ಕೊರೊನಾ ಆತಂಕದ ನಡುವೆಯೂ ಚಿತ್ರದುರ್ಗದಲ್ಲಿ ನಡೆಯಿತು ಅದ್ದೂರಿ ಜೋಡೆತ್ತಿನ ಸ್ಪರ್ಧೆ
ಜೋಡೆತ್ತಿನ ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಕೊರೊನಾ ಭೀತಿ ನಡುವೆಯೂ ಸಾವಿರಾರು ಜನರು ಜೋಡೆತ್ತುಗಳ ಓಟ ನೋಡಲು ಜಮಾಯಿಸಿದ್ದರು. ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಜೋಡೆತ್ತುಗಳ ಓಟ ವೀಕ್ಷಣೆ ಮಾಡಿದರು.
ಚಿತ್ರದುರ್ಗ: ಗ್ರಾಮದಲ್ಲಿ ಒಂದುಷ್ಟು ಸಾಂಪ್ರದಾಯಿಕ ಹಬ್ಬ, ಆಚರಣೆಗಳು ಸ್ಪರ್ಧೆಗಳು ಆಗಿಂದಾಗೆ ನಡೆಯುತ್ತಿರುತ್ತದೆ. ಇಂತಹ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪ್ರಮುಖ ಪಾತ್ರವಹಿಸಿದ್ದು, ಜೋಡಿ ಎತ್ತುಗಳ ಓಟ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ತಾ ಮುಂದು ನಾ ಮುಂದು ಎಂದು ಓಡುತ್ತಿರುವ ಜೋಡೆತ್ತುಗಳನ್ನು ನೋಡಲು ಜನಸಾಗರವೇ ಆಗಮಿಸಿತ್ತು ಎನ್ನುವುದು ವಿಶೇಷ.
ಕಳೆದ ಮೂರು ವರ್ಷಗಳಿಂದ ಈ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಜೋಡೆತ್ತಿನ ಬಂಡಿಯ ಓಟದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆ ಹೊರರಾಜ್ಯದಿಂದಲೂ ಈ ಸ್ಪರ್ಧೆಗೆ ಜೋಡೆತ್ತುಗಳ ಸಮೇತ ರೈತರು ಬರುತ್ತಾರೆ. ಈ ವರ್ಷ ಕೊರೊನಾ ಆತಂಕದ ನಡುವೆಯೂ ಸ್ಪರ್ಧೆ ಆಯೋಜಿಸಲಾಗಿದ್ದು, 80ಕ್ಕೂ ಹೆಚ್ಚು ಜೋಡಿ ಭಾಗಿ ಆಗಿವೆ.
ಪ್ರಥಮ ಬಹುಮಾನ 80 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 60 ಸಾವಿರ ರೂಪಾಯಿ, ತೃತೀಯ ಬಹುಮಾನ 40 ಸಾವಿರ ರೂಪಾಯಿ, ನಾಲ್ಕನೇ ಬಹುಮಾನ 20 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಆಯೋಜಕರಾದ ರುದ್ರೇಶ್ ಹೇಳಿದ್ದಾರೆ.
ಇನ್ನು ಜೋಡೆತ್ತಿನ ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಕೊರೊನಾ ಭೀತಿ ನಡುವೆಯೂ ಸಾವಿರಾರು ಜನರು ಜೋಡೆತ್ತುಗಳ ಓಟ ನೋಡಲು ಜಮಾಯಿಸಿದ್ದರು. ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಜೋಡೆತ್ತುಗಳ ಓಟ ವೀಕ್ಷಣೆ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು ಇಂತಹ ಸಾಂಪ್ರದಾಯಿಕ ಕ್ರೀಡೆಗಳಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಕೊರೊನಾ ಭೀತಿ ನಡುವೆ ಗ್ರಾಮದ ಯುವಕರು ನಿಯಮಗಳನ್ನು ಪಾಲಿಸಿ ಕ್ರೀಡೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಮೂರನೇ ವರ್ಷದ ಜೋಡೆತ್ತುಗಳ ಸ್ಪರ್ಧೆ ಜೋರಾಗಿ ನಡೆದಿದೆ. ಹೊನಲು ಬೆಳಕಿನ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದ್ದು, ಭಾರೀ ಜನಸ್ತೋಮವೇ ಈ ಗ್ರಾಮೀಣ ಕ್ರೀಡೆ ವೀಕ್ಷಣೆಯಲ್ಲಿ ತೊಡಗಿತ್ತು.
(ವರದಿ: ಬಸವರಾಜ ಮುದನೂರ್-9980914116)
ಇದನ್ನೂ ಓದಿ:
ಖಾಲಿ ಗಾಡಾ ಸ್ಪರ್ಧೆ; ಜೋಡಿ ಎತ್ತುಗಳ ಓಟಕ್ಕೆ ಮನಸೋತ ಹಾವೇರಿ ಗ್ರಾಮಸ್ಥರು
ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ
( Bullock cart competition held in Chitradurga)