ವಿಜಯನಗರ: ಆರ್ಟಿಐ ಕಾರ್ಯಕರ್ತ (RTI Activist) ಶ್ರೀಧರ್ ಕೊಲೆ ಪ್ರಕರಣಕ್ಕೆ ಮಹತ್ತರ ತಿರುವು ಸಿಕ್ಕುವ ಸಾಧ್ಯತೆ ಇದ್ದು, ಶ್ರೀಧರ್ ಪತ್ನಿ ಹಾಗೂ ತಾಯಿಯ ಹೇಳಿಕೆ ಇದೀಗ ಸಂಚಲನ ಮೂಡಿಸಿದೆ. ಶ್ರೀಧರ್ ಕೊಲೆಯ (Murder) ಹಿಂದೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ (P T Parameshwar Naik) ಕೈವಾಡ ಇದೆ ಎಂದು ಟಿವಿ9ಗೆ ಶ್ರೀಧರ್ ಪತ್ನಿ ಶಿಲ್ಪಾ, ತಾಯಿ ಲಕ್ಷ್ಮೀದೇವಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ ಶ್ರೀಧರ್ಗೆ ಪ್ರಾಣ ಬೆದರಿಕೆ ಇತ್ತು. ಇದೇ ಕಾರಣಕ್ಕಾಗಿ ಅವರು ಸುಮಾರು 4 ದಿನ ಮನೆಯಲ್ಲಿ ಬಾಗಿಲು ಹಾಕಿಕೊಂಡಿದ್ದರು. ಆದರೆ, ನಿನ್ನೆ ವಾಕಿಂಗ್ಗೆ ಹೋದಾಗ ಹತ್ಯೆ ಮಾಡಲಾಗಿದೆ. ಇದರಲ್ಲಿ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಕೈವಾಡ ಇದೆ ಎಂದು ಶ್ರೀಧರ್ ಪತ್ನಿ ಹಾಗೂ ತಾಯಿ ಗಂಭೀರ ಆರೋಪ ಹೊರಿಸಿದ್ದಾರೆ.
ನನ್ನ ಮಗ ಯಾವಾಗಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದ. ಸಚಿವ ಆನಂದ ಸಿಂಗ್, ಉಚ್ಚಂಗಿದುರ್ಗದ ಕಲ್ಲು ಕ್ವಾರೆ ಬಗ್ಗೆ ಹೋರಾಟ ಮಾಡಿದ್ದ. ಆದರೆ, ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ವಿರುದ್ಧ ದೂರು ಸಲ್ಲಿಸಿದ್ದಕ್ಕಾಗಿಯೇ ನನ್ನ ಮಗನ ಕೊಲೆ ಆಗಿದೆ ಎಂದು ಶ್ರೀಧರ್ ತಾಯಿ ಲಕ್ಷ್ಮೀದೇವಿ ಆರೋಪಿಸಿದ್ದಾರೆ. ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ದೂರು ನೀಡಿದ ನಂತರ ಇದೇ ವಿಚಾರಕ್ಕೆ ಪ್ರಾಣ ಭಯ ಎಂದು ಶ್ರೀಧರ್ ಹೇಳಿದ್ದರು. ಸುಮಾರು 4 ದಿನ ಮನೆಯಲ್ಲಿ ಬಾಗಿಲು ಹಾಕಿಕೊಂಡಿದ್ದರು. ನಿನ್ನೆ ತಾನೇ ವಾಕಿಂಗ್ಗೆ ಹೋಗಿದ್ದ ವೇಳೆ ಹತ್ಯೆ ಮಾಡಿದ್ದಾರೆ. ನಮ್ಮ ಮನೆಯಲ್ಲಿರುತ್ತಿದ್ದ ವಾಗೀಶ್ ಎಂಬಾತ ಇದರಲ್ಲಿ ಪಾಲ್ಗೊಂಡಿದ್ದಾನೆ ಎಂದು ಪತ್ನಿ ಶಿಲ್ಪಾ ಹೇಳಿದ್ದಾರೆ.
ನನ್ನ ಪತಿಗೆ ಪ್ರಾಣ ಭಯವಿತ್ತು. ಆದರೆ, ನಿನಗೆ ಎಲ್ಲವನ್ನೂ ಹೇಳುವುದು ಬೇಡ, ಹೆದರಿಕೊಳ್ಳುತ್ತಿ ಎನ್ನುತ್ತಿದ್ದರು. ನನಗೇನಾದರೂ ಆದರೆ ಮಕ್ಕಳನ್ನ ಸಲಹುವ ಕೆಲಸ ನಿನ್ನದೇ ಎನ್ನುತ್ತಿದ್ದರು. ಇದೀಗ ಹತ್ಯೆ ಮಾಡಿಬಿಟ್ಟಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಪತ್ನಿ ಶಿಲ್ಪಾ ಕಣ್ಣೀರು ಹಾಕಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ಎಡಿಬಿ ಕಾಲೇಜು ಬಳಿ ದುಷ್ಕೃತ್ಯ ನಡೆದಿದ್ದು, ಆರ್ಟಿಐ ಕಾರ್ಯಕರ್ತ ಶ್ರೀಧರ್ ಮೇಲೆ ರಾಡ್ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ನಿನ್ನೆ (ಜುಲೈ 16) ಈ ಘಟನೆ ಬಗ್ಗೆ ವರದಿಯಾಗಿದ್ದು, ಎಡಿಬಿ ಕಾಲೇಜು ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ದಾಳಿ ಮಾಡಿದ್ದ ದುಷ್ಕರ್ಮಿಗಳು ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಈ ದುಷ್ಕೃತ್ಯದ ಹಿಂದೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಕುಮ್ಮಕ್ಕು ಇದೆ ಎನ್ನುವ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:
ರಾಜ್ಯದಲ್ಲಿ ಬೆಚ್ಚಿಬೀಳಿಸುವ ಕೃತ್ಯ; ಆರ್ಟಿಐ ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಕೌರ್ಯ ಮೆರೆದ ದುಷ್ಕರ್ಮಿಗಳು
Published On - 7:10 am, Sat, 17 July 21