ರಾಜೀವ್ ಗೌಡಗೆ ಮತ್ತಷ್ಟು ಸಂಕಷ್ಟ: ಖಾಕಿ ನಡೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ
ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣದ ಆರೋಪಿ ರಾಜೀವ್ ಗೌಡ ಬಂಧನ ವಿಳಂಬಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಗೃಹ ಸಚಿವರು ಆರೋಪಿಯ ಶೀಘ್ರ ಬಂಧನದ ಭರವಸೆ ನೀಡಿದ್ದು, ಕಳೆದ ಕೆಲ ದಿನಗಳಿಂದ ರಾಜೀವ್ ಮಂಗಳೂರಿನಲ್ಲಿದ್ದ ಬಗ್ಗೆ ಮಾಹಿತಿ ದೊರೆತಿದೆ. ಆದರೆ ಆತ ಈಗ ಅಲ್ಲಿಂದಲೂ ಎಸ್ಕೇಪ್ ಆಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಚಿಕ್ಕಬಳ್ಳಾಪುರ, ಜನವರಿ 25: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡನ ಬಂಧನ ಇನ್ನೂ ಆಗದ ಕಾರಣ ಪೊಲೀಸರ ಕಾರ್ಯವೈಖರಿ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಬಳಿ ಮಾಹಿತಿ ಪಡೆದಿರುವ ಮುಖ್ಯಮಂತ್ರಿಗಳು, ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದರೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ಶೀಘ್ರವೇ ಆರೋಪಿಯ ಬಂಧನ’
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ವಿಳಂಬ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪೊಲೀಸರಿಗೆ ಬಹಳ ಕಠಿಣವಾಗಿ ಸೂಚನೆ ನೀಡಿದ್ದೇನೆ. ಎಲ್ಲಿಗೆ ಎಷ್ಟು ದಿನ ಅಂತಾ ರಾಜೀವ್ ತಪ್ಪಿಸಿಕೊಂಡು ಹೋಗ್ತಾರೆ? ದೂರು ಬಂದ ಮೊದಲ ದಿನವೇ, ಆತನ ಅರೆಸ್ಟ್ ಮಾಡಿ ಎಂದಿದ್ದೆ. ಆದರೆ ಅಷ್ಟರಲ್ಲಿ ಮುಖಂಡ ರಾಜೀವ್ ಗೌಡ ತಪ್ಪಿಸಿಕೊಂಡು ಹೋಗಿದ್ದಾರೆ. ಯಾರ ಒತ್ತಡ, ಕಾಂಪ್ರಮೈಸ್ ಇಲ್ಲ, ಆದಷ್ಟು ಬೇಗ ಆರೋಪಿಯನ್ನು ಹಿಡಿಯುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಡ್ಲಘಟ್ಟ ಮಹಿಳಾಧಿಕಾರಿಗೆ ಬೆದರಿಕೆ; ರಾಜೀವ್ ಗೌಡ ಜಾಮೀನು ಅರ್ಜಿ ವಜಾ
ರಾಜೀವ್ ಸಹೋದರಿಯ ವಿಚಾರಣೆ
ಇನ್ನು ತನ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಮಂಗಳೂರಿನಿಂದ ಬೆಂಗಳೂರಿನಲ್ಲಿರುವ ಸಹೋದರಿಗೆ ಕರೆ ಮಾಡಿದ್ದ. ಕಳೆದ 3 ದಿನಗಳಿಂದ ರಾಜೀವ್ ಗೌಡ ಮಂಗಳೂರಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಆತನ ಸಹೋದರಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ರಾಜೀವ್ ಗೌಡ ಅದಾಗಲೇ ಮಂಗಳೂರಿನಿಂದಲೂ ಪರಾರಿಯಾಗಿದ್ದಾನೆ. ರೈಲ್ವೆ ಸ್ಟೇಷನ್ನಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ಕಾರು ಬಂದಿರುವ ಮಾರ್ಗ ಆಧರಿಸಿ ಮಂಗಳೂರು ರೈಲ್ವೇ, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಯ ಸಿಸಿ ಟಿವಿಗಳ ಪರಿಶೀಲನೆ ನಡೆಸಲಾಗಿದೆ. ಹೋಟೆಲ್, ರೆಸಾರ್ಟ್ಗಳಲ್ಲಿಯೂ ರಾಜೀವ್ ಗೌಡನ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ.
ಮನೆಗಳಲ್ಲಿ ಖಾಕಿ ತಲಾಶ್
ಮತ್ತೊಂದೆಡೆ ಆರೋಪಿ ರಾಜೀವ್ ಗೌಡ ಪತ್ನಿ ಸಹನಾ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದ್ದು, ಮನೆ ಕೆಲಸದವರ ಸಮ್ಮುಖದಲ್ಲಿ ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಸಂಜಯ್ ನಗರ, ಡಾಲರ್ಸ್ ಕಾಲೋನಿಯಲ್ಲಿರುವ ಮನೆಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ಜಾಲಾಡಿದ್ದಾರೆ. ಸರ್ಚ್ ವಾರಂಟ್ ಪಡೆದು ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
