ಶಿವಮೊಗ್ಗ: ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಹೋದ ಹೆತ್ತಮ್ಮ
ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿಗೆ ಶರಾವತಿ ನಗರದ ಯುವತಿ ದಾಖಲಾಗಿದ್ದಾಳೆ. ಬಳಿಕ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳು.
ಶಿವಮೊಗ್ಗ: ತಾಯಿಯೊಬ್ಬಳು ತನ್ನ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯ ಬಾತ್ ರೂಂನಿಂದ ಹೊರಗೆ ಬಿಸಾಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಶರಾವತಿ ನಗರದ ಯುವತಿ ದಾಖಲಾಗಿದ್ದಾಳೆ. ಬಳಿಕ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇಂದು ಬೆಳಗ್ಗೆ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಬಂದಿದ್ದಾಳೆ. ಮಗುವಿನ ಅಳುವಿನ ಶಬ್ಧ ಸರ್ಜರಿ ವಿಭಾಗದಿಂದ ಕೇಳಿ ಬಂದಿದ್ದಕ್ಕೆ ಮೆಗ್ಗಾನ್ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಹುಡುಕಿದ್ದಾರೆ. ಶೌಚಾಲಯದ ಹೊರಭಾಗದಲ್ಲಿ ಮಲಗಿದ್ದ ಹೆಣ್ಣು ಮಗು ಪತ್ತೆಯಾಗಿದೆ.
ಈ ಕುರಿತು ಯಾರನ್ನೂ ಕೇಳಿದರೂ ಗೊತ್ತಿಲ್ಲವೆಂದು ಹೇಳಿದ್ದಾರೆ. ಇದರಿಂದ ಮಗು ಯಾರದ್ದು ಇರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಪತ್ತೆಗೆ ಮುಂದಾಗಿದ್ದಾರೆ. ಮಗುವಿನ ಜನ್ಮ ನೀಡಿದ ತಾಯಿಯನ್ನ ಹುಡುಕಲು ಆರಂಭಿಸಿದ ಸಿಬ್ಬಂದಿಗಳು ಓಬಿಜಿ ವೈದ್ಯರನ್ನ ಕರೆತಂದು ಸರ್ಜರಿ ವಿಭಾಗದಲ್ಲಿ ದಾಖಲಾದ ಯುವತಿಯನ್ನ ಅನುಮಾನದಿಂದ ಕೌನ್ಸಲಿಂಗ್ ನಡೆಸಿದಾದ್ದಾರೆ. ಅಲ್ಲದೇ ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಬಂದು ವಿಚಾರಣೆ ನಡೆಸಿದಾಗ ತಾಯಿ ಮಗುವನ್ನು ಬಿಸಾಕಿರುವುದು ಒಪ್ಪಿಕೊಂಡಿದ್ದಾಳೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಪತ್ತೆಯಾದ ಮಗುವನ್ನು ಸದ್ಯ ರಕ್ಷಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಳಿಕ ಯುವತಿಯನ್ನ ಸರ್ಜರಿ ವಿಭಾಗದಿಂದ ಹೆರಿಗೆ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಈ ಯುವತಿ ಯಾಕೆ ಹೀಗೆ ಮಾಡಿದಳು ಅಂತಾ ನೋಡುವುದಾದರೆ, ಇಲ್ಲೊಂದು ಲವ್ ಸ್ಟೋರಿ ಇದೆ. ಶಿಕಾರಿಪುರದ ಸುರಗೀಹಳ್ಳಿಯ ರಾಕೇಶ್ ಎನ್ನುವ ಯುವಕನ ಜೊತೆ ಯುವತಿಗೆ ಲವ್ ಆಗಿತ್ತು. ಬಳಿಕ ಇಬ್ಬರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಡಿಪ್ಲೊಮಾ ಓದುವಾಗಲೇ ಶಿಕಾರಿಪುರದ ವಿವಾಹ ನೋಂದಾಣಿ ಕಚೇರಿಯಲ್ಲಿ ಯಾರಿಗೂ ಗೊತ್ತಿಲ್ಲದೇ ಮದುವೆಯಾಗಿದ್ದಾರೆ.
ಈ ನಡುವೆ ಯುವತಿ ಗರ್ಭೀಣಿಯಾಗಿದ್ದಳು. ಒಂದು ವೇಳೆ ಮಗು ಆಗಿದ್ದು ಗೊತ್ತಾಗಿಬಿಟ್ಟರೆ ಮದುವೆ ರಹಸ್ಯ ಬಯಲಾಯಾಗಿ ಸಮಸ್ಯೆ ಆಗುತ್ತದೆ ಎಂದು ತಿಳಿದ ಯುವತಿ ಹುಟ್ಟಿರುವ ಮಗುವನ್ನು ಈ ರೀತಿ ಬಿಟ್ಟು ಹೋಗಿದ್ದಾಳೆ. ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಈ ಘಟನೆ ಬೆಳಕಿಗೆ ಬಂದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ವೈದ್ಯರು ಅಲರ್ಟ್ ಆಗಿದ್ದಾರೆ. ಸದ್ಯ ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Mon, 10 October 22