ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿದ್ರೆ, ಜನಜಾಗೃತಿಗಾಗಿ ಬಿಜೆಪಿ ಮುಖಂಡರು ಮನೆ ಮನೆಗೆ ತೆರಳುತ್ತಿದ್ದಾರೆ. ಇಂದು ಅಮಿತ್ ಶಾ ರಾಜ್ಯಕ್ಕೆ ಆಗಮಿಸ್ತಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಬೃಹತ್ ಜನಜಾಗೃತಿ ಸಭೆಯಲ್ಲಿ ಅಬ್ಬರಿಸಲಿದ್ದಾರೆ.
ಚಾಣಕ್ಯನ ಸ್ವಾಗತಕ್ಕೆ ಬೆಂಗಳೂರು ಸಜ್ಜು:
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ ಜನಜಾಗೃತಿ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಹೀಗಾಗಿ, ಅಮಿತ್ ಶಾ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಸರ್ವ ಸನ್ನದ್ಧವಾಗಿ ನಿಂತಿದೆ.
ಬೆಂಗಳೂರಿಗೆ ಅಮಿತ್ ಶಾ:
ಇಂದು ಮಧ್ಯಾಹ್ನ 12.15ಕ್ಕೆ ಅಮಿತ್ ಶಾ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಅರಮನೆ ಮೈದಾನಕ್ಕೆ ಬರಲಿದ್ದಾರೆ. ನಂತ್ರ ಅಲ್ಲಿ ನಡೆಯೋ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಾದ ನಂತ್ರ ಮಧ್ಯಾಹ್ನ 3ಕ್ಕೆ ಜಯನಗರದ 5ನೇ ಬ್ಲಾಕ್ನಲ್ಲಿ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಉದ್ಘಾಟನೆ ಇದೆ. ಅಲ್ಲಿಗೆ ತೆರಳಿ ಸಂಸದರ ಕಚೇರಿಗೆ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ಮುಗಿದ ನಂತ್ರ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಲಿದ್ದಾರೆ.
ಹುಬ್ಬಳ್ಳಿಯಲ್ಲಿ ಅಬ್ಬರಿಸಲಿರುವ ಚಾಣಕ್ಯ:
ಸಂಜೆ 5 ಗಂಟೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಸಮಾವೇಶ ಇದೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶದಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶಕ್ಕಾಗಿ 400 ಚದರ ಅಡಿ ವಿಸ್ತೀರ್ಣದ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ದೊಡ್ಡ ವೇದಿಕೆ ಪಕ್ಕದಲ್ಲಿ ಸ್ಥಳೀಯ ಹಾಗೂ ರಾಜ್ಯ ಬಿಜೆಪಿ ಮುಖಂಡರಿಗೆ ಮತ್ತೊಂದು ವೇದಿಕೆ ನಿರ್ಮಿಸಲಾಗಿದೆ. ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 50 ಸಾವಿರಕ್ಕೂ ಹೆಚ್ಚು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಕೇಸರಿಮಯವಾಗಿದ್ದು, ನಗರದ ಚೆನ್ನಮ್ಮ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ವಿವಿಧ ರಸ್ತೆಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿವೆ.
ಇನ್ನು, ಸಮಾವೇಶ ವಿರೋಧಿಸಿ ಕಾಂಗ್ರೆಸ್ ಅಮಿತ್ ಶಾ ಗೋ ಬ್ಯಾಕ್ ಪ್ರತಿಭಟನೆ ಆರಂಭಿಸಿದ್ದು, ಇಂದು ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಹೋರಾಟಕ್ಕೆ ಸಜ್ಜಾಗಿದೆ. ಮತ್ತೊಂದೆಡೆ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒಟ್ನಲ್ಲಿ, ಇಂದು ರಾಜ್ಯಕ್ಕೆ ಅಮಿತ್ ಎಂಟ್ರಿ ಕೊಡ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಚಾಣಕ್ಯನ ಆಗಮನಕ್ಕೆ ಬೆಂಗಳೂರು ಸಜ್ಜಾಗಿದೆ.