ಬೆಂಗಳೂರು, (ಮೇ.02): ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (Sexual assault Case) ಸಂಬಂಧಿಸಿದಂತೆ ಎ1 ಆರೋಪಿ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ (HD Revanna) ಅವರು ಜಾಮೀನು(Bail) ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಸನ (Hassan) ಜಿಲ್ಲೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ ಡಿ.ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ (Bengaluru Session Court) ಅರ್ಜಿ ಸಲ್ಲಿಸಿದ್ದಾರೆ. ಎಸ್ಐಟಿ ಈಗಾಗಲೇ ಈ ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದು, ಮಹತ್ವದ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್ಗೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ರೇವಣ್ಣ ಕೋರ್ಟ್ ಮೆಟ್ಟಿಲೇರಿರುವುದು ಕುತೂಹಲ ಮೂಡಿಸಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಪ್ರಜ್ವಲ್ ರೇವಣ್ಣ ಮತ್ತು ತಂದೆ ಎಚ್ಡಿ ರೇವಣ್ಣ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇನ್ನು ಈ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಎ1 ಆರೋಪಿಯಾಗಿದ್ದರೆ, ಪುತ್ರ ಎ2 ಆರೋಪಿಯಾಗಿದ್ದಾರೆ. ಇನ್ನು ಈ ಪ್ರಕರಣದ ಎಸ್ಐಟಿ ತನಿಖೆ ನಡೆಸಿದ್ದು, ಈಗಾಗಲೇ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ಯಾರು? ಕೊನೆಗೂ ಸ್ಫೋಟಕ ಮಾಹಿತಿ ಬಹಿರಂಗ
ಆದ್ರೆ, ರೇವಣ್ಣ ಆಗಲಿ ಪ್ರಜ್ವಲ್ ಆಗಲಿ ಇದುವರೆಗೂ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಬದಲಿಗೆ ರೇವಣ್ಣ ಕಾನೂನು ತಜ್ಞರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು, ಇದೀಗ ಅಂತಿಮವಾಗಿ ಅವರ ಸಲಹೆ ಮೇರೆಗೆ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ ಕೋರ್ಟ್ಗೆ ಅರ್ಜಿಸಲ್ಲಿಸಿದ್ದಾರೆ. ಆದ್ರೆ, ಕೋರ್ಟ್ ಜಾಮೀನು ನೀಡುತ್ತಾ? ಅಥವಾ ಬೇಲ್ ಅರ್ಜಿಯನ್ನು ರದ್ದುಗೊಳಿಸುತ್ತಾ ಎನ್ನುವುದೇ ಕುತೂಹಲ ಮೂಡಿಸಿದೆ. ಒಂದು ವೇಳೆ ಜಾಮೀನು ಅರ್ಜಿ ರದ್ದಾದರೆ ರೇವಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಅವಕಾಶ ಇದೆ.
ಇನ್ನು ರೇವಣ್ಣ ಅವರ ಪುತ್ರ ಎ2 ಆರೋಪಿ ಪ್ರಜ್ವಲ್ ರೇವಣ್ಣ ಇನ್ನೂ ವಿದೇಶದಲ್ಲಿರುವುದರಿಂದ ವಿಚಾರಣೆಗೆ ಏಳು ದಿನ ಕಾಲಾವಕಾಶ ಕೋರಿದ್ದಾರೆ. ಆದ್ರೆ, ಇದಕ್ಕೆ ಎಸ್ಐಟಿ ನಿರಾಕರಿಸಿದ್ದು, ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಪ್ರಜ್ವಲ್ಗೆ ಸಂಕಷ್ಟ ಎದುರಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಪರ ವಕೀಲ ಸಹ ಇತ್ತ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ರೇವಣ್ಣ ಅವರ ಜಾಮೀನು ಅರ್ಜಿ ಏನಾಗಲಿದೆ ಎಂದು ನೋಡಿಕೊಂಡು ಪ್ರಜ್ವಲ್ ಪರ ವಕೀಲರು ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Thu, 2 May 24