ಕೋಲಾರ: ಅದು ಪ್ರಪಂಚದಲ್ಲೇ ಎಲ್ಲೂ ಕಾಣಸಿಗದ ಅಪರೂಪದ ಬಾವಲಿ. ಅಂಥದೊಂದು ಪ್ರಭೇದ ಜಿಲ್ಲೆಯ ಕೆಲವು ಬೆಟ್ಟಗಳಲ್ಲಿ ಸಿಗುವ ಗುಹೆಗಳಲ್ಲಿ ನೋಡಬಹುದಾಗಿದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಪ್ರಪಂಚದಲ್ಲೇ ಎಲ್ಲೂ ಸಿಗದ ಎಲೆ ಮೂತಿ ಬಾವಲಿ ಚಿನ್ನದ ನಾಡಲ್ಲಿ ಪತ್ತೆ
ಪ್ರಪಂಚದಲ್ಲೇ ಅತಿ ಅಪರೂಪದ ಬಾವಲಿಯ ಪ್ರಭೇದವೊಂದು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಬಳಿಯಿರುವ ಬೆಟ್ಟಗಳಲ್ಲಿ ಪತ್ತೆಯಾಗಿದೆ. ಅಪರೂಪದ ಬಾವಲಿಯ ಪ್ರಭೇದಗಳಲ್ಲಿ ಒಂದಾಗಿರುವ ಈ ಎಲೆ ಮೂತಿ ಬಾವಲಿಗಳ ಗುಂಪು ಹನುಮನಹಳ್ಳಿಯ ಬೋಡಬಂಡೆಯಲ್ಲಿ ಕಂಡು ಬಂದಿವೆ. ಈ ಬಗ್ಗೆ, ಆಂಧ್ರ ಪ್ರದೇಶದ ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ.ಚೆಲ್ಲಮಲ್ಲ ಶ್ರೀನಿವಾಸುಲು ಮತ್ತು ಅವರ ತಂಡದ ಸಂಶೋಧನೆಯಿಂದ ತಿಳಿದುಬಂದಿದೆ. ಪ್ರೊಫೆಸರ್ ಶ್ರೀನಿವಾಸುಲು ಹಾಗೂ ಅವರ ಸಂಶೋಧಕರು ಜಿಲ್ಲೆಯ ವಿವಿಧೆಡೆ ಪ್ರವಾಸ ಮಾಡಿ ಹನುಮನಹಳ್ಳಿಯ ಗುಹೆಗಳಲ್ಲಿ ಈ ಹೊಸ ಪ್ರಭೇದವನ್ನು ಪತ್ತೆಹಚ್ಚಿದ್ದಾರೆ.
ಅಳಿವಿನ ಅಂಚು ತಲುಪಿರುವ ಬಾವಲಿಯ ರಕ್ಷಣೆಗೆ ನಿಂತ ಜಿಲ್ಲಾಡಳಿತ, ಅರಣ್ಯ ಇಲಾಖೆ
ಪ್ರಪಂಚದ 1,200 ಬಾವಲಿ ಪ್ರಭೇದಗಳ ಪೈಕಿ ಕಣ್ಮರೆಯಾಗುತ್ತಿರುವ ಎಲೆ ಮೂತಿಯ ಬಾವಲಿಯ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಹನುಮನಹಳ್ಳಿಯ ಸುತ್ತಮುತ್ತಲಿನ 110 ಎಕರೆ ಬೆಟ್ಟದ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಜೀವ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಹೀಗಾಗಿ, ಅಲ್ಲಿ ಗಣಿಗಾರಿಕೆ ಸೇರಿದಂತೆ ಪ್ರಕೃತಿಗೆ ಹಾನಿ ಮಾಡಬಲ್ಲ ಯಾವುದೇ ಕೆಲಸವನ್ನು ಮಾಡದಂತೆ ಅರಣ್ಯ ಇಲಾಖೆ ಅದೇಶಿಸಿದೆ. ಹಾಗಾಗಿ, ಈ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾಹಿತಿ ನೀಡಿದರು.
ಬಾವಲಿಗೆ ಈ ಹೆಸರು ಹೇಗೆ ಬಂತು?
ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರೊ.ಶ್ರೀನಿವಾಸುಲು ಹಾಗೂ ತಂಡ ಕಳೆದ ಕೆಲವು ವರ್ಷಗಳ ಹಿಂದೆ ಹನುಮನಹಳ್ಳಿಯ ಬೋಡಬಂಡೆಯಲ್ಲಿ ಬೀಡು ಬಿಟ್ಟು ಎಲೆ ಮೂತಿ ಬಾವಲಿಗಳ ಬಗ್ಗೆ ಸಂಶೋಧನೆ ನಡೆಸಿತ್ತು. ನಂತರ ಈ ಬಾವಲಿ ಪ್ರಭೇದವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು.
ಅಷ್ಟಕ್ಕೆ ಸುಮ್ಮನಾಗದ ಇವರು ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಅವರಿಗೆ ಈ ಬಾವಲಿ ಪ್ರಭೇದದ ಮಹತ್ವವನ್ನು ತಿಳಿಸಿ ಅದನ್ನು ಸಂರಕ್ಷಿಸುವಂತೆ ಅರಿವು ಮೂಡಿಸಿದ್ರು. ಇದೆಲ್ಲದರ ಪರಿಣಾಮವಾಗಿ ಇಂದು ಸರ್ಕಾರವೇ ಈ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಣೆ ಮಾಡಿ ಎಲೆ ಮೂತಿ ಬಾವಲಿಗಳ ಸಂರಕ್ಷಣೆಗೆ ಮುಂದಾಗಿರುವುದು ಪ್ರಾಣಿ ಪ್ರಿಯ ಹಾಗೂ ಅರಣ್ಯ ಪರಿಪಾಲಕ ತ್ಯಾಗರಾಜ್ರಲ್ಲಿ ಅತೀವ ಸಂತಸವನ್ನು ಮೂಡಿಸಿದೆ. ಇನ್ನು, ಈ ಬಾವಲಿಗಳ ಮೂತಿ ಹಾಗೂ ಕಿವಿಗಳು ಎಲೆಯಾಕಾರದಲ್ಲಿ ಇರುವ ಕಾರಣ ಈ ಪ್ರಭೇದವನ್ನು ಎಲೆ ಮೂತಿ ಬಾವಲಿ ಅಥವಾ ಲೀಫ್ ಮೌತ್ ಬ್ಯಾಟ್ ಎಂದು ಕರೆಯಲಾಗುತ್ತದೆ.
ಜಿಲ್ಲೆಗೆ ಹೆಸರು ತಂದುಕೊಟ್ಟ ಎಲೆ ಮೂತಿ ಬಾವಲಿ
ಹಲವು ವಿಶೇಷಗಳ ಮೂಲಕ ಪ್ರಪಂಚದಲ್ಲಿ ಹೆಸರು ಮಾಡಿರುವ ಜಿಲ್ಲೆ ಈಗ ವಿಶೇಷವಾದ ಎಲೆ ಮೂತಿ ಬಾವಲಿಗಳ ಪ್ರಭೇದದ ಮೂಲಕ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ ಎಂಬುವುದು ಹೆಮ್ಮೆಯ ವಿಚಾರ. ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಬಾವಲಿಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವುದು ಸಂತಸದ ವಿಷಯ.
-ರಾಜೇಂದ್ರ ಸಿಂಹ
ಏನಿದು ವಾಟ್ಸಾಪ್ ಹೊಸ ಪಾಲಿಸಿ? ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಆಗೋದು ಇನ್ನೂ ಸುಲಭ!