ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾ ವಿವಾದಿತ, ಬಹು ಚರ್ಚಿತ ಮೂರೂ ಕೃಷಿ ಮಸೂದೆಗಳನ್ನು ವಾಪಸ್ ತೆಗೆದುಕೊಂಡು, ರೈತರ ಕ್ಷಮೆ ಕೋರಿದ್ದಾರೆ. ಮೂರು ಕೃಷಿ ಮಸೂದೆಗಳಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದ ಪ್ರಮುಖ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿಯ ಈ ನಿರ್ಧಾರವನ್ನು ಈಗ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ತೆಗೆದುಕೊಂಡಿರುವುದು (repeal of farm laws ) ರೈತರ ವಿಜಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರೈತರ ಬದುಕಿಗೆ ಮತ್ತು ದೇಶದ ಕೃಷಿ ವ್ಯವಸ್ಥೆಗೆ ದಮನಕಾರಿ ಆಗಿದ್ದ ಮತ್ತು ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಗೆ ಕಾರಣವಾಗಿದ್ದ, ಮೂರು ದಮನಕಾರಿ ಕೃಷಿ ಕಾಯಿದೆಗಳನ್ನು ದಿಢೀರ್ ಹಿಂದಕ್ಕೆ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಒತ್ತಡಕ್ಕೆ ಮಣಿದು, ರೈತ ಶಕ್ತಿಗೆ ತಲೆ ಬಾಗಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ತೆಗೆದುಕೊಂಡಿರುವುದು ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ಹೋರಾಟದಲ್ಲಿ 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ? ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತೇವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ:
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಕುರಿತಾದ ದಿಢೀರ್ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರೈತರು ವಿಜಯೋತ್ಸವ ಆಚರಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ರೈತ ಚಳವಳಿಗೆ, ರೈತ ಹೋರಾಟಕ್ಕೆ ಜಯವಾಗಲಿ ಅಂತಾ ರೈತರು ಘೋಷಣೆ ಕೂಗಿದ್ದಾರೆ.
ಜೆಡಿಎಸ್ ಯಾವತ್ತೂ ರೈತರ ಪರವಾಗಿದ್ದು, ಪ್ರಧಾನಿ ನಿರ್ಧಾರವ ಸ್ವಾಗತಿಸಲಿದೆ -ಶರವಣ
ರೈತರ ಬದುಕಿಗೆ ಮತ್ತು ದೇಶದ ಕೃಷಿ ವ್ಯವಸ್ಥೆಗೆ ದಮನಕಾರಿ ಆಗಿದ್ದ ಮತ್ತು ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಗೆ ಕಾರಣವಾಗಿದ್ದ, ಮೂರು ದಮನಕಾರಿ ಕೃಷಿ ಕಾಯಿದೆಗಳನ್ನು ದಿಢೀರ್ ಹಿಂದಕ್ಕೆ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಒತ್ತಡಕ್ಕೆ ಮಣಿದು, ರೈತ ಶಕ್ತಿಗೆ ತಲೆ ಬಾಗಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.
ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ಎಂದು ಬಿಂಬಿಸಲ್ಪಟ್ಟ ಭಾರತದಲ್ಲಿ ಪ್ರತಿಭಟನೆಗಳು ಕೂಡ ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿವೆ. ಪ್ರತಿಭಟನೆ ಗಳೂ ಕೂಡ ಪ್ರಜಾಸತ್ತೆಯ ಭಾಗವಾಗಿದೆ. ಈ ಪ್ರತಿಭಟನೆಗೆ ಬಲಿಷ್ಠ ಪ್ರಧಾನಿ ಎಂದು ಬಿಂಬಿಸಲ್ಪಟ್ಟ ನರೇಂದ್ರ ಮೋದಿ ಅವರೂ ಕೂಡ ಮಣಿದಿರುವುದು ರೈತಾಪಿ ಜನರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.
ಜೆಡಿಎಸ್ ಯಾವತ್ತೂ ರೈತರ ಪರವಾಗಿದ್ದು, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಲಿದೆ ಎಂದು ಶರವಣ ಹೇಳಿದ್ದಾರೆ. ಪಂಜಾಬ್, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಹಿನ್ನಲೆಯಲ್ಲಿ ಜನಕ್ರೋಶಕ್ಕೆ ಬೆದರಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ ಆದರೂ, ಇದು ಕಪಟ ತೀರ್ಮಾನ ಆಗಿರದೆ, ನಿಜ ಅರ್ಥ ಪಡೆಯಲಿ. ಮತ್ತೆ ಹಿಂಬಾಗಿಲಿಂದ ಇಂಥ ಏಕಪಕ್ಷೀಯ ಕಾಯಿದೆಗಳು ಬರುವ ದಿನಗಳಲ್ಲಿ ಜಾರಿಯಾಗದಿರಲಿ ಎಂದು ಆಶಿಸಿದ್ದಾರೆ. ಪ್ರಜಾಸತ್ತೆಯಲ್ಲಿ ಜನಶಕ್ತಿಯೇ ಅಂತಿಮ ಎಂಬುದು ಈ ವಿದ್ಯಮಾನದ ಸಾರಾಂಶ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ:
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಬಗ್ಗೆ ಟಿವಿ9 ಜೊತೆ ಮಾತನಾಡುತ್ತಾ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಇದು ದೇಶದ ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇದೇ ಕೆಲಸವನ್ನು ಕೇಂದ್ರ ಮೊದಲೇ ಮಾಡಬೇಕಾಗಿತ್ತು. ಇಷ್ಟೆಲ್ಲಾ ಪ್ರಾಣ ಹಾನಿಯಾದ ಬಳಿಕ ಹಿಂಪಡೆದಿದ್ದಾರೆ. ಚುನಾವಣೆ ಹಿನ್ನೆಲೆ ಕಾಯ್ದೆಗಳನ್ನು ಹಿಂಪಡೆದಿರಬಹುದು. ಇದು ರಾಜಕೀಯ ತೀರ್ಮಾನವೆಂದು ಹೇಳಬಹುದು. ಇದರಿಂದ ಉಪಯೋಗವಾಗುವ ಬಗ್ಗೆ ಜನ ನಿರ್ಧರಿಸ್ತಾರೆ. ಎಲ್ಲಾ ಹೋರಾಟ ಮರೆತು ಜನರು ಕ್ಷಮಿಸುತ್ತಾರಾ? ಇಲ್ಲಾ ಇವರಿಗೆ ಶಿಕ್ಷೆ ಕೊಡುತ್ತಾರಾ ಕಾದು ನೋಡಬೇಕು. ರೈತರು ಅಷ್ಟು ಸಾಮಾನ್ಯವಾಗಿ ಮರೆಯಲ್ಲ ಅನಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದ ಪ್ರಧಾನಿ ಮೋದಿ ನಿರ್ಧಾರ ಸ್ವಾಗತಾರ್ಹ. ಕೇಂದ್ರಕ್ಕೆ ಜ್ಞಾನೋದಯವಾಗಿದ್ದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆಸದೆ ಕಾಯ್ದೆಗಳ ಏಕಪಕ್ಷೀಯವಾಗಿ ಜಾರಿಗೆ ತರಲಾಗಿತ್ತು. ಈಗ ಏಕಾಏಕಿ ರದ್ಧತಿ ಅನೇಕ ಪ್ರಶ್ನೆ ಹುಟ್ಟುಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಸಾರಾಂಶ ಹೀಗಿದೆ:
ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಕಡೆ ರೈತರ ವಿರುದ್ಧ ನಡೆದಿರುವ ದೌರ್ಜನ್ಯಕ್ಕೆ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕ್ಷಮೆ ಯಾಚನೆ ಮಾಡಬೇಕಿತ್ತು. ಈಗಲಾದರೂ ರೈತರ ಮೇಲೆ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂಬುದು ನನ್ನ ಒತ್ತಾಯ.
ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ. ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಾ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು.
ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ & ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನಧಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದರು.
ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ & ಈಗ ಏಕಾಎಕಿ ರದ್ದತಿ ಅನೇಕ ಪ್ರಶ್ನೆ ಹುಟ್ಟುಹಾಕಿದೆ.
ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಪ್ರತಿಕ್ರಿಯೆ ನೀಡಿದ್ದಾರೆ. ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆ ಅಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ ಎಂದಿದ್ದಾರೆ.
Published On - 10:47 am, Fri, 19 November 21