ವಿಧಾನಸಭೆಯಲ್ಲಿ ಭದ್ರತಾ ಲೋಪ: ಬಜೆಟ್ ಮಂಡನೆ ವೇಳೆ ಸದನದಲ್ಲಿ ಬಂದು ಕುಳಿತ ಅನಾಮಿಕ ವ್ಯಕ್ತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಭದ್ರತಾ ಲೋಪವಾಗಿದೆ. ಅನಾಮಿಕ ವ್ಯಕ್ತಿಯೋರ್ವ ಸದನದೊಳಗೆ ಪ್ರವೇಶಿಸಿ ಶಾಸಕರ ಆಸನದಲ್ಲಿ ಕುಳಿತುಕೊಂಡಿದ್ದಾನೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು( ಜುಲೈ 07) ಬಜೆಟ್ (Karnataka Budget 2023) ಮಂಡನೆ ವೇಳೆ ಭದ್ರತಾ ಲೋಪವಾಗಿದೆ. ಶಾಸಕರಲ್ಲದ ವ್ಯಕ್ತಿಯೋರ್ವ ವಿಧಾನಸಭೆ ಪ್ರವೇಶಿಸಿದ್ದಾನೆ. ಅಲ್ಲದೇ ಬಜೆಟ್ ಮಂಡನೆ ವೇಳೆ ಸಮಾರು 15 ನಿಮಿಷಗಳ ಜಾಲ ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದಾನೆ. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಕೂಡಲೇ ಅವರು ಎದ್ದು ಹೋಗಿ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಆದ್ರೆ, ಅಷ್ಟರೊಳಗೆ ಆ ಅನಾಮಿಕ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆ ವ್ಯಕ್ತಿ ಯಾರು? ಏಕೆ ಬಂದಿದ್ದ? ಇಷ್ಟೊಂದು ಭದ್ರತೆ ನಡುವೆಯೂ ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದ ಅಂತೆಲ್ಲ ಪ್ರಶ್ನೆಗಳು ಉದ್ಭವಿಸಿವೆ. ಹಾಗೇ ಆತಂಕಕ್ಕೂ ಕಾರಣವಾಗಿದೆ.
ಅನಾಮಿಕ ವ್ಯಕ್ತಿಯನ್ನು ಪತ್ತೆ ಮಾಡಿದ ಪೊಲೀಸರು
ಸದನದೊಳಗೆ ಸುಮಾರು 15ರಿಂದ 20 ನಿಮಷಗಳ ಕಾಲ ಕುಳಿತು ಬಳಿಕ ದಿಢೀರ್ ನಾಪತ್ತೆಯಾಗಿದ್ದ ಅನಾಮಿಕ ವ್ಯಕ್ತಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆ ಅನಾಮಿಕ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಮಡಿದ್ದಾರೆ. ಅನಾಮಿಕ ವ್ಯಕ್ತಿಯ ಹೆಸರು ತಿಪ್ಪೇರುದ್ರ (72) ಎಂದು ಗುರುತಿಸಲಾಗಿದೆ.
ತಿಪ್ಪೇರುದ್ರ ಸದನದೊಳಗೆ ಪ್ರವೇಶಿಸುವ ವೇಳೆ ಮಾರ್ಷಲ್ಗಳು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ತಿಪ್ಪೇರುದ್ರ, ಶಾಸಕ ಎನ್ವೈ ಗೋಪಾಲಕೃಷ್ಣ ಹೆಸರು ಹೇಳಿದ್ದಲ್ಲೇ ಮಾರ್ಷಲ್ಗೆ ಅವಾಜ್ ಹಾಕಿ ಸದನದೊಳಗೆ ಪ್ರವೇಶಿಸಿದ್ದ. ಜೊತೆಗೆ ಒಂದು ಬ್ಯಾಗ್ ತಂದಿದ್ದ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಇನ್ನು ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ತಿಪ್ಪೇರುದ್ರನನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:55 pm, Fri, 7 July 23