
ಬೆಂಗಳೂರು, ನವೆಂಬರ್ 16: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮುಂಬಡ್ತಿ ಪಡೆಯಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ಅಕ್ರಮವನ್ನು ಟಿವಿ9 ಬಯಲು ಮಾಡಿತ್ತು. ವರದಿ ಬೆನ್ನಲ್ಲೇ ನಕಲಿ ಪ್ರಮಾಣಪತ್ರ ಸಲ್ಲಿಸಿರುವ ಆರೋಪ ಎದುರಿಸುತ್ತಿರುವ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲು ಸಾರಿಗೆ ಸಚಿವ ಭೈರತಿ ಸುರೇಶ್ ಸೂಚಿಸಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಒಟ್ಟು 12 ಮೋಟಾರು ವಾಹನ ನಿರೀಕ್ಷಕರ ಮುಂಬಡ್ತಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದ್ದು, ಇಲಾಖೆಯ 46 ಸಿಬ್ಬಂದಿ ಮುಂಬಡ್ತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ ಹಲವರು ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಒಂದೊಂದು ಐಎಂವಿ ಹುದ್ದೆಗೂ ಕೋಟಿ ಕೋಟಿ ರೂ ಡೀಲ್ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು ನಿಯಮಗಳ ಪ್ರಕಾರ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮುಂಬಡ್ತಿ ಪಡೆಯಲು ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಬಿಇ ಪದವಿ ಪಡೆದಿರಬೇಕು. ನಿಯಮಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿರಬೇಕು ಅಥವಾ ಮೂರು ವರ್ಷ ರಜೆ ಪಡೆದು ವಿದ್ಯಾಭ್ಯಾಸ ಮಾಡಿರಬೇಕು ಎಂಬ ಅರ್ಹತಾ ಮಾನದಂಡಗಳಿವೆ. ಆದರೆ, 46 ಸಿಬ್ಬಂದಿ ಸರ್ಕಾರಿ ಉದ್ಯೋಗದಲ್ಲಿದ್ದಾಗಲೇ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡು ಮುಂಬಡ್ತಿಗೆ ಮುಂದಾಗಿದ್ದಾರೆ. ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಕೈಗಾರಿಕೆ ಅಥವಾ ಕಾರ್ಖಾನೆಗಳಲ್ಲಿ ಖಾಯಂ ಉದ್ಯೋಗದಲ್ಲಿರಬೇಕೆಂಬ ನಿಯಮವಿದ್ದು, ಈ ಸಿಬ್ಬಂದಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರಿಗೆ ಇಲಾಖೆಯ ಸಿಬ್ಬಂದಿ ಉನ್ನತ ಶಿಕ್ಷಣ ಪಡೆಯಲು ಇಲಾಖೆಯ ಆಯುಕ್ತರಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಎನ್‌ಒಸಿ ಪಡೆದಿದ್ದರೂ, ಅದನ್ನು ತಾವು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಸಲ್ಲಿಸದೆ ಖಾಸಗಿ ಕಂಪನಿಗಳ ಉದ್ಯೋಗಿಗಳೆಂದು ದಾಖಲೆಗಳನ್ನು ನೀಡಿರುವ ಆರೋಪ ಕೇಳಿಬಂದಿದೆ. ಇದಲ್ಲದೆ, ಆರೋಪಿತ ಸಿಬ್ಬಂದಿಗೆ ಮುಂಬಡ್ತಿ ಕಲ್ಪಿಸುವ ಉದ್ದೇಶದಿಂದ ಇಲಾಖೆಯ ನೇಮಕಾತಿ ಮತ್ತು ಸೇವಾ ನಿಯಮಗಳನ್ನೇ ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪವೂ ಇದೆ.
ಈ ಹಿಂದೆ 50 ವರ್ಷಗಳಿದ್ದ ಅರ್ಹತಾ ವಯೋಮಿತಿಯನ್ನು 55 ವರ್ಷಗಳಿಗೆ ಹೆಚ್ಚಿಸಲಾಗಿದೆ. ಡಿಪ್ಲೊಮಾ ಪೂರ್ಣಗೊಳಿಸಿದ ಬಳಿಕ ಮುಂಬಡ್ತಿ ಪಡೆಯಲು ಕನಿಷ್ಠ ಮೂರು ವರ್ಷಗಳ ಸೇವಾನುಭವ ಕಡ್ಡಾಯವಾಗಿದ್ದ ನಿಯಮವನ್ನೂ ಬದಲಾಯಿಸಿ, ಡಿಪ್ಲೊಮಾ ಪೂರ್ಣಗೊಳಿಸಿದ ತಕ್ಷಣವೇ ಮುಂಬಡ್ತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾರಿಗೆ ಇಲಾಖೆಯಲ್ಲಿನ ಈ ಅಕ್ರಮದ ಬಗ್ಗೆ ಸಾಮಾಜಿಕ ಹೋರಾಟಗಾರ ಪರಶುರಾಮ ನೀಲ್ ನಾಯಕ್ ದಾಖಲೆಗಳ ಸಹಿತ ದೂರು ನೀಡಿದ್ದಾರೆ. ಲೋಕಾಯುಕ್ತ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಅಕ್ರಮದ ಕುರಿತು ಟಿವಿ9 ಇತ್ತೀಚೆಗೆ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದೀಗ ವರದಿಯ ಬೆನ್ನಲ್ಲೇ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಕುರಿತಾಗಿ ಸಾರಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದು, ನಕಲಿ ಪ್ರಮಾಣಪತ್ರ ನೀಡಿದವರಿಗೆ ಶೋಕಾಸ್ ನೋಟಿಸ್ ನೀಡಲು ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನಕಲಿ ಪ್ರಮಾಣಪತ್ರ ನೀಡಿದವರಿಗೆ ಮುಂಬಡ್ತಿ ನೀಡುವುದಿಲ್ಲ. ಈಗಾಗಲೇ ಎಲ್ಲಾ ದಾಖಲೆಗಳನ್ನು ಪರಿಶೀಲನೆಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.