ತನ್ನ ಮೇಲಿನ ಸಿಡಿ ಹೊರಬಿದ್ದಾಗಿನಿಂದ ಮರೆಯಾಗಿದ್ದ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಇಂದು ಹೊರಬಿದ್ದು ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದರು. ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದವರ ವಿರುದ್ಧ ಹಗೆ ತೀರಿಸಿಕೊಳ್ಳುತ್ತೇನೆ ಎಂದು ತೊಡೆ ತಟ್ಟಿರುವ ಜಾರಕಿಹೊಳಿ ಈಗ ಮುಂದಿನ ಹೆಜ್ಜೆ ಇಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಜಾರಕಿಹೊಳಿ ದೆಹಲಿಯ ಪ್ರಮುಖ ವಕೀಲರನ್ನು ಸಂಪರ್ಕಿಸುತ್ತಿದ್ದಾರೆ.
ದೆಹಲಿ ವಕೀಲರು ಯಾಕೆ?
ಬೆಂಗಳೂರಿನಲ್ಲಿರುವ ತುಂಬಾ ಯಶಸ್ವಿ ವಕೀಲರು ಜಾರಕಿಹೊಳಿ ಕೇಸನ್ನು ನಡೆಸಲು ಸಿಗಬಹುದಿತ್ತು. ಏನು ತೊಂದರೆ ಆಗದು ಎಂಬ ವಿಚಾರ ಬರಬಹುದು. ಆದರೆ ಜಾರಕಿಹೊಳಿ ಅವರ ಲೆಕ್ಕಾಚಾರವೇ ಬೇರೆ. ತಮ್ಮ ನಡೆ ಹೇಗಿರಬೇಕು, ಕೇಸನ್ನು ಹೋರಾಟ ಮಾಡುವಾಗ ಯಾವ ರೀತಿ ಮುಂದುವರಿಯಬೇಕು, ಯಾವ ಥರದ ಕೇಸನ್ನು ಹಾಕಿದರೆ ಸೂಕ್ತ? ಇವೆಲ್ಲ ವಿಚಾರಗಳು ಯಾವುದೇ ಕಾರಣಕ್ಕೂ ಹೊರಬರಬಾರದು. ತಮ್ಮ ಮುಂದಿನ ನಡೆಯ ಮಾಹಿತಿ ಇಲ್ಲಿನ ವಕೀಲರ ಮೂಲಗಳಿಂದ ರಾಜಕೀಯ ವಿರೋಧಗಳಿಗೆ ಮತ್ತು ಈ ಸಿಡಿ ಮಾಡಿಸಿದವರಿಗೆ ಸಿಗಬಹುದು. ಆದ್ದರಿಂದ ದೆಹಲಿಯ ವಕೀಲರನ್ನು ರಮೇಶ್ ಜಾರಕಿಹೊಳಿ ಸಂಪರ್ಕಿಸಿ ಈ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾನನಷ್ಟ ಮೊಕದ್ದಮೆ ಅಥವಾ ಐಟಿ ಕಾಯ್ದೆಯಡಿ ಕೇಸು?
ಮೂಲಗಳು ಹೇಳುವ ಪ್ರಕಾರ ರಮೇಶ್ ಜಾರಕಿಹೊಳಿ ಮಾನನಷ್ಟ ಮೊಕದ್ದಮೆ ಹಾಕುವ ಹಂಬಲ ವ್ಯಕ್ತಪಡಿಸಿದ್ದಾರೆ. ಆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ. ಇನ್ನೊಂದು ವರದಿ ಪ್ರಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಪ್ರಕಾರ ಕೇಸು ದಾಖಲಿಸಿದರೆ, ಆಗ ಪೊಲೀಸರು ಇಡೀ ಜಾಲವನ್ನು ಭೇದಿಸಲೇಬೇಕಾಗುತ್ತದೆ. ಮಾನನಷ್ಟ ಮೊಕದ್ದಮೆ ಹಾಕಿದರೆ, ಪೊಲೀಸರ ಕೆಲಸ ಏನೂ ಇರುವುದಿಲ್ಲ. ಒಮ್ಮೆ ಕೇಸಿನ ಅವಧಿ ಹೆಚ್ಚು ಲಂಬಿಸಿದರೆ, ಜಾರಕಿಹೊಳಿ ಅವರಿಗೆ ನಷ್ಟ ಜಾಸ್ತಿ.
ಹೆಸರು ಹೇಳಲಿಚ್ಚಿಸದ ವಕೀಲರೊಬ್ಬರ ಪ್ರಕಾರ, ರಮೇಶ್ ಜಾರಕಿಹೊಳಿ, ಮಾನನಷ್ಟ ಮೊಕದ್ದಮೆ ಮತ್ತು ಐಟಿ ಕಾಯ್ದೆ; ಹೀಗೆ ಎರಡೂ ನಿಯಮಗಳಡಿ ಪ್ರಕರಣ ದಾಖಲಿಸಬಹುದಾಗಿದೆ. ಕಾನೂನಿನಲ್ಲಿ ಇದಕ್ಕೆ ಯಾವ ಅಡ್ಡಿ ಇಲ್ಲ. ಹಾಗಾಗಿ, ಮಾನನಷ್ಟ ಮೊಕದ್ದಮೆಯನ್ನು ಗೋಕಾಕಿನಲ್ಲಿಯೂ ಮತ್ತು ಐಟಿ ಕಾಯ್ದೆಯಡಿ ಕೇಸನ್ನು ಬೆಂಗಳೂರಿನಲ್ಲಿಯೂ ಅವರು ಮಾಡುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. ಒಂದೊಮ್ಮೆ ರಮೇಶ್ ಜಾರಕಿಹೊಳಿ ಸಿಬಿಐ ತನಿಖೆಗೆ ಒತ್ತಾಯಿಸಿ, ಅದನ್ನು ರಾಜ್ಯ ಸರಕಾರ ಒಪ್ಪಿಕೊಂಡರೆ ಆಗ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟವರಿಗೆ ಹಿನ್ನಡೆ ಆಗಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಇದನ್ನೂ ಓದಿ:
‘ಡಿಕೆಶಿ, ಹೆಬ್ಬಾಳ್ಕರ್, ರಮೇಶ್ ಮಧ್ಯೆ ಜಿದ್ದಾಜಿದ್ದಿ ಇತ್ತು; ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ’
Published On - 7:47 pm, Tue, 9 March 21