ಬೆಂಗಳೂರು, ಜೂನ್ 12: ಇಡೀ ಕರುನಾಡೇ ಬೆಚ್ಚಿಬಿದ್ದಿದೆ. ಅಭಿಮಾನಿಗಳು ಶಾಕ್ ಆಗಿದ್ದಾರೆ. ಮಹಿಳೆಯರಂಥೂ ಅಯ್ಯೋ ಪಾಪ ಅಂತಿದ್ದಾರೆ. ಅಷ್ಟಕ್ಕೂ ಜೂನ್ 8 ರಂದು ಚಿತ್ರದುರ್ಗದ ರೇಣುಕಸ್ವಾಮಿ (Renukaswamy) ಬೆಂಗಳೂರಿನ ಪಟ್ಟಣಗೆರೆಯಲ್ಲಿರೋ ಜಯಣ್ಣ ಅನ್ನೋರನ ಶೆಡ್‌ನಲ್ಲಿ ಭೀಕರವಾಗಿ ಕೊಲೆ ಆಗಿದ್ದ. ಇದೇ ಕೇಸ್‌ನಲ್ಲಿ ನಟ ದರ್ಶನ್ (Darshan), ಆಪ್ತೆ ಪವಿತ್ರಗೌಡ ಸೇರಿದಂತೆ 13 ಆರೋಪಿಗಳನ್ನ ನಿನ್ನೆ ಬಂಧಿಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 6 ದಿನ ಕಸ್ಟಡಿಗೆ ಪಡೆದಿದ್ದಾರೆ. ಇವತ್ತು ಮಧ್ಯಾಹ್ನದ ಬಳಿಕ ಎಲ್ಲಾ 13 ಆರೋಪಿಗಳನ್ನ ಶೆಡ್‌ಗೆ ಕರೆತಂದು ಸ್ಥಳ ಮಹಜರು ಮಾಡಿದ್ದಾರೆ.
ದರ್ಶನ್ ಸೇರಿದಂತೆ 13 ಆರೋಪಿಗಳನ್ನ ಸ್ಪಾಟ್‌ಗೆ ಕರೆತಂದಿದ್ದ ಪೊಲೀಸರು, ರೇಣುಕಾಸ್ವಾಮಿ ಮೇಲೆ ಹಲ್ಲೆಮಾಡಿ ಕೊಲೆಗೈದ ಜಾಗ ಯಾವುದು? ಪಟ್ಟಣಗೆರೆ ಶೆಡ್‌ಗೆ ಯಾರ್ಯಾರು ಎಷ್ಟು ಗಂಟೆಗೆ ಬಂದಿದ್ರು? ರೇಣುಕಾಸ್ವಾಮಿ ಹತ್ಯೆಗೆ ಬಳಸಿದ ವಸ್ತುಗಳು ಯಾವುವು? ಅಂತಾ ಪ್ರತಿಯೊಬ್ಬ ಆರೋಪಿಗೆ ಪ್ರಶ್ನೆ ಮಾಡಿ ಮಾಹಿತಿ ಸಂಗ್ರಹಿಸಿದ್ರು. ಶೆಡ್‌ನೊಳಗೆ ಒಬ್ಬೊಬ್ಬರನ್ನಾಗೇ ಆರೋಪಿಗಳನ್ನ ಕರೆದೊಯ್ದ ಪೊಲೀಸರು ಪ್ರತ್ಯೇಕವಾಗಿ ಹೇಳಿಕೆ ದಾಖಲಿಸಿದ್ದಾರೆ. ಮಹಜರು ಪ್ರಕ್ರಿಯೆಯನ್ನ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಮಹಜರು ವೇಳೆ ದರ್ಶನ್ ಗೆಳತಿ ಪವಿತ್ರಾಗೌಡ ಕಣ್ಣೀರಿಟ್ಟಿದ್ದಾಳೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಹತ್ಯೆ ಕೇಸ್; ಕೊಲೆ ಸ್ಪಾಟ್ನಲ್ಲಿ ಸಿಕ್ತಾ ಸ್ಟ್ರಾಂಗ್ ಎವಿಡನ್ಸ್?
ಇನ್ನು ಎಫ್‌ಎಸ್‌ಎಲ್ ಟೀಂ ಕೂಡಾ ಶೆಡ್‌ಗೆ ಎಂಟ್ರಿಯಾಗಿ ಎಲ್ಲಾ ಕಡೆ ಪರಿಶೀಲಿಸಿದೆ. ರಕ್ತದ ಕಲೆ, ಹತ್ಯೆಗೆ ಬಳಸಿದ ವಸ್ತುಗಳಿಗಾಗಿ ತಡಕಾಡಿದೆ. ಇದಕ್ಕೂ ಮುನ್ನ ಕಾಮಾಕ್ಷಿಪಾಳ್ಯದ ಶವ ಎಸೆದ ಜಾಗಕ್ಕೂ ಆರೋಪಿಗಳನ್ನ ಕರೆದೋಯ್ದು ಪರಿಶೀಲಿಸಲಾಗಿತ್ತು. ಆದರೆ ಅಲ್ಲಿಗೆ ದರ್ಶನ್ ಮತ್ತು ಪವಿತ್ರಾರನ್ನ ಕರೆತಂದಿರಲಿಲ್ಲ. ಹಾಗೇನೆ ನಾಳೆ ಚಿತ್ರದುರ್ಗದಲ್ಲೂ ಸ್ಥಳ ಮಹಜರು ನಡೆಸೋ ಸಾಧ್ಯತೆ ಇದೆ.
ಇದನ್ನೂ ಓದಿ: ಕೊಲೆಗೂ ಮುನ್ನ ಅಪೋಲೋಗೆ ಬಂದಿದ್ದ ರೇಣುಕಾಸ್ವಾಮಿ: ಕೊನೆಯ ದೃಶ್ಯ ವೈರಲ್
ಆರು ದಿನ ಪೊಲೀಸ್ ಕಸ್ಟಡಿಗೆ ಹೋಗಿರೋ ದರ್ಶನ್ ನಿನ್ನೆ ಪೊಲೀಸ್ ಠಾಣೆಯಲ್ಲೇ ರಾತ್ರಿ ಕಳೆದಿದ್ದಾರೆ. ಮೈಕೈ ನೋವು ಅಂತಾ ರಾತ್ರಿ ಡೋಲೋ ಮಾತ್ರೆ ತರಿಸಿಕೊಂಡ ದರ್ಶನ್, ಊಟ ಬೇಡ ಜಸ್ಟ್ ಮಜ್ಜಿಗೆ, ಅನ್ನಕೊಡಿ ಅಂತಾ ಕೇಳಿದ್ರಂತೆ. ಬೆಳಗ್ಗೆ ಕೂಡಾ ತಿಂಡಿ ಬೇಡ ಟೀ, ಕಾಫಿ ಬಿಸ್ಕೆಟ್ ಕೊಡಿ ಅಂತಾ ಕೇಳಿದ್ರಂತೆ.
ಖಾಕಿ ಕಸ್ಟಡಿಯಲ್ಲಿರುವ ದರ್ಶನ್, ಪೊಲೀಸರು ಏನೇ ಕೇಳಿದ್ರೋ ನಾನೇನೂ ಮಾಡಿಲ್ಲ. ನಂಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಸಾಲದಕ್ಕೆ ಕೈ ನಡುಗುತ್ತಿವೆ ಸಿಗರೇಟ್ ಕೊಡಿ ಅಂತಾ ಪೊಲೀಸರ ಬಳಿಯೇ ಕೇಳಿಕೊಂಡಿದ್ದಾರೆ. ಆದರೆ ಪೊಲೀಸರು ಆಗಲ್ಲ ಎಂದಿದ್ದಾರೆ. ಜೊತೆಗೆ ದರ್ಶನ್ ಮುಂದೆ ಸಾಕ್ಷ್ಯಗಳನ್ನ ಇಟ್ಟು ಪ್ರಶ್ನೆ ಕೇಳ್ತಿದ್ದಾರೆ. ಆಗ ದರ್ಶನ್ ಸೈಲೆಂಟ್ ಮೋಡ್ಗೆ ಜಾರ್ತಿದ್ದಾರೆ.
ಪ್ರಕರಣದಲ್ಲಿ ಬಂಧಿತ 13 ಆರೋಪಿಗಳು ಮಾತ್ರ ಭಾಗಿ ಆಗಿಲ್ಲ. ಇವ್ರ ಜತೆ ಇನ್ನೂ ನಾಲ್ವರು ಕೈಜೋಡಿಸಿದ್ದಾರೆ. ಒಟ್ಟು 17 ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಅನು ಅನ್ನೋ ಯುವತಿ ಜತೆ ಜಗದೀಶ್ ಅಲಿಯಾಸ್ ಜಗ್ಗ, ರವಿ ಹಾಗೂ ರಾಜು ತಲೆಮರೆಸಿಕೊಂಡಿದ್ದಾರೆ. ಜತೆಗೆ ಕೊಲೆಗೆ ಬಳಸಿದ್ದ ಜೀಪ್, ಸ್ಕಾರ್ಪಿಯೋ ಕಾರು ಸೀಜ್ ಮಾಡಲಾಗಿದ್ದು, ಕೆಂಪು ಬಣ್ಣದ ಜೀಪ್ನಲ್ಲಿ ಒಂದು ಮದ್ಯದ ಬಾಟಲ್ ಪತ್ತೆ ಆಗಿದೆ. ಸ್ಕಾರ್ಪಿಯೋ ಕಾರಿನಲ್ಲಿ ಲೇಡಿಸ್ ಬ್ಯಾಗ್ ಪತ್ತೆ ಆಗಿದ್ದು, ಆ ಬ್ಯಾಗ್ ಪವಿತ್ರಗೌಡಗೆ ಸೇರಿದ್ದು ಎನ್ನಲಾಗಿದೆ. ಈ ಎಲ್ಲದ್ರ ಬಗ್ಗೆಯೂ ತನಿಖೆ ಆಗುತ್ತಿದೆ.
ವರದಿ: ಕಿರಣ್‌ಸೂರ್ಯ,ಮಾಲ್ತೇಶ್ ಜಗ್ಗೀನ್ ಜತೆ ಕಿರಣ್ ಹೆಚ್‌ವಿ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:55 pm, Wed, 12 June 24