ರಜನಿಕಾಂತ್ ಹುಟ್ಟಿದ್ದ ಬೆಂಗಳೂರಿನ ಆಸ್ಪತ್ರೆಯಲ್ಲಿ ಅತಿದೊಡ್ಡ ಕರ್ಮಕಾಂಡ ಬಟಾಬಯಲು
ಮಕ್ಕಳು ಜಗತ್ತನ್ನ ಕಣ್ಬಿಟ್ಟು ನೋಡೋ ಮೊದಲೇ ಅಪ್ಪ ಅಮ್ಮನಿಂದ ದೂರವಾಗಿ ಬಿಡುತ್ವೆ. ನನ್ನವರು ತನ್ನವರು ಯಾರು ಅನ್ನೋದು ಗೊತ್ತಾಗೋ ಮೊದಲೇ ಕಂದಮ್ಮಗಳು ಇನ್ಯಾರದ್ದೋ ಕೈ ಸೇರಿರುತ್ವೆ. ಬೆಂಗಳೂರಿನ ಹೆರಿಗೆ ಆಸ್ಪತ್ರೆ ಆಯ್ತಾ ಮಕ್ಕಳ ಮಾರಾಟದ ಅಡ್ಡೆ?
ಬೆಂಗಳೂರು: ಒಂದು ಮನೆಯಲ್ಲಿ ಮಗು ಹುಟ್ಟುತ್ತೆ ಅಂದ್ರೆ, ಆ ಮಗುವಿನ ಜೊತೆ ಅದೆಷ್ಟೋ ಕನಸುಗಳು ಹುಟ್ಟುತ್ವೆ. ಅಂಥ ಕನಸುಗಳು ಹುಟ್ಟೋ ಜಾಗವೇ ಆಸ್ಪತ್ರೆ. ಶ್ರೀಮಂತರಾದ್ರೆ ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗ್ತಾರೆ. ಆದ್ರೆ, ಬಡವರು. ದುಡ್ಡಿಲ್ದೆ ಇರೋರು.. ಅವರಿಗೆಲ್ಲ ಈ ಆಸ್ಪತ್ರೆಯೇ ಸಂಜೀವಿನಿ.
ಆದ್ರೆ ದುರಂತ ನೋಡಿ.. ಮಕ್ಕಳಪಾಲಿಗೆ ಸಂಜೀವಿನ ಆಗ್ಬೇಕಿದ್ದ ಈ ಆಸ್ಪತ್ರೆ ಈಗ ಕಂದಮ್ಮಗಳಿಗೆ ಕಂಟಕವಾಗ್ತಿದೆ. ಟಿವಿ9 ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ದಶಕಗಳ ಇತಿಹಾಸ ಇರೋ ಬೆಂಗಳೂರಿನ ಅತಿದೊಡ್ಡ ಆಸ್ಪತ್ರೆಯ ಕರ್ಮಕಾಂಡ ಬಟಾಬಯಲಾಗಿದೆ.
ವಾಣಿ ವಿಲಾಸ ಆಸ್ಪತ್ರೆ.. ಬೆಂಗಳೂರಿಗರ ಪಾಲಿಗೆ, ಬಡವರ ಪಾಲಿಗೆ ಸಂಜೀವಿನಿಯಂತೆ ಇರೋ ಆಸ್ಪತ್ರೆ. ಇದೇ ವಾಣಿ ವಿಲಾಸ ಆಸ್ಪತ್ರೆ ಹೆರಿಗೆ ಆಸ್ಪತ್ರೆ ಅಂತಾನೇ ಫೇಮಸ್. ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟಿದ್ದು ಕೂಡ ಇದೇ ಆಸ್ಪತ್ರೆಯಲ್ಲಿ. 85 ವರ್ಷಗಳ ಇತಿಹಾಸ ಇರೋ ಈ ಆಸ್ಪತ್ರೆಯಲ್ಲಿ ಸದ್ಯ ದಿನಕ್ಕೆ ಏನಿಲ್ಲ ಅಂದ್ರೂ 50 ರಿಂದ 80 ಮಕ್ಕಳು ಜಗತ್ತಿಗೆ ಕಾಲಿಡುತ್ವೆ. ತಿಂಗಳಿಗೆ 1,500 ಮಕ್ಕಳು ಈ ಭೂಮಿಗೆ ಕಾಲಿಡುತ್ವೆ.
ಆದ್ರೆ ದುರಂತ ನೋಡಿ, ಹೀಗೆ ಮಕ್ಕಳು ಜಗತ್ತನ್ನ ಕಣ್ಬಿಟ್ಟು ನೋಡೋ ಮೊದಲೇ ಅಪ್ಪ ಅಮ್ಮನಿಂದ ದೂರವಾಗಿ ಬಿಡುತ್ವೆ. ನನ್ನವರು ತನ್ನವರು ಯಾರು ಅನ್ನೋದು ಗೊತ್ತಾಗೋ ಮೊದಲೇ ಕಂದಮ್ಮಗಳು ಇನ್ಯಾರದ್ದೋ ಕೈ ಸೇರಿರುತ್ವೆ.
ಬಡ ಹೆಣ್ಣುಮಕ್ಕಳ ಪಾಲಿಗೆ, ಮಕ್ಕಳ ಪಾಲಿಗೆ ವರವಾಗಬೇಕಿದ್ದ ಈ ವಾಣಿ ವಿಲಾಸ ಆಸ್ಪತ್ರೆಯ ಈಗ ವಾಣಿ ವಿಚಿತ್ರ ಆಸ್ಪತ್ರೆಯಾಗಿದೆ. ಹೆಜ್ಜೆ ಹೆಜ್ಜೆಗೂ ನಿರ್ಲಕ್ಷ್ಯತನ.. ಕಾಲಿಟ್ಟಲೆಲ್ಲ ಬೇಜವಾಬ್ದಾರಿತನ. ಆಸ್ಪತ್ರೆಯ ತುಂಬಾ ದಗಲ್ ಬಾಜಿಗಳ ದಂಡೇ ನೆರೆದಿದೆ. ಟಿವಿ9 ಈ ವಾಣಿ ವಿಲಾಸ ಆಸ್ಪತ್ರೆಯ ಕರ್ಮಕಾಂಡವನ್ನ ಎಳೆ ಎಳೆಯಾಗಿ ಬಯಲು ಮಾಡಿದೆ.
ಹುಟ್ಟಿದ ಮಗು ಕಳ್ಳತನವಾದ್ರೂ ಹೇಳೋರಿಲ್ಲ ಕೇಳೋರಿಲ್ಲ ಕಳೆದ ನವೆಂಬರ್ 11 ರಂದು, ಇದೇ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ಹಸುಗೂಸನ್ನ ಕಿರಾತಕ ಮಹಿಳೆಯೊಬ್ಬಳು ಕದ್ದೊಯ್ದಿಳು. ಈ ಕೇಸ್ ದೊಡ್ಡ ಸಂಚಲನವನ್ನೇ ಎಬ್ಬಿಸಿತ್ತು. ಮಗುವನ್ನ ಕಳೆದುಕೊಂಡಿದ್ದ ತಾಯಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ.
ಮಗು ಕಳ್ಳತನದ ಬೆನ್ನಲ್ಲೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ನರ್ಸ್ ನಿರ್ಲಕ್ಷ್ಯ, ಸೆಕ್ಯೂರಿಟಿಯ ವೈಫಲ್ಯ ಬಟಾಬಯಲಾಗಿತ್ತು. ಆಸ್ಪತ್ರೆಯಲ್ಲಿ 41 ಸಿಸಿ ಕ್ಯಾಮರಾಗಳಿದ್ರೂ, ಆವತ್ತು ವರ್ಕ್ ಆಗ್ತಿದ್ದು ಕೇವಲ 7 ಸಿಸಿ ಕ್ಯಾಮರಾಗಳು ಮಾತ್ರ. ಸ್ವತಃ ಆಸ್ಪತ್ರೆಯ ವೈದ್ಯಾಧಿಕಾರಿ ಸಂತೋಷ್ ಪ್ರಭು ತಮ್ಮಿಂದಾದ ದೊಡ್ಡ ತಪ್ಪನ್ನ ತಾವೇ ಒಪ್ಪಿಕೊಂಡಿದ್ರು.
ಬಳಿಕ ನಾವು ಫುಲ್ ಅಲರ್ಟ್ ಆಗಿದ್ದೀವಿ. ವಿಸಿಟರ್ ಪಾಸ್ ಕಡ್ಡಾಯ ಮಾಡಿದ್ದೀವಿ. ಒಂದು ಪೇಷಂಟ್ಗೆ ಒಬ್ಬರನ್ನ ಮಾತ್ರ ಒಳಗೆ ಬಿಡ್ತೀವಿ. ನಾರ್ಮಲ್ ಆಗಿ ಯಾರಂದ್ರೆ ಯಾರೂ ಆಸ್ಪತ್ರೆಯೊಳಗೆ ಬರೋಕೆ ಆಗಲ್ಲ, ವಿತ್ ಔಟ್ ಪಾಸ್ ನೋ ಎಂಟ್ರಿ ಅಂತೆಲ್ಲ ಹೇಳ್ತಿದ್ದರು.
ಆದ್ರೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಈಗಲೂ ಅದೇ ಬೇಜವಾಬ್ದಾರಿ. ಅದೇ ನಿರ್ಲಕ್ಷ್ಯತನ ತಾಂಡವಾಡ್ತಿದೆ. ಅದೆಂಥ ಸೆಕ್ಯೂರಿಟಿ ಕೊಟ್ಟಿದ್ದಾರೆ ಅನ್ನೋದನ್ನ ಬಯಲು ಮಾಡೋಕೆ ಟಿವಿ9 ಸ್ಟಿಂಗ್ ಆಪರೇಷ್ನಗೆ ಇಳಿದಿತ್ತು. ಅಲ್ಲಿ ನಮ್ಮ ರಹಸ್ಯ ಕ್ಯಾಮರಾ ಕಣ್ಣಲ್ಲಿ ಆಸ್ಪತ್ರೆಯ ಬಂಡವಾಳ ಬಯಲಾಗಿದೆ.
ಸೀನ್ ನಂ.1 : ಎಂಟ್ರಿ ಗೇಟ್ನಲ್ಲೇ ನಿರ್ಲಕ್ಷ್ಯದ ದಿಗ್ದರ್ಶನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಂಡಿದ್ದು ಬರೀ ಅವ್ಯವಸ್ಥೆ.. ಅವ್ಯವಸ್ಥೆ.. ಅವ್ಯವಸ್ಥೆ. ಸೆಕ್ಯೂರಿಟಿ ಟೈಟ್ ಮಾಡಿದ್ದೀವಿ, ಅಂತೆಲ್ಲ ಹೇಳಿದ್ದ ಅಧಿಕಾರಿಗಳ ಬಂಡವಾಳ ಮುಖ್ಯ ದ್ವಾರದ ಬಾಗಿಲಲ್ಲೇ ಬಯಲಾಗಿತ್ತು. ಯಾಕಂದ್ರೆ, ರಹಸ್ಯ ಕ್ಯಾಮರಾ ಹೊತ್ತ ಸದಸ್ಯ ಒಳಗೆ ನೇರವಾಗಿ ಹೋದರೂ ಯಾರಂದ್ರೆ ಯಾರೂ ಚೆಕ್ ಮಾಡಲಿಲ್ಲ. ಮೊದಲೇ ಕೊರೊನಾ ಇದೆ, ಹೇಳಿ ಕೇಳಿ ಇದು ಹೆರಿಗೆ ಆಸ್ಪತ್ರೆ ಇಲ್ಲಿ ಶುಚಿತ್ವಕ್ಕೆ ಪ್ರಾಮುಖ್ಯತೆ ಕೊಡಬೇಕು. ಆದ್ರೆ ಎಂಟ್ರಿ ಡೋರ್ನಲ್ಲಿ ಯಾವ ಸ್ಯಾನಿಟೈಸರೂ ಕೊಡಲಿಲ್ಲ, ಮೆಟಲ್ ಡಿಟೆಕ್ಟರ್ ಕೂಡಾ ಇರಲಿಲ್ಲ. ಇಲ್ಲಿಗೆ ಬಾಂಬ್ ತಗೊಂಡು ಹೋದ್ರೂ ಯಾರಿಗೂ ಗೊತ್ತಾಗಲ್ಲ..
ಸೀನ್ ನಂ.2 : ತೀವ್ರ ಅಪಾಯ ಗರ್ಭಧಾರಣೆ ಆರೈಕೆ ಕೇಂದ್ರದಲ್ಲಿ ಕೇಳೋರಿಲ್ಲ ಹೀಗೆ ಆಸ್ಪತ್ರೆ ಗೇಟ್ ಮೂಲಕ ಹೋದ ಟಿವಿ9 ತಂಡ ಮುಂದೆ ಎಂಟ್ರಿ ಕೊಟ್ಟಿದ್ದೇ ಭಾರೀ ಸೂಕ್ಷ್ಮದ ಮತ್ತು ಅಪಾಯಕಾರಿ ಗರ್ಭಧಾರಣೆ ಆರೈಕೆ ಕೇಂದ್ರಕ್ಕೆ. ಅಸಲಿಗೆ ಇಲ್ಲಿ ಹೈ ಸೆಕ್ಯೂರಿಟಿ ಇರಬೇಕು. ಆದ್ರೆ, ಇಲ್ಲಿ ಸೆಕ್ಯೂರಿಟಿ ಹೋಗಲಿ, ಯಾರಪ್ಪ ನೀವು ಅಂತಾ ಕೇಳೋಕೆ ಒಂದು ನರಪಿಳ್ಳೆ ಸಹ ಇರಲಿಲ್ಲ. ಈ ಕೇಂದ್ರದಲ್ಲಿ ಯಾರ್ ಬೇಕಾದ್ರೂ ರಾಜರೋಷವಾಗಿ ಹೋಗಬಹುದು. ಮಕ್ಕಳನ್ನೂ ಬೇಕಿದ್ರೂ ಆರಾಮಾಗಿ ತಗೊಂಡು ಹೋಗಹುದು.
ಸೀನ್ ನಂ.3 : ಪಾಸ್ ಇಲ್ದೆ ಇದ್ರೂ ಪ್ರಸೂತಿ ವಾರ್ಡ್ಗೆ ಫ್ರೀ ಎಂಟ್ರಿ ವಾಣಿ ವಿಲಾಸ ಆಸ್ಪತ್ರೆಯ ಪ್ರಮುಖ ವಾರ್ಡ್ಗಳಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗ ಕೂಡಾ ಒಂದು. ಇಲ್ಲೆ ಹೆಚ್ಚಾಗಿ ಹೆರಿಗೆ ಆಗುತ್ವೆ. ಆಗಲೇ ಡಾಕ್ಟರ್ ಸಂತೋಷ್ ಹೇಳಿದ ರೂಲ್ಸ್ ಪ್ರಕಾರ ಇಲ್ಲಿ ಪೋಷಕರೂ ಬಂದ್ರೂ ಅವರ ಐಡೆಂಟಿಟಿ ಕಾರ್ಡ್ ಅಥವಾ ಪಾಸ್ ನೋಡಿ ಬಿಡಬೇಕು. ಆದ್ರೆ ಇಲ್ಲಿ ಆ ರೀತಿ ಚೆಕ್ ಮಾಡೋರೂ ಇಲ್ಲ, ಇದ್ರೂ ಚೆಕ್ ಮಾಡಲ್ಲ. ಟಿವಿ9 ರಹಸ್ಯ ಕಾರ್ಯಾಚರಣೆ ಟೀಂ ಸದಸ್ಯ ಈ ವಾರ್ಡ್ಗೆ ಆರಾಮಾಗಿ ಹೋಗಿ, ಬಂದ್ರೂ ಯಾರೋ ಪ್ರಶ್ನೆ ಮಾಡಲಿಲ್ಲ.
ಸೀನ್ ನಂ.4 : ನಾಮಕಾವಾಸ್ತೆ ಪ್ರವೇಶ ನಿಷೇಧ ಬೋರ್ಡ್ ಅಲ್ಲೊಂದು ಕಡೆ.. ಪ್ರವೇಶ ನಿಷೇಧಿಸಲಾಗಿದೆ ಅಂತಾ ದೊಡ್ಡದಾಗಿ ಬೋರ್ಡ್ ಹಾಕಿದ್ದಾರೆ. ಆದ್ರೆ ನಿಂತು ಚೆಕ್ ಮಾಡೋಕೆ ಒಬ್ಬ ಸೆಕ್ಯೂರಿಟಿಯೂ ಇಲ್ಲ. ಇನ್ನು ಈ ಬೋರ್ಡ್ನಲ್ಲಿ ಪುರುಷರಿಗೆ ನೋ ಎಂಟ್ರಿ ಅಂತಾ ಹಾಕಿದ್ದಾರೆ. ಆದ್ರೆ ಇಲ್ಲಿ ಗಂಡಸರು ಆರಾಮಾಗಿ ಒಳಗೆ ಹೋಗ್ತಿದ್ದಾರೆ. ಆರಾಮಾಗಿ ಬರ್ತಿದ್ದಾರೆ. ಯಾರ್ ಬೇಕಾದ್ರು ಹೋಗಿ ಮಕ್ಕಳನ್ನ ಎತ್ತಿಕೊಂಡು ಬರಬಹುದು ಅನ್ನೋ ರೇಂಜ್ಗೆ ಫ್ರೀಡಂ ಇದೆ. ಇಲ್ಲಿ ಯಾರೂ ಹೇಳೋರಿಲ್ಲ ಕೇಳೋರಿಲ್ಲ.. ಅಷ್ಟೆಲ್ಲ ಸೆಕ್ಯೂರಿಟಿ ಬಗ್ಗೆ ಮಾತಾಡೋರು, ಪಾಸ್ ಇದ್ರಷ್ಟೆ ಎಂಟ್ರಿ ಅಂತಾ ದೊಡ್ಡ ದೊಡ್ಡದಾಗಿ ಹೇಳೋ ಅಧಿಕಾರಿಗಳು ಇದನ್ನ ಒಂದ್ಸಲ ನೋಡ್ಕೊಂಡು ಬಿಡಿ.
ಸೀನ್ ನಂ.5 : ಎನ್ಐಸಿಯು – ನವಜಾತ ಶಿಶುಗಳ ಘಟಕದಲ್ಲೂ ನೋ ಚೆಕ್ಕಿಂಗ್ ಕಳೆದ ತಿಂಗಳು ಮಗುವಿನ ಕಳ್ಳತನ ನಡೆದಿದ್ದ ಎನ್ಐಸಿಯು ವಿಭಾಗದಲ್ಲಿ ಮಗು ಕಳ್ಳತನ ನಡೆದ್ಮೇಲೂ ಇಲ್ಲಿನ ಸಿಬ್ಬಂದಿ ಅಲರ್ಟ್ ಆಗಿಲ್ಲ. ಅಲ್ಲಿ ಯಾರೂ ಚೆಕ್ ಮಾಡೋರೂ ಇಲ್ಲ.. ಯಾರೇ ಒಳಗೆ ಹೋಗಿ ಬಂದ್ರೂ ಯಾರೂ ಪ್ರಶ್ನಿಸೋರಿಲ್ಲ.
ಹೀಗೆ ಹೆರಿಗೆ ಕೊಠಡಿ, ಮಕ್ಕಳ ವಿಭಾಗ, ಸ್ಕ್ಯಾನಿಂಗ್, ಸ್ತ್ರೀ ರೋಗ ತಪಾಸಣ ಕೇಂದ್ರ, ಆಸ್ಪತ್ರೆಯ ಎಂಟ್ರಿಯ ಮತ್ತೊಂದು ಗೇಟ್. ಹೀಗೆ ಆಸ್ಪತ್ರೆಯ ಯಾವ ವಿಭಾಗದಲ್ಲೂ, ಯಾವ ಗೇಟ್ನಲ್ಲೂ ಯಾವುದೇ ಚೆಕ್ಕಿಂಗ್ ಇಲ್ಲ. ಹೀಗೆ ಟಿವಿ9 ರಹಸ್ಯ ಕಾರ್ಯಾಚರಣೆ ತಂಡ ಇಡೀ ವಾಣಿ ವಿಲಾಸ ಆಸ್ಪತ್ರೆಯನ್ನ ಒಂದು ರೌಂಡ್ ಹಾಕಿದ್ರೂ, ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ.
ಹಾಗಿದ್ರೆ ಇದೇನಾ ನೀವು ಹೇಳಿದ ಸೂಪರ್ ಸೆಕ್ಯೂರಿಟಿ ವ್ಯವಸ್ಥೆ.. ಇದೇನಾ ಮಕ್ಕಳಿಗೆ ಕೊಡೋ ರಕ್ಷಣೆ.. ಆಸ್ಪತ್ರೆಯಲ್ಲಿ ಮಕ್ಕಳನ್ನ ಅನಾಮತ್ತಾಗಿ ಕದ್ದುಕೊಂಡು ಹೋದ್ರೂ ಯಾರಿಗೂ ಗೊತ್ತಾಗಲ್ಲ. ಈ ರೀತಿ ನಿರ್ಲಕ್ಷ್ಯ ಮಾಡಿದ್ರೆ ಮಕ್ಕಳು ಕಳ್ಳತನವಾಗದೇ ಇನ್ನೇನ್ ಆಗೋದಕ್ಕೆ ಸಾಧ್ಯ. ಇದಕ್ಕೆ ಸಚಿವರು, ಆಸ್ಪತ್ರೆಯ ಅಧಿಕಾರಿಗಳು ಉತ್ತರ ಕೊಡಬೇಕು.
ಮಗುವಿನ ಅಜ್ಜಿ ಅಂತಾ ಹೇಳಿ.. ನವಜಾತ ಶಿಶು ಕದ್ದು ಮಾರಿದ್ದ ಕಿರಾತಕರು ಅಂದರ್ ಆದರು