ಮಕ್ಕಳನ್ನು ಬೈಕ್​ಗಳಲ್ಲಿ ಕರೆದೊಯ್ಯುವಾಗ ಈ ಅಂಶ ಗಮನಿಸಿ: ಇಲ್ಲದಿದ್ದರೆ ಬೀಳಲಿದೆ ಕೇಸ್, ದಂಡ

| Updated By: Ganapathi Sharma

Updated on: Jun 28, 2024 | 8:00 AM

ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೈಕ್ ಸವಾರರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಬೈಕ್ ಹಿಂದೆ, ಮುಂದೆ ಕೂರಿಸಿಕೊಂಡು ಅಜಾಗರೂಕತೆಯಿಂದ ಸಂಚಾರ ಮಾಡುವುದು ಕಂಡುಬರುತ್ತಿದೆ. ಈ ಸಮಯದಲ್ಲಿ ಮಕ್ಕಳಿಗೆ ಯಾವುದೇ ಸುರಕ್ಷತೆ ಇರುವುದಿಲ್ಲ. ಆರ್​​ಟಿಓ ಅಧಿಕಾರಿಗಳು ಅಂತಹ ಬೈಕ್ ಸವಾರರಿಗೆ ಕೇಸ್ ಹಾಕಿ ದಂಡ ವಿಧಿಸಲು ಮುಂದಾಗಿದ್ದಾರೆ. ದಂಡ, ಕೇಸ್​ನಿಂದ ಬಚಾವಾಗಲು ಏನು ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬ ವಿವರ ಇಲ್ಲಿದೆ.

ಮಕ್ಕಳನ್ನು ಬೈಕ್​ಗಳಲ್ಲಿ ಕರೆದೊಯ್ಯುವಾಗ ಈ ಅಂಶ ಗಮನಿಸಿ: ಇಲ್ಲದಿದ್ದರೆ ಬೀಳಲಿದೆ ಕೇಸ್, ದಂಡ
ಮಕ್ಕಳನ್ನು ಬೈಕ್​ಗಳಲ್ಲಿ ಕರೆದೊಯ್ಯುವಾಗ ಈ ಅಂಶ ಗಮನಿಸಿ: ಇಲ್ಲದಿದ್ದರೆ ಬೀಳಲಿದೆ ಕೇಸ್, ದಂಡ
Follow us on

ಬೆಂಗಳೂರು, ಜೂನ್ 28: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೈಕ್​​ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಹೋಗುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ (ಸೇಫ್ಟಿ ಹಾರ್ನೆಸ್ ಬೆಲ್ಟ್) ಹಾಕದಿದ್ದರೆ ಕೇಸ್ ಹಾಕಲಾಗುತ್ತದೆ ಮತ್ತು ಐನೂರರಿಂದ ಒಂದು ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ ಎರಡನೇ ವಾರದಿಂದ ಕಾರ್ಯಾಚರಣೆ

9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳು ಶಿಶು ಕವಚ ಹಾಕಲೇಬೇಕು. ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಹಾರ್ನಸ್ ಧಾರಣೆ ಮಾಡುವುದು ಕಡ್ಡಾಯ. ಜುಲೈ ಮೊದಲ ವಾರದಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ. ಎರಡನೆಯ ವಾರದಿಂದ ವಾಹನ ತಪಾಸಣೆ ಮಾಡಿ ದಂಡ ಹಾಕಲು ಶುರು ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಹೈಕೋರ್ಟ್​ ಮೆಟ್ಟಿಲೇರಿದ ಬೆನ್ನಲ್ಲೇ ಟ್ರಾಫಿಕ್ ಪೊಲೀಸರು ಅಲರ್ಟ್

ಈ ಬಗ್ಗೆ 2022ರ ಫೆಬ್ರವರಿ 2ರಂದೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಇದು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಯೋಜನೆ ಜಾರಿಯಾಗಿಲ್ಲ. ಇದೇ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಸೇಫ್ಟಿ ಹಾರ್ನೆಸ್ ಯೋಜನೆ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಸಾರಿಗೆ ಇಲಾಖೆಗೆ ಕೋರ್ಟ್​​ ಕಾಲಾವಕಾಶ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಆಯುಕ್ತ ಎಲ್ಲಾ ಆರ್​ಟಿಒಗಳಿಗೆ ಬೈಕ್​​ಗಳ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರಸ್ತೆಬದಿ ಕುಳಿತಿದ್ದ ವೃದ್ಧೆಯನ್ನು ಕಾಲಲ್ಲಿ ಒದ್ದ ಮಹಿಳಾ ಟ್ರಾಫಿಕ್ ಪೊಲೀಸ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೋಷಕರು ತುಂಬಾ ಒಳ್ಳೆಯ ಆದೇಶವಿದು. ಇದರಿಂದ ಮಕ್ಕಳ ಜೀವ ಉಳಿಯುತ್ತದೆ. ಬೈಕ್ ಗಳಲ್ಲಿ ಹಿಂದೆ ಮುಂದೆ ಯಾವುದೇ ಸೇಫ್ಟಿ ಇಲ್ಲದೆ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಾರೆ. ಪೋಷಕರು ಹಳ್ಳ, ಗುಂಡಿಗಳಲ್ಲಿ ಬ್ರೇಕ್ ಹಾಕಿದಾಗ ಮಕ್ಕಳು ಬೈಕ್ ನಿಂದ ಕೆಳಗೆ ಬೀಳಬಹುದು. ಹಿಂದೆ ಬರುವ ವಾಹನಗಳು ಮಕ್ಕಳ ಮೇಲೆ ಹರಿದು ಅನಾಹುತವಾಗಬಹುದು. ಹಾಗಾಗಿ ನಾವು ಕೂಡಲೇ ನಮ್ಮ ಮಕ್ಕಳಿಗಾಗಿ ಈ ಸೇಫ್ಟಿ ಬೆಲ್ಟ್ ಖರೀದಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಪೋಷಕ ಮಂಜುನಾಥ್ ಎಂಬವರು ತಿಳಿಸಿದ್ದಾರೆ.

ಬೈಕ್​ನಲ್ಲಿ ಸಣ್ಣ ಮಕ್ಕಳನ್ನು ಕೂರಿಸಿಕೊಂಡು ಯಾವುದೇ ಸೇಫ್ಟಿ ಇಲ್ಲದೆ ಪೋನ್​​ನಲ್ಲಿ ಮಾತಾಡಿಕೊಂಡು ಬೇಜವಾಬ್ದಾರಿ ತೋರುತ್ತಿದ್ದ ಪೋಷಕರಿಗೆ ಮುಂದಿನ ತಿಂಗಳಿನಿಂದ ಸರಿಯಾಗಿ ಬಿಸಿ ಮುಟ್ಟಿಸಲು ಆರ್​​ಟಿಒ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ