ಬೆಂಗಳೂರು: ಹಾಡಹಗಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ನೆತ್ತರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಸದ್ಯ ಕೊಲೆಗೆ ಮಾಡಲಾಗಿದ್ದ ರೋಚಕ ಪ್ಲಾನ್ನ ಎಲೆ ಎಲೆಯಾಗಿ ನಾವು ಇಲ್ಲಿ ವಿವರಿಸುತ್ತಿದ್ದೇವೆ. ಆರೋಪಿಗಳ ಒಂದೊಂದು ಹೆಜ್ಜೆ ಹೇಗಿತ್ತು? ಎಸ್ಕೇಪ್ ಆದಾಗಿನಿಂದ ಬಂಧನದ ವರೆಗಿನ ಆರೋಪಿಗಳ ಚಲನವಲನ, ಆರೋಪಿಗಳು ಕೊಲೆ ಮಾಡಿದ ನಂತರ ಎಲ್ಲೆಲ್ಲಿ ರೌಂಡ್ಸ್ ಹಾಕಿದ್ರು? ಘಟನೆ ನಡೆದ 24 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಹೇಗೆ ಎಂಬ ರೋಚಕ ಕಹಾನಿ ನಿಮ್ಮ ಮುಂದೆ.
ರೇಖಾರನ್ನು ಕೊಂದು ಕದಿರೇಶ್ರಿಗೆ ಜೈಕಾರ ಹಾಕಿದ ಆರೋಪಿಗಳು
ಜೂನ್ 24ರಂದು ಬೆಳಗ್ಗೆ 10-10.25ರ ಸಮಯದಲ್ಲಿ ಬಿಬಿಎಂಪಿ ವರ್ಡ್ನ ನಂ.138ರ ಛಲವಾದಿ ಪಾಳ್ಯದ ಅಂಜನಪ್ಪ ಗಾರ್ಡನ್ ರೇಖಾ ಕದಿರೇಶ್ ತಮ್ಮ ಕಚೇರಿ ಮುಂಭಾಗ ಆಹಾರ ವಸ್ತು ವಿತರಣೆ ಮಾಡುತ್ತಿರುವಾಗ 17 ಬಾರಿ ಕೊಚ್ಚಿ ರೇಖಾಳ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪೀಟರ್, ಸೂರ್ಯ, ಸ್ಟೀಫನ್, ಅಜಯ್ ಮತ್ತು ಪುರುಷೋತ್ತಮ್ನನ್ನು ಬಂಧಿಸಲಾಗಿದ್ದು ಮೃತ ಕದಿರೇಸ್ ಸಹೋದರಿ ಮಾಲಾಳ ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಆರೋಪಿಗಳು ರೇಖಾಳನ್ನು ಕೊಂದು ಕದಿರೇಶ್ಗೆ ಜೈಕಾರ ಹಾಕಿದ್ದರು. ಏಕೆಂದರೆ ಮಾಲಾ, ಕದಿರೇಶ್ನನ್ನು ಕೊಲೆ ಮಾಡಿಸಿದ್ದು ರೇಖಾ ಎಂದು ಪೀಟರ್ಗೆ ನಂಬಿಸಿದ್ದಳು. ಆ ಸೇಡಿನಿಂದಲೇ ರೇಖಾಳ ಕೊಲೆ ಮಾಡಿ ಕದಿರೇಶ್ಗೆ ಜೈಕಾರ ಹಾಕಿ ಐವರು ಆರೋಪಿಗಳು ಆಟೋ ಹತ್ತಿ ಸ್ಥಳದಿಂದ ಪರಾರಿಯಾಗಿದ್ದರು.
ಮೊಬೈಲ್ಗಳನ್ನು ಬಿಸಾಡಿ ಖಾಲಿ ಕೈಯಲ್ಲಿ ಪ್ರಯಾಣ
ಡಿಸೋಜಾ ಎಂಬುವನ ಆಟೋದಲ್ಲಿ ಹಂತಕರು ಎಸ್ಕೇಪ್ ಆಗಿದ್ರು. ತಮ್ಮೆಲ್ಲ ಮೊಬೈಲ್ಗಳನ್ನ ಬಿಸಾಡಿ ಖಾಲಿ ಕೈಯಲ್ಲಿ ಪ್ರಯಾಣ ಬೆಳೆಸಿದ್ರು. ಸ್ವಲ್ಪ ದೂರ ಹೋಗ್ತಾ ಇದ್ದಂತೆ ಎರಡು ಗುಂಪುಗಳಾಗಿ ಪೀಟರ್ ಮತ್ತು ಸೂರ್ಯ ಒಂದು ಗುಂಪಾಗಿ ಎಸ್ಕೇಪ್ ಆಗಲು ಯತ್ನಿಸಿದ್ರು. ಹಾಗೂ ಅಜಯ್, ಸ್ಟೀಫನ್, ಪುರುಷೋತ್ತಮ್ ಮತ್ತೊಂದು ಕಡೆ ಪರಾರಿ ಆಗ್ತಿದ್ರು. ಪೀಟರ್ ಮತ್ತು ಸೂರ್ಯ ಡಿಸೋಜಾ ಆಟೋದಲ್ಲೇ ಮೊದಲು ಚಾಲಕನ ಸ್ಯಾಟಲೈಟ್ನಲ್ಲಿರುವ ಮನೆಗೆ ಹೋಗಿ ಡಿಸೋಜಾ ಮನೆಯಿಂದ ನಾಯಂಡಳ್ಳಿ ಕಡೆಗೆ ಹೊರಟಿದ್ದರು. ನಾಯಂಡಳ್ಳಿಯಿಂದ ಮತ್ತೆ ಆಟೋದಲ್ಲಿಯೇ ಬನಶಂಕರಿ ಕಡೆ ಪ್ರಯಾಣ ಬೆಳೆಸಿ ಅಲ್ಲಿ ಲೂದಿ ಎನ್ನುವವರ ಮನೆಗೆ ಹೋಗಿ ಕೆಲ ಹೊತ್ತು ಆಶ್ರಯ ಪಡೆದಿದ್ದರು. ಅಲ್ಲಿಂದ ಮತ್ತೆ ಆಸ್ಟಿಂಗ್ ಟೌನ್ಗೆ ಬಂದು. ಅಲ್ಲಿಂದ ಮತ್ತೆ ಎಲೆಕ್ಟ್ರಾನಿಕ್ ಸಿಟಿ ಕಡೆ ತೆರಳಿದ್ದಾರೆ. ಅಲ್ಲಿಂದ ತಮಿಳುನಾಡಿಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ತಮಿಳುನಾಡು ಎಂಟ್ರಿ ಅಷ್ಟು ಸುಲಭವಾಗಲಿಲ್ಲ. ಎಲೆಕ್ಟ್ರಾನಿಕ್ ಸಿಟಿ ಯಿಂದ ಮತ್ತೆ ಹುಸ್ಕೂರ್ನತ್ತ ಅದೇ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ.
ಆ ಒಂದು ಕರೆಯಿಂದ ಸಿಕ್ಕಿ ಬಿದ್ದ ಆರೋಪಿಗಳು
ಪೀಟರ್ ಹುಸ್ಕೂರ್ನಿಂದ ವ್ಯಕ್ತಿಯೋರ್ವನ ಮೊಬೈಲ್ ಪಡೆದು ರೌಡಿಶೀಟರ್ ಓರ್ವನಿಗೆ ಕರೆ ಮಾಡಿದ್ದ. ಆದ್ರೆ ಈ ವೇಳೆ ಕರೆ ಸ್ವೀಕರಿಸಿದ ರೌಡಿಶೀಟರ್ ಆಗಾಗಲೇ ಪೊಲೀಸರ ವಶದಲ್ಲಿದ್ದ. ಪೊಲೀಸರು ರಾತ್ರೋ ರಾತ್ರಿ ಠಾಣೆಗೆ 39 ಜನರನ್ನ ಕರೆಸಿ ವಿಚಾರಣೆ ಮಾಡಿದ್ದರು. ರೌಡಿಶೀಟರ್ ಪೊಲೀಸರ ವಶದಲ್ಲಿರುವಾಗಲೇ ಪೀಟರ್ ಅತನಿಗೆ ಕರೆ ಮಾಡಿದ್ದ. ಇದರಿಂದ ಹಂತಕರನ್ನು ಹಿಡಿಯಲು ಪೊಲೀಸರಿಗೆ ಸಹಾಯವಾಗಿತ್ತು.
ಕರೆ ಬಂದ ನಂಬರ್ ನೆಟ್ ವರ್ಕ್ ನಿರಂತರವಾಗಿ ಟ್ರೇಸ್ ಮಾಡಿದ ಪೊಲೀಸರು ಅಲ್ಲಿಗೆ ಹೋಗಿ ಸೆರೆ ಹಿಡಿಯಲು ಅಷ್ಟು ಸಮಯವಿಲ್ಲದ ಕಾರಣ ಸೆಂಟ್ರಲ್ ರೇಂಜ್ ಐಜಿಪಿ ಚಂದ್ರಶೇಖರ್ ಸಹಾಯವನ್ನು ಪಡೆದ್ರು. ಜಿಪಿ ಚಂದ್ರಶೇಖರ್ಗೆ ಮಾಹಿತಿ ನೀಡಿ ಈ ಭಾಗದಿಂದ ಆರೋಪಿಗಳು ಎಲ್ಲೂ ಹೋಗದಂತೆ ತಡೆಯುವಂತೆ ಮನವಿ ಮಾಡಿದ್ದಾರೆ. ಅದರಂತೆ ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ನಂತರ ಬೆಂಗಳೂರಿನಿಂದ ತನಿಖಾ ತಂಡ ಹುಸ್ಕೂರಿಗೆ ತೆರಳುತ್ತೆ. ಅಲ್ಲಿಂದ ಆರೋಪಿಗಳು ಬೇರೆ ಕಡೆ ತೆರಳಲು ಮುಂದಾಗುತ್ತಾರೆ. ಆರೋಪಿಗಳಿಗೂ ಪೊಲೀಸರು 6 ನಿಮಿಷದ ಅಂತರವಿರುತ್ತೆ. ಒಂದು ಜಾಗಕ್ಕೆ ಹೋಗುವಷ್ಟರಲ್ಲಿ ಆರೋಪಿಗಳು 6 ನಿಮಿಷ ಮುಂಚಿತವಾಗಿ ಎಸ್ಕೇಪ್ ಆಗ್ತಿದ್ರು. ಸಿಟಿಯಲ್ಲೇ ಆರೋಪಿಗಳು ಆಟೋದಲ್ಲಿ ರೌಂಡ್ಸ್ ಹಾಕೋದು ಗೊತ್ತಾಗಿದೆ. ನಂತರ ಮಾಗಡಿ ರೋಡ್ ಇನ್ಸ್ ಪೆಕ್ಟರ್ ಶ್ರೀನಿವಾಸ್ನನ್ನ ಟಿಎಂಸಿಗೆ ಕಳುಹಿಸಲಾಗುತ್ತೆ. ಅಲ್ಲಿ ರಸ್ತೆಯಲ್ಲಿನ ಆಟೋ ಸಂಚಾರವನ್ನು ವಾಚ್ ಮಾಡಲು ಸೂಚಿಸಲಾಗಿತ್ತು. ಆಟೋ ಸಂಚಾರ ಅನ್ನು ವಾಚ್ ಮಾಡಿದ ಶ್ರೀನಿವಾಸ್, ಅದನ್ನು ತನಿಕಾಧಿಕಾರಿಗೆ ಕ್ಷಣ ಕ್ಷಣಕ್ಕೂ ಅಪ್ಡೇಟ್ ನೀಡಿದ್ರು.
ಈ ವೇಳೆ ಆರೋಪಿಗಳು ಮಾಗಡಿ ರೋಡ್ ಮೂಲಕ ಪಾಸ್ ಆಗ್ತಾ ಇದ್ದದ್ದು ಗೊತ್ತಾಗಿದೆ. ಒಂದು ಕಡೆ ಆರೋಪಿಗಳನ್ನು ಇಳಿಸಿ ಬಂದಿದ್ದ ಆಟೋ ಚಾಲಕ ಡಿಸೋಜಾ ಇಬ್ಬರನ್ನು ಇಳಿಸಿ ಆಟೋಗೆ ಗ್ಯಾಸ್ ತುಂಬಿಸಲು ಬಂದಿದ್ದ. ಈ ವೇಳೆ ಆರೋಪಿಗಳ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಪೀಟರ್, ಸೂರ್ಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆಗಡುಕರ ಪತ್ತೆಗೆ 6 ತಂಡ ರಚಿಸಿದ್ದ ಪೊಲೀಸರು: ರಾತ್ರಿಯಿಡೀ ಆರೋಪಿಗಳ ಬೆನ್ನುಬಿದ್ದು ಹುಡುಕಿದ್ದರು