ಬೆಂಗಳೂರು: ರಾಜ್ಯ ಕಾಂಗ್ರೆಸ್ ನೂತನ ಸಾರಥಿಯ ಪಟ್ಟಾಭಿಷೇಕಕ್ಕೆ ಮುಹೂರ್ತವೇ ಕೂಡಿ ಬರ್ತಿಲ್ಲ. ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡೋದಕ್ಕೆ ಪದೇಪದೆ ಗ್ರಹಣ ಹಿಡೀತಿದೆ. ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾವಿಧಿ ಸರ್ಕಾರ & ಕಾಂಗ್ರೆಸ್ ನಡುವಿನ ತಿಕ್ಕಾಟ ನಾಂದಿಯಾಗಿದೆ.
ಡಿ.ಕೆ ಶಿವಕುಮಾರ್.. ಇಟ್ಟ ಗುರಿಯನ್ನ ಮುಟ್ಟೋ ತನಕ ಕೈಕಟ್ಟಿ ಕೂರದ ಛಲಗಾರ. ಬೇಕಾಗಿರೋದನ್ನ ಪಡೆಯೋಕೆ ಶತಪ್ರಯತ್ನ ಮಾಡೋ ಮಾಸ್ ಲೀಡರ್. ರಾಜ್ಯ ಕಾಂಗ್ರೆಸ್ನ ಟ್ರಬಲ್ ಶೂಟರ್. ಆಡಳಿತ ಪಕ್ಷದವ್ರನ್ನ ಬೆವರಿಳಿಸೋ ಮಾಸ್ಟರ್ ಮೈಂಡ್. ಆದ್ರೆ ಕಳೆದ ಮೂರು ತಿಂಗಳಿನಿಂದಲೂ ಕೆಪಿಸಿಸಿ ಅಧ್ಯಕ್ಷರ ಪಟ್ಟ ಏರೋಕೆ ಡಿಕೆಶಿಗೆ ಕಾಲ ಕೂಡಿ ಬರ್ತಾನೇ ಇಲ್ಲ. ಕನಕಪುರ ಬಂಡೆಯ ಆಸೆಗೆ ಸರ್ಕಾರ ಪದೇಪದೆ ಡೈನಾಮೇಟ್ ಇಡ್ತಿದೆ.
ಬಂಡೆ ಪ್ರತಿಜ್ಞಾವಿಧಿಗೆ ಸರ್ಕಾರದಿಂದ ಅಡ್ಡಗಾಲು!
ಹೌದು, ಒಂದಲ್ಲ ಒಂದು ಕಾರಣದಿಂದ ಡಿಕೆಶಿ ಪಟ್ಟಾಭಿಷೇಕಕ್ಕೆ ಅಡ್ಡಿ ಆತಂಕ ಎದುರಾಗ್ತಾನೇ ಇದೆ. ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ಮತ್ತೆ ಗ್ರಹಣ ವಕ್ಕರಿಸಿದ್ದು, ರಾಜ್ಯ ಸರ್ಕಾರ & ಕಾಂಗ್ರೆಸ್ ನಡುವೆ ವಾರ್ ಶುರುವಾಗಿದೆ. ಜೂನ್ 14ರಂದು ಹೊಸ ಸ್ವರೂಪದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಸೋಕೆ ಡಿಕೆಶಿ ನಿರ್ಧರಿಸಿದ್ರು. ಹಾಗಾದ್ರೆ ರಾಜ್ಯ ಕಾಂಗ್ರೆಸ್ ಡಿಕೆಶಿ ಪದಗ್ರಹಣಕ್ಕೆ ಹೇಗೆಲ್ಲಾ ಸಿದ್ಧತೆ ಮಾಡ್ಕೊಂಡಿತ್ತು ಅನ್ನೋದನ್ನ ನೋಡೋದಾದ್ರೆ.
ಪದಗ್ರಹಣದ ಪ್ಲ್ಯಾನ್!
ಬೂತ್ ಮಟ್ಟದಲ್ಲಿ -ಗ್ರಾಮ ಮಟ್ಟದಲ್ಲಿ ನಿಗದಿತ ಕಾರ್ಯಕರ್ತರನ್ನ ಸೇರಿಸಿ ಪ್ರತಿಜ್ಞಾವಿಧಿ ಸ್ವೀಕರಿಸಲು ಡಿಕೆಶಿ ತೀರ್ಮಾನಿಸಿದ್ರು. ಕೆಪಿಸಿಸಿ ಕಚೇರಿ ಬಳಿ 150 ಮಂದಿ ಸೇರಿ ಪ್ರತಿಜ್ಞಾವಿಧಿ ಸ್ವೀಕರಿಸೋದು, ಕಾರ್ಯಕ್ರಮವನ್ನ ಜೂಮ್ ಌಪ್ನಲ್ಲಿ ನೇರಪ್ರಸಾರ ಮಾಡಲು ಮುಂದಾಗಿದ್ರು. ಈ ವೇಳೆ ಆನ್ಲೈನ್ನಲ್ಲಿ ಕಾರ್ಯಕರ್ತರು ಪದಗ್ರಹಣವನ್ನ ಕಣ್ತುಂಬಿಕೊಳ್ತಿದ್ರು, 7800 ಸ್ಥಳಗಳಲ್ಲಿ 10 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆಯಿತ್ತು.
ರಾಜಕೀಯ ಪ್ರೇರಿತ ನಿರ್ಧಾರವೆಂದು ಸಿದ್ದು ಸಿಡಿಮಿಡಿ!
ಹೌದು, ಕಾಂಗ್ರೆಸ್ ಲೆಕ್ಕಾಚಾರವನ್ನೆಲ್ಲಾ ಕಂದಾಯ ಇಲಾಖೆ ಬುಡಮೇಲು ಮಾಡಿದೆ. ಜೂನ್ 14ರ ಕಾರ್ಯಕ್ರಮಕ್ಕೆ ಡಿಕೆಶಿ ಕೇಳಿದ್ದ ಅನುಮತಿಯನ್ನ ಸರ್ಕಾರ ತಿರಸ್ಕರಿಸಿದೆ. ಇದು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಲಾಕ್ ಡೌನ್ 5.೦ ಮಾರ್ಗಸೂಚಿ ಅನ್ವಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ಇದ್ರಿಂದ ರೊಚ್ಚಿಗೆದ್ದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಸರ್ಕಾರದ ಈ ನಿರ್ಧಾರ ರಾಜಕೀಯ ಪ್ರೇರಿತ. ಇದು ವಿಪಕ್ಷಗಳನ್ನ ಹತ್ತಿಕ್ಕುವ ಯತ್ನ. ಅಮಿತ್ ಶಾ ಬಿಹಾರ & ಪಶ್ಚಿಮ ಬಂಗಾಳದಲ್ಲಿ ವರ್ಚುಯಲ್ ಱಲಿ ಮಾಡುವಾಗ ಅನ್ವಯವಾಗದ ರೂಲ್ಸ್ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಅನ್ವಯವಾಗುತ್ತಾ ಅಂತಾ ಪ್ರಶ್ನಿಸಿದ್ದಾರೆ.
ಇದಿಷ್ಟೇ ಅಲ್ಲದೆ ಕೂಡಲೇ ಸರ್ಕಾರ ಪರ್ಮಿಷನ್ ಕೊಡ್ಬೇಕು. ಏನೇ ದಮನಕಾರಿ ಪ್ರವೃತ್ತಿ ತೋರಿಸಿದ್ರೂ ನಾವ್ ಕಾರ್ಯಕ್ರಮ ಮಾಡ್ತೀವಿ ಅಂತಾ ಸಿದ್ದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಅಡಿಯಲ್ಲೇ ಕಾರ್ಯಕ್ರಮ ಮಾಡ್ತೀವಿ ಅಂತಾ ಸಿದ್ದು ಸವಾಲ್ ಹಾಕಿದ್ದಾರೆ.
Published On - 6:20 am, Wed, 10 June 20