ಮೈಸೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi) ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಹೊಣೆಯನ್ನು ಸಿಐಡಿ (CID) ಕೈಗೆತ್ತಿಕೊಂಡಿದೆ. ತನಿಖೆಗಾಗಿ ಸಿಐಡಿ ತಂಡ ಮೈಸೂರಿಗೆ ಬಂದಿದ್ದು, ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದ ತಂಡ ಸೋಮವಾರ ಸಂಜೆ ನಗರಕ್ಕೆ ಆಗಮಿಸಿ ಮೈಸೂರಿನ ವಿಜಯನಗರ ಉಪವಿಭಾಗದ ಎಸಿಪಿ ಶಿವಶಂಕರ್ರಿಂದ ಮಾಹಿತಿ ಸಂಗ್ರಹಿಸಿದೆ. ಸಿಐಡಿ ತಂಡದಲ್ಲಿ ನಾಲ್ಕಕ್ಕೂ ಹೆಚ್ಚು ಅಧಿಕಾರಿಗಳಿದ್ದು, ಎಸಿಪಿ ಶಿವಶಂಕರ್ರಿಂದ ಮಾಹಿತಿ ಪಡೆದರು. ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸುವ ಬಗ್ಗೆ ಸೋಮವಾರ ಬೆಳಿಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುತ್ತಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9 ಗೆ ಮಾಹಿತಿ ನೀಡಿದ್ದರು.
ಈ ಮಧ್ಯೆ, ಸಂತ್ರಸ್ತೆ ಹಾಗೂ ಆಕೆಯ ತಾಯಿ 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸ್ಯಾಂಟ್ರೋ ರವಿ ಪರ ವಕೀಲ ಹರೀಶ್ ಪ್ರಭು ಮೈಸೂರಿನಲ್ಲಿ ಆರೋಪಿಸಿದ್ದಾರೆ. ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಲಾಗಿದ್ದಲ್ಲದೆ, ಅದನ್ನು ಬೇರೆ ರೀತಿಯಾಗಿ ಬಿಂಬಿಸಲಾಗಿದೆ. ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಮಂಜುನಾಥ್ ಅವರನ್ನು ಮಹಿಳೆ ಮದುವೆ ಆಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಸಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.
ಪ್ರಸ್ತುತ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಅನೇಕ ಆರೋಪಗಳಿವೆ. ಇವುಗಳಲ್ಲಿ ಮಾಂಸದಂಧೆ, ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದುದು ಮತ್ತು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ಶಾಮೀಲಾಗಿರುವುದೂ ಸೇರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Mon, 16 January 23