ಕಲಬುರಗಿಯಲ್ಲಿ ಭೂಕಂಪನ ಅನುಭವ; 5 ಸೆಕೆಂಡ್ ಕಾಲ ಭಾರಿ ಶಬ್ದ
ಮುಂಜಾನೆ 6.30ಕ್ಕೆ ಭೂಮಿಯಿಂದ ನಾಲ್ಕೈದು ಸೆಕೆಂಡ್ ಕಾಲ ಭಾರಿ ಶಬ್ದ ಕೇಳಿಬಂದಿದೆ. ಜನರಿಗೆ ಭೂಕಂಪನದ ಅನುಭವವಾಗಿದೆ. ಮಳೆಯಿಂದ ನೆನೆದಿದ್ದ ಕೆಲ ಮನೆಗಳ ಗೋಡೆಗಳು, ಸದ್ದಿಗೆ ಗೋಡೆಯ ಮಣ್ಣು ಕುಸಿದಿದೆ.
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಜನರು ಕಳೆದ ಕೆಲ ವರ್ಷಗಳಿಂದ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೆಲ ದಿನಗಳ ಕಾಲ ಸಮಸ್ಯೆ ನಿವಾರಣೆಯಾಗಿದೆ ಅಂತ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೇಳಿ ಬರುವ ಭಾರಿ ಸದ್ದು ಜನರ ಎದೆ ಬಡಿತವನ್ನು ಮತ್ತೆ ಹೆಚ್ಚಿಸುತ್ತಿದೆ. ಹೀಗಾಗಿ ಭಯ, ಆತಂಕದಲ್ಲಿಯೇ ಗ್ರಾಮದ ಜನರು ಕಳೆದ ಕೆಲ ವರ್ಷಗಳಿಂದ ಕಾಲ ಕಳೆಯುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ನೆಮ್ಮದಿಯಿಂದ ನಿದ್ದೆ ಮಾಡಿದ್ದ ಜನರು, ಇಂದು (ಜೂನ್ 27) ಬೆಳ್ಳಂಬೆಳಗ್ಗೆ ಭೂಮಿಯಿಂದ ಬಂದ ಭಾರಿ ಶಬ್ದಕ್ಕೆ ಮತ್ತೆ ಬೆಚ್ಚಿಬಿದ್ದಿದ್ದಾರೆ.
ಮುಂಜಾನೆ 6.30ಕ್ಕೆ ಭೂಮಿಯಿಂದ ನಾಲ್ಕೈದು ಸೆಕೆಂಡ್ ಕಾಲ ಭಾರಿ ಶಬ್ದ ಕೇಳಿಬಂದಿದೆ. ಜನರಿಗೆ ಭೂಕಂಪನದ ಅನುಭವವಾಗಿದೆ. ಮಳೆಯಿಂದ ನೆನೆದಿದ್ದ ಕೆಲ ಮನೆಗಳ ಗೋಡೆಗಳು, ಸದ್ದಿಗೆ ಗೋಡೆಯ ಮಣ್ಣು ಕುಸಿದಿದೆ.
ಪದೇ ಪದೇ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭೂಕಂಪನದ ರೀತಿ ಸದ್ದು ಕೇಳಿ ಬರುತ್ತಿದೆ. ಕಳೆದ ಜನವರಿ, ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಅನೇಕ ಭಾರಿ ಸದ್ದು ಕೇಳಿ ಬಂದಿತ್ತು. ಆದರೆ ಕಳೆದ ಎರಡ್ಮೂರು ತಿಂಗಳಿಂದ ಶಬ್ದದ ಆತಂಕ ಕಡಿಮೆಯಾಗಿತ್ತು. ಸದ್ದಿನ ಆತಂಕ ಕಡಿಮೆಯಾಗಿದೆ ಅಂತ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಭೂಮಿಯಿಂದ ಬಂದ ಭಾರಿ ಸದ್ದಿಗೆ ಗ್ರಾಮದ ಜನರು ಭಯಗೊಂಡಿದ್ದಾರೆ. ಪ್ರತಿ ಭಾರಿ ಭೂಮಿಯಿಂದ ಸದ್ದು ಬಂದಾಗ ಜನರಿಗೆ ಭೂ ಕಂಪನದ ಅನುಭವವಾಗುತ್ತಿದೆ. ಆದರೆ ಎಲ್ಲಿಯೂ ಕೂಡಾ ಭೂಕಂಪನ ಆಗಿರುವ ಬಗ್ಗೆ ಯಾವುದೇ ಭೂಕಂಪನ ಕೇಂದ್ರಗಳಲ್ಲಿ ದಾಖಲಾಗಿಲ್ಲ.
ಗಡಿಕೇಶ್ವರ ಗ್ರಾಮದಲ್ಲಿದೆ ದಶಕದ ಸಮಸ್ಯೆ ಭೂಮಿಯಿಂದ ಸದ್ದು ಕೇಳಿ ಬರುತ್ತಿರುವ ಈ ಸಮಸ್ಯೆ ಇದೇ ಮೊದಲೇನಲ್ಲ. 2005ರಿಂದ ಈ ರೀತಿಯ ಸದ್ದು ಕೇಳಿ ಬರುತ್ತಲೇ ಇದೆ. ಕೆಲ ವರ್ಷಗಳ ಕಾಲ ಸದ್ದು ನಿಂತಿತ್ತು. ಆದರೆ 2016 ರಲ್ಲಿ ಕೂಡಾ ಇದೇ ರೀತಿ ಚಿಂಚೋಳಿ ತಾಲೂಕಿನ ಇಂದ್ರಪಾಡ ಹೊಸಳ್ಳಿ, ಗಡಿಕೇಶ್ವರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಾರಗಳ ಕಾಲ ಭೂಮಿಯಿಂದ ಭಾರಿ ಪ್ರಮಾಣದ ಸದ್ದು ಕೇಳಿ ಬಂದಿತ್ತು. ಪ್ರತಿನಿತ್ಯ ಭೂಮಿಯಿಂದ ಐದಾರು ಭಾರಿ ಸ್ಟೋಟದ ರೀತಿಯ ಶಬ್ದ ಭೂಮಿಯಿಂದ ಬರುತ್ತಿತ್ತು. ಆಗ ಅನೇಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದರು. ವಿಶೇಷವೆಂದರೆ ಈ ಬಾರಿ ಹೆಚ್ಚಿನ ಸದ್ದು ಕೇಳಿ ಬರುತ್ತಿರುವುದು ಕೇವಲ ಗಡಿಕೇಶ್ವರ ಗ್ರಾಮದಲ್ಲಿ ಮಾತ್ರ.
ಚಿಂಚೋಳಿ ಸೇರಿದಂತೆ ಕಲಬುರಗಿ ಜಿಲ್ಲೆಯ ಅನೇಕ ಕಡೆ ಭೂಮಿಯೊಳಗೆ ಸುಣ್ಣದ ಕಲ್ಲಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಭೂಮಿಯೊಳಗಿನ ಸುಣ್ಣದ ಕಲ್ಲಿನ ಮೇಲೆ ನೀರು ಬಿದ್ದಾಗ ಈ ರೀತಿಯ ಸದ್ದು ಬರುತ್ತದೆ. ಈ ಬಗ್ಗೆ ಅನೇಕ ಬಾರಿ ನಮ್ಮ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಜನರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮೋಹನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ
ಕೊಪ್ಪಳದಲ್ಲಿ 758 ಅಪೌಷ್ಟಿಕ ಮಕ್ಕಳನ್ನ ಗುರುತಿಸಲಾಗಿದೆ; ಜಿಲ್ಲಾ ಪಂಚಾಯತಿ ಸಿಇಒ ರಘುನಂದನ್ ಮೂರ್ತಿ
(Loud Noise was heard for 5 seconds in kalaburagi and It is an earthquake experience for people)
Published On - 11:51 am, Sun, 27 June 21