ಬೆಂಗಳೂರು: ದ್ವಿತೀಯ ಪಿಯುಸಿ (Second PU) ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶುಭ ಸುದ್ದಿ ನೀಡಿದೆ. ಪರೀಕ್ಷೆ ಬರೆಯಲು (PUC Exam) ತೆರಳುವ ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ. ಪರೀಕ್ಷೆ ಬರೆಯುವುದಕ್ಕಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ತೆರಳುವವರಿಗೂ ಇದು ಅನ್ವಯವಾಗಲಿದೆ. ಮಾರ್ಚ್ 9ರಿಂದ ಮಾರ್ಚ್ 29ರ ವರೆಗೆ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿರುವ ನಿಗಮ, ಬಸ್ ಚಾಲಕರಿಗೆ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳ ಮುಂದೆ ನಿಲುಗಡೆ ನೀಡುವಂತೆ ಸೂಚಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯನ ಮಂಡಳಿಯ ಅಧ್ಯಕ್ಷರು ಪರೀಕ್ಷೆ ಬರೆಯಲು ತೆರಳುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣದ ವ್ಯವಸ್ಥೆ ಮಾಡುವಂತೆ ಕೆಎಸ್ಆರ್ಟಿಸಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಕೆಎಸ್ಆರ್ಟಿಸಿ, ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಿಗೆ ಮತ್ತು ಅಲ್ಲಿಂದ ವಾಪಸಾಗಲು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದೆ.
ಕೆಎಸ್ಆರ್ಟಿಸಿಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕೋರಿಕೆ ಮೇರೆಗೆ ನಿಲುಗಡೆ ನೀಡಬೇಕು ಎಂದು ಚಾಲಕ ಮತ್ತು ನಿರ್ವಾಹಕರಿಗೂ ಸೂಚನೆ ನೀಡಿದೆ.
ಈ ಮಧ್ಯೆ, ಮಾರ್ಚ್ 8ಕ್ಕೆ ಮಹಿಳಾ ದಿನಾಚರಣೆಯಂದು ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಿಳಿಸಿದೆ. ಆ ದಿನ ಮಹಿಳೆಯರು ನಗರದ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ