
ಶಿವಮೊಗ್ಗ, (ಡಿಸೆಂಬರ್ 12): ಈ ಸ್ನೇಹ ಅನ್ನೋದೇ ಹಿಂಗೆ. ಗೆಳೆತನ ಒಂದು ಸರಿ ಬೆಳೆದರೆ ಸಾಕು ತನ್ನ ಮನೆಯಲ್ಲಿ ಏನೇ ಇರಲಿ ಇಲ್ಲದಿರಲಿ ಸ್ನೇಹಿತನಿಗೊಂದು ಪಾಲು ಎಂಬಂತೆ ಇರುತ್ತೆ. ಆದರೆ ಆ ಗೆಳೆತನದಲ್ಲಿ ಮೋಸವಾದ್ರೆ ಅದು ಕೊಲೆ ಮಾಡುವುದಕ್ಕೂ ಕೊಲೆ ಆಗುವುದಕ್ಕೂ ಕಾರಣವಾಗುತ್ತದೆ. ಅದೇ ರೀತಿ ಸ್ನೇಹದ ಲೋಕದಲ್ಲಿ ತೇಲಾಡುತ್ತಿದ್ದವರು ಈ ಶಿವು ಮತ್ತು ಹರೀಶ. ಎಷ್ಟರ ಮಟ್ಟಿಗೆ ಅಂದ್ರೆ ಪ್ರತಿನಿತ್ಯ ಇವರಿಬ್ಬರೂ ಕೆಲಸ ಮುಗಿದ ನಂತರ ಒಂದೆಡೆ ಸೇರಿ ತಮ್ಮ ಕೆಲಸದಲ್ಲಾದ ನೋವನ್ನ ಮರೆಯಲು ಎಣ್ಣೆ ಹಂಚಿಕೊಂಡು ಕುಳಿತುಕೊಳ್ಳುತ್ತಿದ್ದರು. ಆದರೆ ಹರೀಶನ ಆಸೆಯಿಂದಾಗಿ ಈಗ ಆ ಗೆಳೆತನದಲ್ಲಿ ದೊಡ್ಡ ಬಿರುಕೊಂದುಂಟಾಗಿ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಹೌದು… ಶಿವಮೊಗ್ಗ (Shivamogga) ತಾಲೂಕು ಬನ್ನಿಕೆರೆ ಗ್ರಾಮದಲ್ಲಿ ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆ ಪ್ರಕರಣವನ್ನ ಒಳಹೊಕ್ಕು ನೋಡಿದಾಗ ಅಲ್ಲಿ ಕಾಣಿಸಿದ್ದು ಅನೈತಿಕ ಸಂಬಂಧ.
ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (assault) ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಂಡತಿ ಮೇಲೆ ಕಣ್ಣಾಕಿದ್ದಕ್ಕೆ ಶಿವು ಎನ್ನುವಾತ ತನ್ನ ಆಪ್ತ ಸ್ನೇಹಿತ ಹರೀಶ್ ನಾಯ್ಕ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಶಿವು ಎಣ್ಣೆ ಪಾರ್ಟಿಗೆಂದು ಸ್ನೇಹಿತ ಹರೀಶ್ನನ್ನು ಮನೆ ಕರೆದುಕೊಂಡು ಬಂದಿದ್ದಾನೆ. ಆ ವೇಲೆ ಹರೀಶ್, ಶಿವು ಹೆಂಡ್ತಿ ಮೇಲೆ ಕಣ್ಣಾಕಿದ್ದು, ಸಲುಗೆಯಿಂದ ಇರುವುದನ್ನು ಕಣ್ಣಾರೆ ಕಂಡಿದ್ದಾನೆ. ಇದರಿಂದ ಕೋಪಗೊಂಡು ಮಚ್ಚಿನಿಂದ ಹರೀಶ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಶಿವು ನಾಯ್ಕ್ ವೃತ್ತಿಯಲ್ಲಿ ಜೆಸಿಬಿ ಆಪರೇಟರ್, ಹರೀಶ್ ನಾಯ್ಕ್ ಕೂಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಇಬ್ಬರು ಎಣ್ಣೆ ಪಾರ್ಟಿ ಮಾಡುವ ಪ್ಲಾನ್ ಮಾಡಿದ್ದರು. ಅದರಂತೆ ಶಿವು, ಗೆಳೆಯ ಹರೀಶ್ನನ್ನು ಕರೆದುಕೊಂಡು ಎಣ್ಣೆ ಸಮೇತ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ, ಶಿವು ಸೈಡ್ಸ್ ತರಲೆಂದು ಆಚೆ ಹೋಗಿದ್ದಾನೆ. ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಹರೀಶ್, ಗೆಳೆಯ ಶಿವು ಹೆಂಡತಿ ಜತೆ ಶುರುಮಾಡಿಕೊಂಡಿದ್ದಾನೆ. ಅದೇ ಸ್ವಲ್ಪ ಸಮಯದ ನಂತರ ಶಿವು ಮನೆಗೆ ಬಂದಿದ್ದು, ಒಳಗೆ ತನ್ನ ಹೆಂಡ್ತಿ ಜೊತೆ ಹರೀಶ್ ಇರುವುದನ್ನು ಕಣ್ಣಾರೆ ಕಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಶಿವು, ಮನೆಯಲ್ಲಿದ್ದ ಮಚ್ಚಿನಿಂದ ಹರೀಶನ ತಲೆಗೆ ಹೊಡೆದಿದ್ದಾನೆ.ಈ ದಾಳಿಯಿಂದ ಹರೀಶ್ ನಾಯ್ಕ್ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಹರೀಶ್ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹರೀಶ್ ಕೋಮಾದಲ್ಲಿ ಸಾವು ಬದುಕಿನ ನಡುವೆ ಹೋರಾಡ ನಡೆಸುತ್ತಿದ್ದಾನೆ.
ಪೊಲೀಸ್ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ, ಆರೋಪಿ ಶಿವನಾಯ್ಕ್‌ನ ಪತ್ನಿಯೊಂದಿಗೆ ಹಲ್ಲೆಗೊಳಗಾದ ಹರೀಶ್ ನಾಯ್ಕ್ ಅನೈತಿಕ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಕೋಪಗೊಂಡಿದ್ದ ಶಿವನಾಯಕ್, ಇಂದು (ಡಿಸೆಂಬರ್ 12 ಬೆಳಿಗ್ಗೆ ಹರೀಶ್ ನಾಯ್ಕ್ ಮೇಲೆ ಮಚ್ಚು ಬೀಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಹರೀಶ್ ನಾಯ್ಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Published On - 10:34 pm, Fri, 12 December 25