ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್ ಬಗ್ಗೆ ಯಾರ‍್ಯಾರು ಏನು ಹೇಳಿದ್ರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದರ್ಶನ್ಗೆ ಕಠಿಣ ಶಿಕ್ಷೆ ನೀಡುವಂತೆ ವಿವಿಧ ಸಂಘಟನೆಗಳಿಂದ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಘಟನೆ ಬಗ್ಗೆ, ಅದರಲ್ಲೂ ದರ್ಶನ ಬಗ್ಗೆ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜೂನ್ 12: ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಈಗ ಅಕ್ಷರಶಃ ವಿಲವಿಲ ಅಂತಿದ್ದಾರೆ. ಪ್ರಕರಣದ ತನಿಖೆ ಈಗಾಗಲೇ ಚುರುಕುಕೊಂಡಿದ್ದು, ಇಂದು ಸ್ಥಳ ಮಹಜರು ಕೂಡ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ 17 ಆರೋಪಿಗಳ ಹೆಸರು ಉಲ್ಲೇಖಿಸಿದ್ದು, ಸದ್ಯ 13 ಜನರನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳು ಪರಾರಿ ಆಗಿದ್ದಾರೆ. ಸದ್ಯ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ, ಅದರಲ್ಲೂ ದರ್ಶನ ಬಗ್ಗೆ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರ ವರ್ತನೆ ಅಮಾನುಷ: ಮುತಾಲಿಕ್
ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ದರ್ಶನ ಒಬ್ಬ ಶ್ರೇಷ್ಠ ನಟ, ಅವರ ನಟನೆಗೆ ನನ್ನ ಸೆಲ್ಯೂಟ್ ಇದೆ. ಆದರೆ, ಈಗ ನಡೆದಿರುವ ಘಟನೆ ಅತ್ಯಂತ ಅಮಾನುಷವಾದದ್ದು. ನಟನೆ ಬೇರೆ, ನಿಜಜೀವನದಲ್ಲಿ ದರ್ಶನ್ ವರ್ತನೆ ಬೇರೆಯೇ ಇದೆ. ಅವರ ವರ್ತನೆ ಕೀಳುಮಟ್ಟದ್ದು ಮತ್ತು ಅಮಾನುಷ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ 13 ಜನ ಮಾತ್ರವಲ್ಲ, ಬರೋಬ್ಬರಿ 17 ಆರೋಪಿಗಳು; 4 ಮಂದಿ ನಾಪತ್ತೆ
ಕರ್ನಾಟಕ ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಅಭಿಮಾನ ನಟರ ಅಭಿನಯಕ್ಕೆ ಸೀಮಿತವಾಗಿರಬೇಕು. ನಟನ ಅಮಾನುಷ ವರ್ತನೆಗೆ ಅಭಿಮಾನಿಗಳು ಬೆಂಬಲಿಸಬಾರದು ಎಂದಿದ್ದಾರೆ.
ಯಾರು ಎಷ್ಟೇ ದೊಡ್ಡವರಿದ್ರೂ ಬಿಡುವ ಪ್ರಶ್ನೆಯೇ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಯಲಿದೆ. ಯಾರು ಎಷ್ಟೇ ದೊಡ್ಡವರಿದ್ರೂ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದಿದ್ದಾರೆ.
ಸರ್ಕಾರ ಯಾವ ಭಾಗದ ಯಾರ ಒತ್ತಡಕ್ಕೂ ಮಣಿಯಲ್ಲ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗುತ್ತೆ. ಸಂತ್ರಸ್ತ ಕುಟುಂಬದ ಜತೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತೆ ಎಂದರು.
ದರ್ಶನ್ ಬಂಧನವಾಗಿದೆ ಅಂದಾಗ ನನಗೂ ಶಾಕ್ ಆಯ್ತು: ದರ್ಶನ್ ಪುಟ್ಟಣ್ಣಯ್ಯ
ಬೆಂಗಳೂರಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದ್ದು, ದರ್ಶನ್ ಬಂಧನದ ಬಗ್ಗೆ ನಿನ್ನೆ ನಮಗೆ ಗೊತ್ತಾಯ್ತು. ದರ್ಶನ್ ನನಗೆ ತುಂಬಾ ಆತ್ಮೀಯರು. ಅವರ ಜೊತೆ ಹಲವು ವರ್ಷಗಳಿಂದ ಉತ್ತಮ ಸಂಬಂಧವಿದೆ. ದರ್ಶನ್ ಬಂಧನವಾಗಿದೆ ಅಂದಾಗ ನನಗೂ ಶಾಕ್ ಆಯ್ತು. ಮುಂದೆ ಏನಾಗುತ್ತೆ ಎಂದು ತನಿಖೆ ನಂತರ ಗೊತ್ತಾಗುತ್ತದೆ. ದರ್ಶನ್ ಜತೆ ಸ್ನೇಹ ಈಗಲೂ ಇರುತ್ತೆ, ಮುಂದೆಯೂ ಇರುತ್ತೆ ಎಂದಿದ್ದಾರೆ.
ತಪ್ಪು ಯಾರು ಮಾಡಿದರೂ ತಪ್ಪೇ ಎಂದ ಬಸವಪ್ರಭುಶ್ರೀ
ರೇಣುಕಾಸ್ವಾಮಿ ಮನೆಗೆ ಚಿತ್ರದುರ್ಗದ ಮುರುಘಾಮಠದ ಉಸ್ತುವಾರಿ ಬಸವಪ್ರಭುಶ್ರೀ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಬಸವಪ್ರಭುಶ್ರೀ ಬಳಿ ರೇಣುಕಾಸ್ವಾಮಿ ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ. ತನಿಖೆ ಆಗುತ್ತಿದೆ ನಿಮಗೆ ನ್ಯಾಯ ಸಿಗುತ್ತದೆ ಧೈರ್ಯವಾಗಿರಿ ಎಂದು ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ: ಕೊಲೆಗೂ ಮುನ್ನ ಅಪೋಲೋಗೆ ಬಂದಿದ್ದ ರೇಣುಕಾಸ್ವಾಮಿ: ಕೊನೆಯ ದೃಶ್ಯ ವೈರಲ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವೇನೂ ಮಾತನಾಡುವುದಿಲ್ಲ. ರೇಣುಕಾಸ್ವಾಮಿ ಕುಟುಂಭಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ತಪ್ಪು ಯಾರು ಮಾಡಿದರೂ ತಪ್ಪೇ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.