ಕರ್ನಾಟಕದಲ್ಲಿ ಸರಣಿ ಕೊಲೆಗಳು, ಭುಗಿಲೆದ್ದ ಆಕ್ರೋಶ: ಕಾನೂನು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ನಾಯಕರಿಂದಲೇ ಅಸಮಾಧಾನ

| Updated By: ಗಣಪತಿ ಶರ್ಮ

Updated on: May 17, 2024 | 7:53 AM

ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದು ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವೂ ಎದ್ದು ಕಂಡಿರುವುದರಿಂದ ಸರ್ಕಾರದ ವಿರುದ್ಧ ಜನರ ಆಕ್ರೊಶ ಹೆಚ್ಚಾಗಿದೆ. ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಸರಣಿ ಕೊಲೆಗಳು, ಭುಗಿಲೆದ್ದ ಆಕ್ರೋಶ: ಕಾನೂನು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ನಾಯಕರಿಂದಲೇ ಅಸಮಾಧಾನ
ಕರ್ನಾಟಕದಲ್ಲಿ ಸರಣಿ ಕೊಲೆಗಳು, ಭುಗಿಲೆದ್ದ ಆಕ್ರೋಶ
Follow us on

ಬೆಂಗಳೂರು, ಮೇ 17: ಕರ್ನಾಟಕದ (Karnataka) ವಿವಿಧ ಕಡೆಗಳಲ್ಲಿ ಅಪರಾಧ ಕೃತ್ಯಗಳು, ಕೊಲೆಗಳು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಸರಣಿ ಕೊಲೆಗಳಿಂದ (Serial murders) ಅಕ್ಷರಶಃ ನಲುಗಿದೆ. ಈ ಮಧ್ಯೆ, ಯುವತಿ ಅಂಜಲಿ ಅಂಬಿಗೇರ ಕೊಲೆ ಖಂಡಿಸಿ, ಜನ ಬೀದಿಗೆ ಇಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಅತ್ತ ಕೊಲೆ ಆರೋಪಿ ಗಿರೀಶ್ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ನಗರ ಒಂದು ತಿಂಗಳ ಅವಧಿಯಲ್ಲಿ 2 ಭೀಕರ ಕೊಲೆಗಳಿಗೆ ಸಾಕ್ಷಿಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಮುಖಂಡರೇ ಆರೋಪಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಅಸಮರ್ಥ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎಂದು ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ ಆಗ್ರಹಿಸಿದ್ದಾರೆ. ಇದು ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ. ಅಂಜಲಿ ಕೊಲೆ ಖಂಡಿಸಿ ಹುಬ್ಬಳ್ಳಿ ಟೌನ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ಕಳೆದ ತಿಂಗಳಷ್ಟೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ, ವಿದ್ಯಾರ್ಥಿನಿ ನೇಹಾರನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ರಾಜ್ಯದಾದ್ಯಂತ ರಾಜಕೀಯವಾಗಿಯೂ ಭಾರಿ ಸದ್ದು ಮಾಡಿತ್ತು.

ವಿದ್ಯಾರ್ಥಿನಿಯ ರುಂಡ ಕತ್ತರಿಸಿದ ಪ್ರಕರಣ: ಗೃಹ ಸಚಿವರಿಂದ ಸಾಂತ್ವನ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬದವರಿಗೆ ಗೃಹ ಸಚಿವ ಪರಮೇಶ್ವರ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ!

ಒಂದೆಡೆ ವಿದ್ಯಾರ್ಥಿನಿಯರ ಕೊಲೆಗಳು ನಡೆಯುತ್ತಿದ್ರೆ ಇತ್ತ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಸಾವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟ್​ನಲ್ಲಿ ಅಮ್ಮನ ಜೊತೆ ವಾಸವಾಗಿದ್ದ ಪ್ರಭುದ್ಧ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಇವರ ಮೃತದೇಹ ಮನೆಯ ಬಾತ್ ರೂಮ್​ನಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿತ್ತು. ಎಡಗೈಯ ಮಣಿಕಟ್ಟು ತುಂಡಾಗಿತ್ತು. ಕುತ್ತಿಗೆ ಬಳಿ ಚಾಕುವಿನಿಂದ ಸೀಳಿದಂತಿತ್ತು. ತೀವ್ರ ರಕ್ತಸ್ರಾವ ಆಗಿ ವಿದ್ಯಾರ್ಥಿನಿ ಮೃತಪಟ್ಟಿದ್ದರು. ಈ ಸಾವಿನ ಹಿಂದೆ ಹಲವು ಅನುಮಾನಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ನೇಹಾ, ಅಂಜಲಿ ಹತ್ಯೆ: ಅಧಿಕಾರಿಗಳ ಬದಲಾವಣೆಗೆ ಗೃಹ ಸಚಿವರಿಗೆ ಪತ್ರ ಬರೆದ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ

ಮನೆಯಲ್ಲಿ ಒಬ್ಬಳೇ ಇದ್ದು, ಸಂಜೆ ತಾಯಿ ಮನೆಗೆ ಬಂದಾಗ ಮನೆ ಹಿಂದಿನ ಬಾಗಿಲು ತೆರೆದಿತ್ತು‌‌. ಅನುಮಾನಗೊಂಡು ಹೋಗಿ ನೋಡಿದರೆ ಬಾತ್ ರೂಮ್​ನಲ್ಲಿ ಮಗಳು ಹೆಣವಾಗಿರುವುದು ತಾಯಿಗೆ ಕಂಡುಬಂದಿತ್ತು. ಡೆತ್ ನೋಟ್ ಕೂಡ ಸಿಕ್ಕಿದೆ. ಆದರೆ ‘ಪ್ರಬುದ್ಧ ಕೈಬರಹ ಅದಲ್ಲಲ. ಇದು ಕೊಲೆಯೇ’ ಎಂದು ತಾಯಿ ಆರೋಪಿಸಿದ್ದಾರೆ. ಆದರೆ, ಈ ಮುಂಚೆಯೂ ಪ್ರಬುದ್ಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಎಡಗೈಯಲ್ಲಿರುವ ಗಾಯದ ಗುರುತುಗಳು ಇದಕ್ಕೆ ಸಾಕ್ಷಿಯಾಗಿವೆ. ಆದರೆ ಪೋಷಕರು, ಸ್ಥಳೀಯರು ಆತ್ಮಹತ್ಯೆ ಅಲ್ಲ ಎನ್ನುತ್ತಿರುವುದು ಹಲವು ಅನುಮಾನ ಹುಟ್ಟು ಹಾಕಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ