ಮಂಗಳೂರು-ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧ: ನಿತಿನ್ ಗಡ್ಕರಿ

| Updated By: ganapathi bhat

Updated on: Apr 06, 2022 | 11:24 PM

ಮಂಗಳೂರು-ಬೆಂಗಳೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡಿ, ಸುಲಭವಾಗಿ ಸಂಪರ್ಕ ಸಾಧಿಸುವ 23.6 ಕಿ.ಮೀ. ಉದ್ದದ ಸುರಂಗ ಮಾರ್ಗ ಯೋಜನೆಯ ವಿಸ್ತೃತ ವರದಿ ತಯಾರಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಮಂಗಳೂರು-ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧ: ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Follow us on

ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡಿ, ಸುಲಭವಾಗಿ ಸಂಪರ್ಕ ಸಾಧಿಸುವ ಸುರಂಗ ಮಾರ್ಗ ಯೋಜನೆಯ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು (ಭಾನುವಾರ) ಸೂಚನೆ ನೀಡಿದ್ದಾರೆ. 23.6 ಕಿ.ಮೀ. ಉದ್ದದ ಸುರಂಗ ಮಾರ್ಗ ಯೋಜನೆಯ ವಿಸ್ತೃತ ವರದಿ ತಯಾರಿದೆ ಎಂದು ಹೇಳಿದ್ದಾರೆ.

ಮಂಗಳೂರು ಕೂಳೂರಿನ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ, ₹ 69 ಕೋಟಿ ಮೊತ್ತದ ಎರಡು ಏಕಮುಖ ಸಂಚಾರ (ಒನ್ ವೇ) ಸೇತುವೆಗಳ ಕಾಮಗಾರಿಗೆ ವರ್ಚುವಲ್ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಿತಿನ್ ಗಡ್ಕರಿ ಮಾತನಾಡಿದರು.

ಜೊತೆಗೆ, ರಾಜ್ಯದ ಇತರ 32 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗಳಿಗೂ ಅವರು ಶುಭಾರಂಭ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.

10 ಸಾವಿರ ಕೋಟಿ ಮೊತ್ತದ ಮಂಗಳೂರು-ಬೆಂಗಳೂರು ನಡುವಿನ ಶಿರಾಡಿ ಸುರಂಗ ಮಾರ್ಗ ಯೋಜನೆ ಸಿದ್ಧವಾಗಿದೆ. ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಸುರಂಗ ಮಾರ್ಗಕ್ಕಾಗಿ ಭೂಮಿ ಸ್ವಾಧೀನಪಡಿಸುವ ಕೆಲಸವು ನಡೆಯುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ಮುಂದಿನ ಹಂತದಲ್ಲಿ ಯೋಜನೆಯ ಗುತ್ತಿಗೆಗಾಗಿ ಟೆಂಡರ್ ಕರೆಯಲಿದ್ದೇವೆ. ಈ ಯೋಜನೆಗಳು ಕರ್ನಾಟಕದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಲಿದೆ ಎಂದೂ ಗಡ್ಕರಿ ತಿಳಿಸಿದ್ದಾರೆ.

ಜೊತೆಗೆ, ರಾಜ್ಯದ ಇತರ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂಗಳೂರು-ಮಡಿಕೇರಿ ಸಂಪರ್ಕಿಸುವ, ಸಂಪಾಜೆ ಮೂಲಕ ಹಾದುಹೋಗುವ 58.8 ಕೋಟಿ ರೂಪಾಯಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ. ನದಿ ಪಕ್ಕ ಹಾದುಹೋಗುವ ಶಿರಾಡಿ ಘಾಟ್​ನ 26 ಕಿ.ಮೀ. ಉದ್ದದ ರಸ್ತೆಗೆ 36.5 ಕೋಟಿ ಮೊತ್ತದ ತಡೆಗೋಡೆ ನಿರ್ಮಾಣ ಯೋಜನೆ. ಚಾರ್ಮಾಡಿ ಘಾಟ್​ನ 13 ಕಿ.ಮೀ. ಉದ್ದದ ರಸ್ತೆಗೆ 19.4 ಕೋಟಿ ಮೊತ್ತದ ತಡೆಗೋಡೆ ನಿರ್ಮಾಣ ಯೋಜನೆಗಳಿಗೆ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಳಿನ್ ಕುಮಾರ್ ಕಟೀಲ್, ಬಿ.ಸಿ. ರೋಡ್-ಅಡ್ಡಹೊಳೆ ನಡುವಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಮಂಗಳೂರು-ಮೂಡಬಿದ್ರೆ ಸಂಪರ್ಕಿಸುವ ಕುಲಶೇಖರ-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಶೇ.90ರಷ್ಟು ಭೂ ಸ್ವಾಧೀನ ಕಾರ್ಯ ಪೂರ್ಣವಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕೆಲಸಗಳು ಮುಂದಿನ 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದಿದ್ದಾರೆ.

ನಿಂತ ಮಳೆ, ಹೆಚ್ಚಿದ ಚಾರ್ಮಾಡಿ ವೈಭೋಗ: ಕಣ್ಮನ ತಣಿಸುತ್ತಿವೆ ಸಣ್ಣ ಸಣ್ಣ ಜಲಪಾತಗಳು

Published On - 7:36 pm, Sun, 20 December 20