ಯಾದಗಿರಿ ನಗರದ ಎಪಿಎಂಸಿ ಯಾರ್ಡ್ನಲ್ಲಿ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ದೊಡ್ಡ ಕುರಿಗಳ ಸಂತೆ ನಡೆಯುತ್ತದೆ. ಎಪಿಎಂಸಿ ಯಾರ್ಡ್ನ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ಕಷ್ಟವಾಗುಷ್ಟರ ಮಟ್ಟಿಗೆ ಈ ಸಂತೆ ನಡೆಯುತ್ತದೆ. ಏಕೆಂದರೆ ಈ ಸಂತೆಯಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಯಾದಗಿರಿ ಜಿಲ್ಲೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಯಿಂದ ರೈತರು ಹಾಗೂ ಕುರಿ ಸಾಕಾಣಿಕೆದಾರರು ಕುರಿಗಳನ್ನ ತಂದು ಮಾರಾಟ ಮಾಡುತ್ತಾರೆ.
ಕುರಿಗಳು, ಮೇಕೆ ಹಾಗೂ ಜಾನುವಾರುಗಳನ್ನು ಈ ಸಂತೆಯಲ್ಲಿ ತಂದು ಮಾರಾಟ ಮಾಡಲಾಗುತ್ತದೆ. ಪ್ರತಿ ಮಂಗಳವಾರ ನಡೆಯುವ ಈ ಸಂತೆ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ ನಾಲ್ಕು ಗಂಟೆಗಳ ಕಾಲ ನಡೆಯುತ್ತದೆ. ಕೇವಲ 4 ಗಂಟೆಗಳ ಕಾಲ ಮಾತ್ರ ಈ ಸಂತೆ ನಡೆದರೂ ಇಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ರೈತರು ಹಾಗೂ ಕುರಿ ಸಾಕಾಣಿಕೆದಾರರು ತಾವು ಸಾಕಿದ ಕುರಿ ಹಾಗೂ ಮೇಕೆಗಳನ್ನ ತಂದು ಈ ಸಂತೆಯಲ್ಲಿ ಮಾರಾಟ ಮಾಡುತ್ತಾರೆ.
ಇಲ್ಲಿ ಖರೀದಿ ಮಾಡಲು ಬಂದ ವ್ಯಾಪಾರಿಗಳಿಗೆ ಯಾವ ಕುರಿ ಖರೀದಿ ಮಾಡಬೇಕು ಎನ್ನುವುದೇ ತಿಳಿಯದಂತಾಗುತ್ತದೆ. ಏಕೆಂದರೆ ಅಷ್ಟರ ಮಟ್ಟಿಗೆ ಕುರಿಗಳು ಹಾಗೂ ಮೇಕೆಗಳು ಬಂದಿರುತ್ತೆವೆ. ಇಂತಹ ದೊಡ್ಡ ಸಂತೆ ಇಲ್ಲಿ ಮಾತ್ರ ನಡೆಯುತ್ತೆ ಅಂತಾರೆ ಕುರಿ ಮಾರಾಟಗಾರರು.
ದೊಡ್ಡ ಮಟ್ಟದಲ್ಲಿ ಕುರಿ ಮಾರಾಟವಾಗುವ ಸ್ಥಳ
ಯಾದಗಿರಿಯಲ್ಲಿ ನಡೆಯುವಷ್ಟು ದೊಡ್ಡಮಟ್ಟದಲ್ಲಿ ಎಲ್ಲೂ ಕುರಿ ಸಂತೆ ನಡೆಯುವುದಿಲ್ಲ. ಹೀಗಾಗಿ ನಾವು ಇಲ್ಲಿ ಕುರಿಗಳನ್ನು ತಂದು ಮಾರಾಟ ಮಾಡುತ್ತೇವೆ. ಇನ್ನು ಮಾರಾಟವಾಗದ ಕುರಿಗಳನ್ನು ಮತ್ತೆ ತೆಗೆದುಕೊಂಡು ಹೋಗಿ ಸಾಕಿ ಮತ್ತೆ ಅವುಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತೇವೆ. ಇಲ್ಲಿ ಒಳ್ಳೆ ವ್ಯಾಪಾರವಾಗುತ್ತದೆ ಎಂದು ಕುರಿ ಮಾರಾಟಗಾರ ನಿಂಗಪ್ಪ ಹೇಳಿದ್ದಾರೆ.
ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುರಿಗಳ ಸಾಕಾಣಿಕೆ ಮಾಡಲಾಗುತ್ತದೆ. ಆದರೆ ಬೇರೆ ಕಡೆ ಮಾರಾಟ ಮಾಡಲು ಹೋದರೆ ಅಷ್ಟೊಂದು ಬೆಲೆ ಸಿಗಲ್ಲ ಎನ್ನುವ ಕಾರಣಕ್ಕೆ ಯಾದಗಿರಿ ನಗರದ ಎಪಿಎಂಸಿ ಯಾರ್ಡ್ನಲ್ಲಿ ನಡೆಯುವ ಕುರಿ ಸಂತೆಗೆ ಬಂದು ರೈತರು ಹಾಗೂ ಕುರಿ ಸಾಕಾಣಿಕೆದಾರರು ತಮ್ಮ ಕುರಿಗಳನ್ನ ಮಾರಾಟ ಮಾಡುತ್ತಾರೆ.
ವ್ಯಾಪರಸ್ಥರು ಸಹ ಸಾಕಷ್ಟು ಪೈಪೋಟಿ ಮೂಲಕ ಯಾದಗಿರಿ ಸಂತೆಯಲ್ಲಿ ಕುರಿಗಳನ್ನ ಖರೀದಿ ಮಾಡುತ್ತಾರೆ. ಸಂತೆಯಲ್ಲಿ ಕುರಿಗಳನ್ನ ಸಾಕುವವರು ಸಹ ಮರಿಗಳನ್ನ ಖರೀದಿ ಮಾಡಿಕೊಂಡು ಹೋಗಿ ಉದ್ಯೋಗ ಪ್ರಾರಂಭಿಸುತ್ತಾರೆ. ಹೀಗಾಗಿ ಈ ಕುರಿ ಸಂತೆ ಯಾವಾಗಲೂ ತುಂಬಿರುತ್ತದೆ. ಆದರೆ ಕೊರೊನಾ ಎರಡನೇ ಅಲೆ ಆರಂಭವಾಗಿದ್ದರಿಂದ ಸಾಕಷ್ಟು ಕೊವಿಡ್ ನಿಯಮಗಳನ್ನ ಪಾಲನೆ ಮಾಡಬೇಕಾಗಿದೆ. ಆದರೆ ಈ ಸಂತೆಯಲ್ಲಿ ಭಾಗವಹಿಸುವ ಜನರಿಗೆ ಕೊವಿಡ್ ಭಯವೇ ಕಾಣಿಸುವುದಿಲ್ಲ. ಹೀಗಾಗಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಇಲ್ಲವಾದಲ್ಲಿ ಕೊವಿಡ್ ವೈರಸ್ ಹರಡುವಿಕೆ ಹೆಚ್ಟಾಗುವ ಸಾಧ್ಯತೆಗಳಿರುತ್ತವೆ.
ನಮ್ಮ ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಕಾವಲುಗಾರರ ಸಂಖ್ಯೆ ಕಡಿಮೆಯಿದೆ ಹೀಗಾಗಿ ಎಲ್ಲಾ ಕಡೆ ಗಮನ ಕೊಡುವುದಕ್ಕೆ ಆಗಿಲ್ಲ. ಈಗ ಸಂತೆಯಲ್ಲಿ ಕೊರೊನಾ ನಿಮಯಗಳನ್ನ ಪಾಲನೆ ಮಾಡದೆ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಅನ್ನಪೂರ್ಣ ಹೇಳಿದ್ದಾರೆ.
ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುವ ಈ ಕುರಿ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಆದರೆ ಕೊರೊನಾ ಸೋಂಕು ಗಮನದಲ್ಲಿಟ್ಟು ಸಂತೆ ನಡೆಸಬೇಕು ಇಲ್ಲವಾದರೆ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ಚಿತ್ರದುರ್ಗದಲ್ಲಿ ನಡೆಯಿತು ಅದ್ದೂರಿ ಜೋಡೆತ್ತಿನ ಸ್ಪರ್ಧೆ
ಕೋವಿಡ್ಗೆ ಡೋಂಟ್ ಕೇರ್! ಭರ್ಜರಿಯಾಗಿ ಸಾಗಿದೆ ಜಾನುವಾರು ಸಂತೆ
( Sheep fair held in yadgir APMC yard amid spike in covid 19 cases )