AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KappataGudda: ಕಪ್ಪತಗುಡ್ಡದ ಮೇಲೆ ಮತ್ತೆ ಬಿತ್ತು ಗಣಿಕುಳಗಳ ಕಣ್ಣು; ರಕ್ಷಣೆಯಾಗುವುದೇ ಉತ್ತರ ಕರ್ನಾಟಕದ ಸಹ್ಯಾದ್ರಿ?

ವನ್ಯಜೀವಿ ಧಾಮದ ಒಂದು‌ ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನವೇ ಇದೆ. ಆದರೆ ಈಗ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆಗಲು ಬಿಡುವುದಿಲ್ಲ ಎಂದು ಡಿಎಫ್ಓ ಸೂರ್ಯಸೇನ್ ಟಿವಿ9 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

KappataGudda: ಕಪ್ಪತಗುಡ್ಡದ ಮೇಲೆ ಮತ್ತೆ ಬಿತ್ತು ಗಣಿಕುಳಗಳ ಕಣ್ಣು; ರಕ್ಷಣೆಯಾಗುವುದೇ ಉತ್ತರ ಕರ್ನಾಟಕದ ಸಹ್ಯಾದ್ರಿ?
ಕಪ್ಪತಗುಡ್ಡದಲ್ಲಿ ಗಣಿಗಾರಿಕೆ
TV9 Web
| Updated By: Skanda|

Updated on: Jul 17, 2021 | 9:17 AM

Share

ಗದಗ: ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ. ಈ ಕಪ್ಪತ್ತಗುಡ್ಡದ ಸೆರಗಿನಲ್ಲಿ ಅಪಾರ ಖನಿಜ ಸಂಪತ್ತಿದ್ದು, ಜತೆಗೆ ಇಲ್ಲಿಯ ಸಸ್ಯ ಸಂಪತ್ತಿನ ರಕ್ಷಣೆಗೆ ಸರ್ಕಾರ ವನ್ಯಜೀವಿಧಾಮ ಮಾಡಿದೆ. ಆದರೆ, ಗುಡ್ಡದ ಸೆರಗಿನಲ್ಲಿ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ವನ್ಯಜೀವಿಧಾಮ ಘೋಷಣೆ ಬಳಿಕ ಗಣಿಗಾರಿಕೆಗೆ ನಿಷೇಧ ಹೇರಲಾಗಿತ್ತು. ಆದರೆ, ಗಣಿಗಾರಿಕೆ ಪರವಾನಗಿ ನೀಡುವಂತೆ ಗಣಿ ಮಾಲೀಕರು ಈಮುನ್ನ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಗಣಿ ಇಲಾಖೆ ನೀಡಿದ್ದ ನೊಟೀಸ್ ರದ್ದು ಮಾಡಿತ್ತಾದರೂ ಗಣಿಗಾರಿಕೆ ಆರಂಭಕ್ಕೆ ಅನುಮತಿ ನೀಡಿಲ್ಲ. ಆದರೂ ಕೂಡ ಕಪ್ಪತ್ತಗುಡ್ಡದ ಸೆರಗಿನಲ್ಲಿ (Gadag KappataGudda) ಮತ್ತೆ ಬ್ಲಾಸ್ಟಿಂಗ್ ಮಾಡಿ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗಲು ಬಿಡುವುದಿಲ್ಲ ಎಂದ ಎಚ್ಚರಿಕೆ ನೀಡಿದೆ. 

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಆದ್ರೂ ಗಣಿಕುಳಗಳ ಕೆಂಗಣ್ಣು ಮಾತ್ರ ಇನ್ನೂ ನಿಂತಿಲ್ಲ. ಶತಾಯಗತಾಯ ಸಂಪತ್ತು ಲೂಟಿ ಮಾಡುವತ್ತ ಗಣಿಕುಳಗಳ ಚಿತ್ತ ನೆಟ್ಟಿದೆ. ಉತ್ತರ ಕರ್ನಾಟಕದ ಅಮೂಲ್ಯ ಸಂಪತ್ತು ಉಳಿಸಿಕೊಳ್ಳಬೇಕಾದ ಈ ಭಾಗದ ಸಚಿವರು, ಶಾಸಕರು ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ. ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ಈಗ ಮತ್ತೆ ಗಣಿಗಾರಿಕೆ ಅಬ್ಬರ ಜೋರಾಗಿದೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮವೆಂದು ಘೋಷಣೆಯಾದ ಬಳಿಕ ಈ ಪ್ರದೇಶದ ವ್ಯಾಪ್ತಿಯ ಮರಳು ಬ್ಲಾಕ್ ಸೇರಿದಂತೆ 14 ಕ್ವಾರಿಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಗಣಿ ಇಲಾಖೆ ಮೂಲಕ ನೊಟೀಸ್ ನೀಡಿತ್ತು. ಆಗ ಗಣಿಗಾರಿಕೆ ಮಾಡಿದ ಕಲ್ಲುಗಳನ್ನು ಸಾಗಿಸಲು 90 ದಿನಗಳ‌ ಕಾಲಾವಕಾಶ ಕೂಡಾ ನೀಡಲಾಗಿತ್ತು. ಇದೀ ಮತ್ತೆ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಶಿವಗಂಗಾ ಸ್ಟೋನ್ ಕ್ರಷರ್, ಎಸ್ ಆರ್ ಬಳ್ಳಾರಿ ಸೇರಿದಂತೆ ಕ್ವಾರಿಗಳ ಮಾಲೀಕರು ಮತ್ತೆ ಕಲ್ಲು ಗಣಿಗಾರಿಕೆ ಮಾಡಲು ಆರಂಭ ಮಾಡಿದ್ದಾರೆ. ಅದು ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡಿಕೊಂಡು ರಾತ್ರಿ ಹಗಲು ಎನ್ನದೇ ಗಣಿಗಾರಿಕೆ ಮಾಡಲಾಗುತ್ತಿದೆ.

ಗದಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜುಲೈ 13 ರಂದು ಜಿಲ್ಲಾ ಟಾಸ್ಕ್​ಫೋರ್ಸ್ ಸಭೆ ನಡೆಸಲಾಗಿದೆ. ಕಪ್ಪತಗುಡ್ಡ ವನ್ಯಜೀವಿ ಧಾಮದಲ್ಲಿ ಬರುವ 14 ಕ್ವಾರಿಗಳಿಗೆ ಮುಕ್ತಾಯ ನೋಟಿಸ್ ಗಣಿ ಇಲಾಖೆ ನೀಡಿದೆ. ಈ ನೋಟಿಸ್ ಚಾಲೆಂಜ್ ಮಾಡಿ ಗಣಿ ಮಾಲೀಕರು ಕೋರ್ಟ್​ಗೆ ಮೊರೆ ಹೋಗಿದ್ದಾರೆ. ಆದೇಶದಲ್ಲಿ ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿ ನಿಯಮಾನುಸಾರ ಅವಕಾಶ ನೀಡಿ ಕ್ವಾರಿ ಮುಕ್ತಾಯ ಮಾಡಲು ತಿಳಿಸಲಾಗಿದೆ. ಗಣಿಗಾರಿಕೆಗೆ ಅವಕಾಶ ನೀಡುವಂತೆ ಹೇಳಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ನೊಟೀಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

KappataGudda Mining Gadag

ಗಣಿಗಾರಿಕೆಯ ದೃಶ್ಯ

ವನ್ಯಜೀವಿ ಧಾಮದ ಒಂದು‌ ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನವೇ ಇದೆ. ಆದರೆ ಈಗ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆಗಲು ಬಿಡುವುದಿಲ್ಲ ಎಂದು ಡಿಎಫ್ಓ ಸೂರ್ಯಸೇನ್ ಟಿವಿ9 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

ಕಪ್ಪತ್ತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆದಿರುವ ಫಲವಾಗಿ ವನ್ಯಜೀವಿ ಧಾಮವೆಂದು ಘೋಷಣೆಯಾಗಿದೆ. ಆದರೆ, ಗಣಿ ಮಾಲೀಕರು ಮತ್ತೆ ರಾಜಾರೋಷವಾಗಿ ಕಲ್ಲು ಗಣಿಗಾರಿಕೆ ಆರಂಭ ಮಾಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಗಣಿಗಾರಿಕೆ ಮಾಡಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಗಪ್ ಚುಪ್ ಆಗಿ ಕುಳಿತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಣಿಗಾರಿಕೆಯಿಂದ ಕಪ್ಪತ್ತಗುಡ್ಡದಲ್ಲಿನ ಸಸ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲಗಳ ಮೇಲೆ‌‌ ದೊಡ್ಡ ಪರಿಣಾಮವಾಗುತ್ತದೆ. ಆದರೆ ಗಣಿಕುಳ್ಳಗಳು ತಮ್ಮ ಪ್ರಭಾವದಿಂದ ಗಣಿಗಾರಿಕೆ ಆರಂಭ ಮಾಡಿದ್ದಾರೆ. ಶಿರಹಟ್ಟಿ ತಹಶೀಲ್ದಾರ ಜೆ ಬಿ ಮಜಗೆ ಅವರು ‘ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾನೂನುಬಾಹಿರ ಗಣಿಗಾರಿಕೆ ನಡೆದರೂ ಸಂಬಂಧ ಇಲ್ಲ. ಗಣಿ ಇಲಾಖೆ ಬಳಿ ವಿಚಾರಿಸಿ’ ಅಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ. ಗದಗ ಜಿಲ್ಲೆಯ ಸಂಪತ್ತು. ಕಪ್ಪತ್ತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಕೂಡಲೇ ಕಪ್ಪತ್ತಗುಡ್ಡ ವ್ಯಾಪ್ತಿಯ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡುತ್ತೇವೆ’ ಎಂದು ಹೋರಾಟಗಾರ ಪರಮೇಶ್ವರಪ್ಪ  ಎಚ್ಚರಿಕೆ ನೀಡಿದ್ದಾರೆ.

ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿಯೇ ಕೆಲವು ದಿನಗಳಿಂದ ನಿರಂತರವಾಗಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕಾದ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಶೇಷ ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ: 

ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

(Gadag KappataGudda mining started again people demands forest department must protect forest)