ಬೆಂಗಳೂರು: ರಾಜರಾಜೇಶ್ವರಿ ನಗರ ಉಪಸಮರದಲ್ಲಿ ಬದ್ಧ ವೈರಿಗಳಂತೆ ಒಬ್ಬರ ಮೇಲೊಬ್ಬರು ಆರೋಪ, ಟೀಕಾಪ್ರಹಾರ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಶಾಸಕ ಮುನಿರತ್ನ ಇಂದು ತಮ್ಮ ವೈಮನಸ್ಸು ಮರೆತಂತೆ ಕಂಡುಬಂತು. ಹೌದು, ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿದ್ದ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಮುನಿರತ್ನ ಸುದೀರ್ಘ ಮಾತುಕತೆಯಲ್ಲಿ ಮಗ್ನರಾಗಿರುವ ದೃಶ್ಯ ಕಂಡುಬಂತು.
ವಿಧಾನಸಭೆಯ ಲಾಂಜ್ನಲ್ಲಿ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದ ಇಬ್ಬರೊಟ್ಟಿಗೆ ಕೆಲ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಖಾದರ್ ಮತ್ತು ನಾರಾಯಣ ಸ್ವಾಮಿ ಸಹ ಕಂಡುಬಂದರು. ಉಪಚುನಾವಣೆ ಬಳಿಕ ಮೊದಲ ಬಾರಿಗೆ ಭೇಟಿಯಾಗಿ ಚರ್ಚೆ ನಡೆಸಿದ ಇಬ್ಬರು ಮುಖಂಡರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದರು ಎಂದು ಎಲ್ಲರ ಕುತೂಹಲ ಕೆರಳಿಸಿದೆ. ಈ ನಡುವೆ, ಕೆಲವರ ಪ್ರಕಾರ ಇಬ್ಬರೂ ನಾಯಕರು ಪ್ರಸಕ್ತ ರಾಜಕೀಯದ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆದಿದ್ದು ತಮಾಷೆ ಸಹ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.