‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಯೋಜನೆಗೆ ಶನಿವಾರ ಆರ್.ಅಶೋಕ್ ಚಾಲನೆ

| Updated By: ಆಯೇಷಾ ಬಾನು

Updated on: Feb 21, 2021 | 8:16 AM

ಜನರ ಸಮಸ್ಯೆಗಳನ್ನ ಆಲಿಸಿ ಸ್ಥಳದಲ್ಲೆ ಜನರಿಗೆ ಪರಿಹಾರ ನೀಡುವ ನೀಟ್ಟಿನಲ್ಲಿ ಸಚಿವ ಆರ್.ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನ ಜಾರಿಗೆ ತರುತ್ತಿದ್ದು, ನಾಳೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಡಿಸಿ ಮತ್ತು ಅಧಿಕಾರಿ ವರ್ಗ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಯೋಜನೆಗೆ ಶನಿವಾರ ಆರ್.ಅಶೋಕ್ ಚಾಲನೆ
ಆರ್. ಅಶೋಕ್
Follow us on

ದೇವನಹಳ್ಳಿ: ಕಂದಾಯ ಇಲಾಖೆಯ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಜನರು ದಿನಪೂರ್ತಿ ಡಿಸಿ, ಎಸಿ ಸೇರಿದಂತೆ ತಾಲೂಕು ಕಚೇರಿ ಸುತ್ತಾಡಿ ಸುಸ್ತಾಗುತ್ತಾರೆ. ಹೀಗಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇದೀಗ ಜಿಲ್ಲಾಡಳಿತವನ್ನೇ ಗ್ರಾಮಗಳಿಗೆ ಕಳಿಸುವ ವಿನೂತನ ಯೋಜನೆಗೆ ಕಂದಾಯ ಸಚಿವ ಆರ್.ಅಶೋಕ್ ಶನಿವಾರ (ಫೆಬ್ರವರಿ 20) ಚಾಲನೆ ನೀಡಲಿದ್ದಾರೆ.

ಕಂದಾಯ ಇಲಾಖೆ ಎಂದರೆ ಒಂದು ರೀತಿ ಜನರಿಗೆ ಆತಂಕ ಶುರುವಾಗುತ್ತದೆ. ಅದರಲ್ಲೂ ಆಧಾರ್ ಕಾರ್ಡ್ ಪಿಂಚಣಿ, ಬಿಪಿಎಲ್ ಸೇರಿದಂತೆ ಸಣ್ಣಾ ಪುಟ್ಟ ಕೆಲಸಗಳಿಗೂ ದಿನಪೂರ್ತಿ ಕಛೇರಿಗಳ ಸುತ್ತಾ ಕೆಲಸ ಕಾರ್ಯಗಳನ್ನ ಬಿಟ್ಟು ಅಲೆದಾಡಿ ಜನ ಸುಸ್ತಾಗಿ ಹೋಗುತ್ತಾರೆ. ಹೀಗಾಗಿ ಈ ರೀತಿ ಕಛೇರಿಗಳ ಸುತ್ತಾ ಜನ ಸಾಮಾನ್ಯರು ಸುತ್ತಾಡುವುದಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಆರ್.ಅಶೋಕ್ ವಿನೂತನ ಕಾರ್ಯಕ್ರಮವೊಂದನ್ನ ಜಾರಿಗೆ ತರಲು ಮುಂದಾಗಿದ್ದಾರೆ.

ಡಿಸಿಗಳಿಗೆ ಆರ್.ಅಶೋಕ್ ಸೂಚನೆ
ಜನರ ಸಮಸ್ಯೆಗಳನ್ನ ಆಲಿಸಿ ಸ್ಥಳದಲ್ಲೆ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಚಿವ ಆರ್.ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನ ಜಾರಿಗೆ ತರುತ್ತಿದ್ದು, ನಾಳೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಡಿಸಿ ಮತ್ತು ಅಧಿಕಾರಿ ವರ್ಗ 24 ಗಂಟೆಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಲಿದ್ದಾರೆ.

ಪ್ರತಿ ತಿಂಗಳ ಮೂರನೇ ವಾರದಲ್ಲೊಂದು ದಿನ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದರೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೊತೆಗೆ ಈ ವೇಳೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆಯಲ್ಲೆ ವಾಸ್ತವ್ಯ ಹೂಡುವಂತೆ ಅಧಿಕಾರಿಗಳಿಗೆ ಸಚಿವರು ಆದೇಶಿಸಿದ್ದು ನಾಳೆಯಿಂದ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ.

ಅಲ್ಲದೆ ವಾಸ್ತವ್ಯದ ವೇಳೆ ಗ್ರಾಮದಲ್ಲಿನ ಸಮಸ್ಯೆಗಳ ಪರಿಶೀಲನೆ ಜನರ ಅಹವಾಲು ಸ್ವೀಕಾರ ಮಾಡಿ ಪಿಂಚಣಿ, ಆಧಾರ ಕಾರ್ಡ್, ಎಪಿಕ್ ಕಾರ್ಡ್, ಪಹಣಿ ತಿದ್ದುಪಡಿ, ಪೌತಿ ಖಾತೆ, ಸೇರಿದಂತೆ ಹಲವು ಸಮಸ್ಯೆಗಳಿಗೆ ಜನರಿಗೆ ಸ್ಥಳದಲ್ಲೆ ಪರಿಹಾರ ನೀಡುವಂತೆಯು ರಾಜ್ಯದ ಎಲ್ಲಾ ಡಿಸಿಗಳಿಗೆ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

24 ಗಂಟೆಗಳ ಕಾಲ ಆರ್.ಅಶೋಕ್ ಗ್ರಾಮ ವಾಸ್ತವ್ಯ
ನಾಳೆಯಿಂದ (ಶನಿವಾರ) ಆರಂಭವಾಗಲಿರುವ ವಿನೂತನ ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 24 ಗಂಟೆಗಳ ಕಾಲ ವಾಸ್ತವ್ಯ ಹೂಡುವ ಮೂಲಕ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮಕ್ಕೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಜೊತೆ ಆಗಮಿಸಲಿರುವ ಸಚಿವರು ಗ್ರಾಮದ ವೀಕ್ಷಣೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಜೊತೆಗೆ ವಿವಿಧ ಯೋಜನೆಗಳಲ್ಲಿ ಗ್ರಾಮದ ವಿಶೇಷ ಚೇತನರ ಮನೆ ಬಾಗಿಲಿಗೆ ಸಲಕರಣೆಗಳನ್ನ ನೀಡಲಿದ್ದು, ಗ್ರಾಮದಲ್ಲಿ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಸಂಜೆ ಗ್ರಾಮದ ಹಾಸ್ಟೇಲ್​ನಲ್ಲೆ ವಾಸ್ತವ್ಯ ಹೂಡಲಿರುವ ಸಚಿವ ಅಶೋಕ್ ಭಾನುವಾರ ಬೆಳಗ್ಗೆ ದಲಿತರ ಮನೆಯಲ್ಲಿ ತಿಂಡಿ ಸೇವಿಸಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಈಗಾಗಲೇ ಸಚಿವರ ವಿನೂತನ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದು ನಾಳೆ ಸಚಿವರ ಜೊತೆ ಜಿಲ್ಲಾಡಳಿತವು ಸಹ ಗ್ರಾಮದಲ್ಲಿ ಬೀಡು ಬಿಡಲಿದೆ.

ಇದನ್ನೂ ಓದಿ: ಲಕ್ಷಾಂತರ ರೂಪಾಯಿ ವೆಚ್ಚದ ಅರಣ್ಯ ಮಾಹಿತಿ ಕೇಂದ್ರ.. ಪಾಳು ಬಿದ್ದಿದೆ!

ಇದನ್ನೂ ಓದಿ: Schools reopening ಫೆ. 22ರಿಂದ 6-8ನೇ ತರಗತಿಗಳ ಆರಂಭ: ಕಟ್ಟುನಿಟ್ಟಿನ ಗೈಡ್‌ಲೈನ್ಸ್‌ ಪಾಲಿಸಲೇಬೇಕು ಎಂದ ಸಾರ್ವಜನಿಕ ಶಿಕ್ಷಣ ಇಲಾಖೆ

Published On - 9:08 pm, Fri, 19 February 21