ಧಾರವಾಡದಲ್ಲಿ ನಾಳೆಯಿಂದ ಆರ್​ಎಸ್​ಎಸ್​ ಸಭೆ; ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ, ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ಚರ್ಚೆ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Oct 27, 2021 | 12:57 PM

RSS Meeting: ಅ. 28ರಿಂದ 30ರವರೆಗೆ ಧಾರವಾಡದಲ್ಲಿ ಆರ್​ಎಸ್​ಎಸ್​ ಸಭೆ ನಡೆಯಲಿದ್ದು, ಎರಡು ವರ್ಷಗಳ ಬಳಿಕ ಈ ರಾಷ್ಟ್ರೀಯ ಸಭೆ ನಡೆಯುತ್ತಿದೆ.

ಧಾರವಾಡದಲ್ಲಿ ನಾಳೆಯಿಂದ ಆರ್​ಎಸ್​ಎಸ್​ ಸಭೆ; ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ, ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ಚರ್ಚೆ ಸಾಧ್ಯತೆ
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
Follow us on

ಧಾರವಾಡ: ಧಾರವಾಡದ ಗರಗ ರಸ್ತೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಾಳೆಯಿಂದ (ಅ. 28) 3 ದಿನಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS​) ರಾಷ್ಟ್ರೀಯ ಮಟ್ಟದ ಬೈಠಕ್ ನಡೆಯಲಿದೆ. ಬಾಂಗ್ಲಾದೇಶದಲ್ಲಿ ನವರಾತ್ರಿ ವೇಳೆ ದುರ್ಗಾ ಪೂಜೆ ಸಂದರ್ಭದಲ್ಲಿಯೇ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಹಾಗೇ, ಪೆಟ್ರೋಲ್- ಡೀಸೆಲ್ (Petrol Price- Diesel Price) ಬೆಲೆ ಏರಿಕೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಆರ್​ಎಸ್​ಎಸ್​ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ. ಅ. 28ರಿಂದ 30ರವರೆಗೆ ಆರ್​ಎಸ್​ಎಸ್​ ಸಭೆ ನಡೆಯಲಿದ್ದು, ಎರಡು ವರ್ಷಗಳ ಬಳಿಕ ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಕಳೆದ ವರ್ಷ ಕೊರೊನಾದಿಂದಾಗಿ ಈ ಸಭೆಯನ್ನು ರದ್ದುಗೊಳಿಸಲಾಗಿತ್ತು. 2025ಕ್ಕೆ ಆರ್‌ಎಸ್‌ಎಸ್ ಶತಮಾನೋತ್ಸವವಿದೆ. ಈ ಹಿನ್ನೆಲೆಯಲ್ಲಿ 2021ರಿಂದ 2024ರ ಅವಧಿಯಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು.

ಈ ಬಾರಿ ಪೂರ್ಣ ಪ್ರಮಾಣದ ಬೈಠಕ್ ನಡೆಯಲಿದ್ದು, ಆರ್‌ಎಸ್‌ಎಸ್‌ ಮುಖ್ಯಸ್ಥ, ಸರಸಂಘಚಾಲಕ ಮೋಹನ ಭಾಗವತ್, ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಕ್ಷೇತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಸೇರಿ ದೇಶದ ಸುಮಾರು 350 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ದೇವಾಲಯ ಮೇಲೆ‌ ದಾಳಿ ನಡೆದಿದೆ. ಈ ಬಗ್ಗೆ ಕೂಡಾ ಚರ್ಚೆ ನಡೆಯಲಿದೆ. ಕೊರೊನಾ ಬಗ್ಗೆ ಎಲ್ಲ ಜಾಗೃತಿ ಇಟ್ಟುಕೊಂಡು ಕಾರ್ಯಕ್ರಮ ನಡೆಯಲಿದೆ. ಜುಲೈನಲ್ಲೇ ಈ ಕಾರ್ಯಕ್ರಮದ ಯೋಜನೆ ಹಾಕಲಾಗಿತ್ತು. ಆದರೆ, ಕೊರೊನಾ ಅಲೆ ಕಡಿಮೆಯಾಗಲಿ ಎಂದು ಇದೀಗ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಯಾವುದೇ ಮಂತ್ರಿಗಳು ಸಭೆಯಲ್ಲಿ ಭಾಗವಹಿಸುವುದಿಲ್ಲ.

ನಾಳೆಯಿಂದ ನಡೆಯುವ ಆರ್​ಎಸ್​ಎಸ್​ ಸಭೆಯ ಕೊನೆಯ ದಿನ ಬಾಂಗ್ಲಾದೇಶದಲ್ಲಿ ದಾಳಿಗೆ ಒಳಗಾಗಿರುವ ಹಿಂದೂಗಳ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್​, ಡೀಸೆಲ್​ ಮತ್ತು ಗ್ಯಾಸ್ ಸಿಲಿಂಡರ್​ ಬೆಲೆ ಏರಿಕೆಯಾಗುತ್ತಿರುವುದರಿಂದ ಈ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಾಗೇ, ಮುಂದಿನ ವರ್ಷ ನಡೆಯುವ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ‘ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಹೋರಾಡಲು ನಮ್ಮ ಪಕ್ಷದಲ್ಲಿ ಏಕತೆ ಇರಬೇಕು’-ಸೋನಿಯಾ ಗಾಂಧಿ

Dattatreya Hosabale: ‘ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ’-ಆರ್​ಎಸ್​ಎಸ್​ ಮುಖಂಡ ದತ್ತಾತ್ರೇಯ ಹೊಸಬಾಳೆ

Published On - 12:56 pm, Wed, 27 October 21