ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ವಿನಾಯ್ತಿ ನೀಡಬಾರದು, ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಲಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಂತೆ ಗಂಡನ ವಿರುದ್ಧವೇ ಹೆಂಡತಿ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಹಾಗಾಗಿ ಪತಿಗೆ ವಿನಾಯಿತಿ ಇದ್ದರೂ ಆತನ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಏನದು ಪ್ರಕರಣ: ಓಡಿಶಾ ಮೂಲದ ದಂಪತಿ ಬೆಂಗಳೂರಿನ ಸರ್ಜಾಪುರದಲ್ಲಿ ನೆಲೆಸಿದ್ದರು. 43 ವರ್ಷದ ಗಂಡ 27 ವರ್ಷದ ತನ್ನ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಲೈಂಗಿಕ ಗುಲಾಮಳಂತೆ ತನ್ನನ್ನು ಬಳಸಿಕೊಂಡಿದ್ದಾಗಿ ಗಂಡನ ವಿರುದ್ಧವೇ ಆಕೆ ಆರೋಪ ಮಾಡಿದ್ದರು. ಅಪ್ರಾಪ್ತ ಮಗಳ ಮೇಲೂ ಪತಿರಾಯ ಲೈಂಗಿಕ ದೌರ್ಜನ್ಯವೆಸಗಿದ್ದ. ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣಾ ನ್ಯಾಯಾಲಯ ಅತ್ಯಾಚಾರ ಆರೋಪ ಕೈಬಿಡಲು ನಿರಾಕರಿಸಿತ್ತು. ಅತ್ಯಾಚಾರ ಆರೋಪ ರದ್ದು ಕೋರಿ ಪತಿಯಿಂದ ಹೈಕೋರ್ಟ್ ಗೆ ಅರ್ಜಿಯೂ ಸಲ್ಲಿಕೆಯಾಗಿದೆ. ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂದು ವಾದ ಮಂಡಿಸಲಾಗಿದೆ. ಆದರೂ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ.
ಈ ತೊಳಲಾಟಗಳ ಸಮ್ಮುಖದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯ್ತಿ ರದ್ದು ಮಾಡುವುದೇ ಸೂಕ್ತವಾದೀತು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು. ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಇದು ಅಪರಾಧ. ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ಇಂಗ್ಲೆಂಡ್ ನಲ್ಲೂ ಪತಿಗಿರುವ ವಿನಾಯಿತಿ ತೆಗೆಯಲಾಗಿದೆ. ರೇಪ್ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದೂ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಈ ತೊಳಲಾಟಗಳ ಸಮ್ಮುಖದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯ್ತಿ ರದ್ದು ಮಾಡುವುದೇ ಸೂಕ್ತವಾದೀತು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು.ರೇಪ್ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದೂ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.