ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ಯಾರು? ಕೊನೆಗೂ ಸ್ಫೋಟಕ ಮಾಹಿತಿ ಬಹಿರಂಗ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಮಾತ್ರವಲ್ಲ ವಿದೇಶ ಮಾಧ್ಯಗಳಲ್ಲೂ ಸುದ್ದಿಯಾಗಿದೆ. ಈ ಸಂಬಂಧ ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಸಂತ್ರಸ್ತೆಯರಿಂದ ಮಾಹಿತಿ ಕಲೆಹಾಕುವ ಕಾರ್ಯ ನಡೆಸಿದ್ದಾರೆ. ಇನ್ನು ಮೊದಲಿಗೆ ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಗಿದ್ದೇಗೆ?ವಿಡಿಯೋಗಳನ್ನು ಯಾರು ಬಿಡುಗಡೆ ಮಾಡಿದ್ರು? ಎನ್ನುವ ಸ್ಫೋಟಕ ಮಾಹಿತಿ ಸಿಕ್ಕಿದೆ.
ಬೆಂಗಳೂರು, ಹಾಸನ(ಮೇ.02): ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಪ್ರಕರಣ ದಾಖಲಾದ ಮೇಲೆ SIT ತನಿಖೆ ಚುರುಕುಗೊಳಿಸಿದೆ. ತನಿಖೆ ನಡೆಯುತ್ತಿರುವಾಗಲೇ ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋವನ್ನು ಮೊದಲು ಬಿಡುಗಡೆ ಮಾಡಿರುವುದು ಯಾರು ಎನ್ನುವುದೇ ನಿಗೂಢವಾಗಿತ್ತು. ಈ ಸಂಬಂಧ ಕುಮಾರಸ್ವಾಮಿ (HD Kumaraswamy)-ಡಿಕೆ ಶಿವಕುಮಾರ್(DK Shivakumar) ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಇದರ ಮಧ್ಯೆ ಇದೀಗ ವಿಡಿಯೋ ರಿಲೀಸ್ ಮಾಡಿದ್ದವರು ಯಾರು ಎನ್ನುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಅವರ ಬಳಿಕ ಕಾರು ಚಾಲಕನಾಗಿದ್ದ ಕಾರ್ತಿಕ್, ಮೊದಲು ವಿಡಿಯೋವನ್ನು ವಾಟ್ಸಪ್ ಮೂಲಕ ಬೇರೊಬ್ಬರಿಗೆ ಕಳುಹಿಸಿದ್ದಾರೆ. ಆತ ಬೇರೆ ಯಾರೂ ಅಲ್ಲ ಕಾಂಗ್ರೆಸ್ ಕಾರ್ಯಕರ್ತ, ಸಚಿವ ಜಮೀರ್ ಅಹಮ್ಮದ್ ಖಾನ್ ಬೆಂಬಲಿಗ ಬೇಲೂರು ಮೂಲದ ನವೀನ್ ಗೌಡ ಅವರಿಗೆ ವಿಡಿಯೋ ಕಳುಹಿಸಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ವಿಡಿಯೋ ಬಗ್ಗೆ ಪೋಸ್ಟ್ ಹಾಕಿದ್ದ ನವೀನ್ ಗೌಡ
ವಿಡಿಯೋ ಸಿಕ್ಕ ಬಳಿಕ ನವೀನ್ ಗೌಡ, ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಪೋಸ್ಟ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಫೇಸ್ಬುಕ್ನಲ್ಲಿ ಮೊದಲ ಪೋಸ್ಟ್ ಮಾಡಿದ್ದ. ನಂತರ ಸ್ವಲ್ಪ ಹೊತ್ತಿನಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆ ಗೆ ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್, ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದಾನೆ. ಇದೀಗ ನವೀನ್ ಗೌಡ ಎಂಬಾತನಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ: ಪ್ರಜ್ವಲ್ ರೇವಣ್ಣನ ನಡೆ, ಮನಸ್ಥಿತಿಗೆ ಲೈಂಗಿಕ-ಮಾನಸಿಕ ತಜ್ಞರೇ ಶಾಕ್
ನವೀನ್ ಗೌಡಗೆ ನೋಟಿಸ್
ವಿಡಿಯೋ ಬಿಡುಗಡೆ ಮಾಡಿರುವ ಆರೋಪದ ಮೇಲೆ ನವೀನ್ ಗೌಡ ವಿರುದ್ಧ ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಇದೀಗ ನವೀನ್ ಗೌಡನನ್ನ ಎಸ್‍ಐಟಿ ವಿಚಾರಣೆಗೆ ಕರೆದಿದೆ. ಮೇ.4 ರಂದು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಜೊತೆಗೆ ಖುದ್ದು ಎಸ್‍ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೂಡ ಕೊಟ್ಟಿದ್ದಾರೆ. ಈಗಾಗಲೇ ನವೀನ್ ಗೌಡ ಫೋನ್‍ನಲ್ಲಿ ಪ್ರಾಥಮಿಕ ಮಾಹಿತಿ ನೀಡಿದ್ದು, ಈ ವೇಳೆ ನಾನು ಪೆನ್‍ಡ್ರೈವ್ ಹಂಚಿಕೆ ಮಾಡಿಲ್ಲ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಇತ್ತ ಲೈಂಗಿಕ ದೌರ್ಜನ್ಯ ಪ್ರಕರಣದ ಎ1 ಆರೋಪಿ ಎಚ್ಡಿ ರೇವಣ್ಣ ಹಾಗೂ ಎ2 ಆರೋಪಿ ಪ್ರಜ್ವಲ್ ರೇವಣ್ಣಗೂ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದ್ರೆ ರೇವಣ್ಣ ಅವರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಇತ್ತ ಪ್ರಜ್ವಲ್ ರೇವಣ್ಣ ಅವರು ಸಮಯಾವಕಾಶ ಕೇಳಿ ತಮ್ಮ ವಕೀಲರ ಮೂಲಕ ಎಸ್‍ಐಟಿ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರ ಸಮಯ ಕೊಡಿ ಎಸ್‍ಐಟಿ ಮುಂದೆ ಹಾಜರಾಗುತ್ತೇನೆ. ಆದಷ್ಟು ಬೇಗ ಸತ್ಯ ಹೊರಗೆ ಬರುತ್ತೆ ಎಂದು ತಮ್ಮ ಫೇಸ್‍ಬುಕ್‍ನಲ್ಲಿಯೂ ಬರೆದುಕೊಂಡಿದ್ದಾರೆ.
ಕುಮಾರಸ್ವಾಮಿ-ಡಿಕೆ ಶಿವಕುಮಾರ್ ಆರೋಪ-ಪ್ರತ್ಯಾರೋಪ
ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಇದನ್ನು ಯಾರು ಬಿಡುಗಡೆ ಮಾಡಿದ್ರು? ಹೇಗೆ ವೈರಲ್ ಆದವು? ಇದರ ಹಿಂದೆ ಯಾರು ಇದ್ದಾರೆ? ಅಂತೆಲ್ಲಾ ಚರ್ಚೆಗಳು ನಡೆಯುತ್ತಿದ್ದವು. ಇತ್ತ ಜೆಡಿಎಸ್ ನಾಯಕರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದರು. ಅದರಲ್ಲೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರ ಕೈವಾಡವಿದೆ ಎಂದು ಖುದ್ದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಆದ್ರೆ, ಇದನ್ನು ಡಿಕೆ ಶಿವಕುಮಾರ್ ಅಲ್ಲಗೆಳೆದಿದ್ದು, ಇಂತಹ ನೀಚ ರಾಜಕಾರಣ ಮಾಡುವುದಿಲ್ಲ. ಕಾರ್ತಿಕ್ (ಪ್ರಜ್ವಲ್ ಕಾರು ಚಾಲಕ) ಕುಮಾರಸ್ವಾಮಿಗೆ ಪೆನ್‍ಡ್ರೈವ್ ಕೊಟ್ಟಿದ್ದು, ಅವರೇ ಬಿಡುಗಡೆ ಮಾಡಿರಬಹುದು ಎಂದು ತಿರುಗೇಟು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಕುಮಾರಸ್ವಾಮಿ, ಡಿಕೆ ಸಹೋದರರ ವಿರುದ್ಧ ವಾಚಾಮಗೋಚರವಾಗಿ ಬೈದಿದ್ದರು. ಇದೀಗ ಅಂತಿಮವಾಗಿ ವಿಡಿಯೋ ಯಾರು ಮೊದಲು ಲೀಕ್ ಮಾಡಿದ್ದರು ಎನ್ನುವುದು ಬಹಿರಂಗವಾಗಿದ್ದು, ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ