು ಸಮರ್ಥಿಸಿಕೊಂಡರು.
ಸಿಡಿ ಬಿಡುಗಡೆಯಂತಹ ಪ್ರಕರಣಗಳಲ್ಲಿ ಸಿಡಿಯಲ್ಲಿರುವ ಅಂಶವನ್ನು ಪ್ರಸಾರ ಮಾಡುವ ಮಾಧ್ಯಮಗಳದ್ದು ತಪ್ಪು ಎಂದು ಹೇಳಲಾಗುವುದಿಲ್ಲ. ಆಯಾ ಸಂದರ್ಭಕ್ಕೆ ಸಿಗುವ ವಿಷಯ ಇಟ್ಟುಕೊಂಡು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತವೆ. ಸುಪ್ರೀಂಕೋರ್ಟ್ ನ್ಯಾಯಾಧೀಶ ಸ್ವತಂತ್ರ ಕುಮಾರ್ ಅವರು ಸಹ ಈ ಕ್ರಮವನ್ನು ಅನುಸರಿಸಿದ್ದರು. ಕೋರ್ಟ್ಗೆ ಹೋಗುವುದೇ ತಪ್ಪು ಎಂದಾದರೆ ಈಗ ಅಸ್ತಿತ್ವದಲ್ಲಿರುವ ವ್ಯವಸ್ಥೆಯೇ ಸರಿಯಿಲ್ಲ ಎಂದಾಗುತ್ತದೆ ಎಂದು ಸುಧಾಕರ್ ಹೇಳಿದರು.
ಒಟ್ಟು 17 ಜನರ ವಿರುದ್ಧ ಪಿತೂರಿ ನಡೆಸಲು ವೇದಿಕೆ ಸಿದ್ಧವಾಗುತ್ತಿದೆ ಎಂದು ನಮ್ಮ ಹಿರಿಯ ನಾಯಕರು ಬಹಳ ಮೊದಲೇ ಸೂಚನೆ ನೀಡಿದ್ದರು. ನೇರವಾಗಿ ಯುದ್ಧಕ್ಕೆ ಬಂದರೆ ಯುದ್ಧ ಮಾಡಬಹುದು. ಆದರೆ ಹಿಂದಿನಿಂದ ಬಂದು ಯುದ್ಧ ಮಾಡಿದರೆ ಏನು ಮಾಡಬೇಕು. ಕಾನೂನಿನಿಂದ ರಕ್ಷಣೆ ಪಡೆಯಲು ಇರುವ ಅವಕಾಶವನ್ನು ನಾವು ಉಪಯೋಗಿಸಿಕೊಂಡಿದ್ದೇವೆ. ಅದರಲ್ಲಿ ಯಾವ ತಪ್ಪಿದೆ? ತಪ್ಪಿದ್ದರೆ ನಮ್ಮ ವ್ಯವಸ್ಥೆಯಲ್ಲಿಯೇ ತಪ್ಪಿದೆ ಎಂದು ಹೇಳಬಹುದು. ಕೊಲೆ ಪ್ರಕರಣಗಳನ್ನು ಹೊತ್ತಿರುವವರು ಸದನದಲ್ಲಿ ಮೌಲ್ಯಗಳ ಬಗ್ಗೆ ಹೇಳುತ್ತಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಆರೋಪ 6 ಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಇವರಿಂದ ಆ ಯುವತಿಗೆ ರಕ್ಷಣೆ ಕೊಡುವ ಕೆಲಸ ಆಗುತ್ತಿಲ್ಲ. ಪ್ರಕರಣ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ CD ಮಾಡುವ ಗ್ಯಾಂಗ್ ಇದೆ ಎಂದು ಹೇಳಿದ್ದಾರೆ. ಸಿಎಂಗೆ CD ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಈ ರೀತಿಯಾಗಿ ಬಿಜೆಪಿ ಶಾಸಕ ಯತ್ನಾಳ್ ಹೇಳುತ್ತಿದ್ದಾರೆ. ಈ ಕುರಿತು ಸಹ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ. ಇಲ್ಲದಿದ್ದರೆ ಇಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುವುದಿಲ್ಲ. ಈ ಪ್ರಕರಣದಲ್ಲಿ ಒಂದು ಒಳ್ಳೆಯ ಸಂದೇಶ ಹೋಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.ಕೋರ್ಟ್ಗೆ ಹೋದ 6 ಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಎಲ್ಲಾ 6 ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ‘ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆಯಾಗಲಿ‘; ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ
ಇದನ್ನೂ ಓದಿ: 1 ಸಿಡಿ ಅಲ್ಲ, ಎಲ್ಲಾ 19 ಸಿಡಿಗಳ ಬಗ್ಗೆಯೂ ತನಿಖೆ ಮಾಡುತ್ತೇವೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ