ಶಿವಮೊಗ್ಗ: ಮನುಷ್ಯ ತಮ್ಮ ಮಕ್ಕಳಂತೆ ಪ್ರೀತಿಯಿಂದ ಸಾಕುವ ಪ್ರಾಣಿಗಳಲ್ಲಿ ಶ್ವಾನ (Dog) ಕೂಡಾ ಒಂದು. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವಿವಿಧ ತಳಿಯ ಶ್ವಾನಗಳನ್ನು ಸಾಕುತ್ತಾರೆ. ಸಾಕಿದ ನಾಯಿಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಹುಟ್ಟು ಹಬ್ಬ ಆಚರಿಸುತ್ತಾರೆ. ಸದ್ಯ ಶಿವಮೊಗ್ಗದಲ್ಲಿ (Shivamogga) ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಿದ್ದಾರೆ. ನಾಯಿಯ ಹುಟ್ಟುಬಕ್ಕೆಂದೇ ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿಸಿದ್ದಾರೆ. ಜೊತೆಗೆ ಸ್ನೇಹಿತರಿಗೆಲ್ಲ ಬಿರಿಯಾನಿ ಊಟ ಹಾಕಿಸಿದ್ದಾರೆ. ಇದರ ಜೊತೆಗೆ ಶ್ವಾನಕ್ಕೆ ವಿಶೇಷ ಉಡುಗೊರೆ ನೀಡುವ ಮೂಲಕ ಆ ವ್ಯಕ್ತಿ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿರುವ ಮೊಹಮ್ಮದ್ ಅಯಾಜ್ ಸೈಬೀರಿಯನ್ ಹಸ್ಮಿ ತಳಿಯ ನಾಯಿಯೊಂದನ್ನು ಸಾಕಿದ್ದಾರೆ. ಅದಕ್ಕೆ ಟೈಸನ್ ಅಂತಾ ನಾಮಕರಣ ಮಾಡಿದ್ದಾರೆ. ಜನವರಿ 13ರಂದು ಟೈಸನ್ಗೆ ಮೊದಲ ವರ್ಷದ ಹುಟ್ಟುಹಬ್ಬ. ಟೈಸನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ .
ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮೊಹಮ್ಮದ್ ಅಯಾಜ್ ರಾಗಿಗುಡ್ಡದ ತಮ್ಮ ಮನೆ ಬಳಿ ಪೆಂಡಾಲ್ ಹಾಕಿಸಿದ್ದರು. ಜನವರಿ 13ರ ಸಂಜೆ ಕೇಕ್ ಕಟ್ ಮಾಡಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರಿಗೆಲ್ಲ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. ಸುಮಾರು 150 ಮಂದಿಕ್ಕೂ ಹೆಚ್ಚು ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.
ಮೊಹಮ್ಮದ್ ಅಯಾಜ್ ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ದುಬಾರಿ ಗಿಫ್ಟ್ ನೀಡಿದ್ದಾರೆ. ಅತ್ಯಂತ ಮೆತ್ತನೆಯ ಹಾಸಿಗೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆಲೆ ಸುಮಾರು 13 ಸಾವಿರ ರೂ. ಅಂತೆ. ಟೈಸನ್ ಅರಾಮಾಗಿ ಕೂರಬೇಕು, ಹಾಗಾಗಿ ತುಂಬಾ ಮೆತ್ತನೆಯ ಹಾಸಿಗೆ ತರಿಸಿ ಗಿಫ್ಟ್ ಕೊಟ್ಟಿದ್ದಾನೆ ಅಂತ ಮೊಹಮ್ಮದ್ ಅಯಾಜ್ ಹೇಳಿದರು.
ಇನ್ನು ಮೊಹಮ್ಮದ್ ಅಯಾಜ್ ಟೈಸನ್ಗೋಸ್ಕರ ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿಯಲ್ಲಿ ಮೊಹಮದ್ ಅಯಾಜ್ ಅವರ ಕುಟುಂಬದವರು ವಾಸವಾಗಿದ್ದಾರೆ.
ಮೊಹಮ್ಮದ್ ಅಯಾಜ್ ಚನ್ನಗಿರಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆಂದು ಬಂದ ನಾಯಿಯೊಂದಕ್ಕೆ ಹೋಟೆಲ್ ಬಳಿ ಅಶ್ರಯ ನೀಡಿದ್ದರಂತೆ. ನನಗೆ ಪ್ರತಿದಿನ 25 ರೂ. ಕೂಲಿ ಕೊಡುತ್ತಿದ್ದರು. ಆ ಹಣವೆಲ್ಲ ನಾಯಿಯ ಹಾಲು, ತಿಂಡಿಗೆ ಖರ್ಚಾಗುತ್ತಿತ್ತು. ಆ ನಾಯಿ ಎರಡು ಮರಿಗಳನ್ನ ಹಾಕಿತು. ಹೋಟೆಲ್ಗೆ ಬಂದವರಾರೋ ನಾಯಿ ಮರಿಗಳನ್ನು ಕೊಂಡೊಯ್ದಿದ್ದರು. ನಾನು ಚನ್ನಗಿರಿಯ ಬೀದಿ ಬೀದಿ ಹುಡುಕಿದೆ. ಮರಿಗಳು ಸಿಗಲಿಲ್ಲ. ಆಗ ಬಹಳ ಬೇಸರವಾಯಿತು ಅಂತ ಮೊಹಮ್ಮದ್ ಅಯಾಜ್ ತಿಳಿಸಿದರು.
ಶಿವಮೊಗ್ಗಕ್ಕೆ ಹಿಂತಿರುಗಿದ ಮೊಹಮ್ಮದ್ ಅಯಾಜ್, ಈಗ ಟೈಲ್ಸ್ ಕೆಲಸದ ಮೇಸ್ತ್ರಿಯಾಗಿದ್ದಾರೆ. ಟೈಲ್ಸ್ ಕೆಲಸಕ್ಕೆ ಹೋಗುವಾಗ ಟೈಸನ್ ಅನ್ನು ಬೊಮ್ಮನಕಟ್ಟೆಯಲ್ಲಿರುವ ಶ್ವಾನಗಳ ಕೇರ್ ಸೆಂಟರ್ಗೆ ಬಿಟ್ಟು ಹೋಗುತ್ತೇನೆ. ಸಂಜೆ ಬರುವಾಗ ಟೈಸನ್ನ ಮನೆಗೆ ಕರೆದುಕೊಂಡು ಬರುತೇನೆ. ಜ.13ಕ್ಕೆ ಟೈಸನ್ ಹುಟ್ಟುಹಬ್ಬದ ಹಿನ್ನೆಲೆ ಕೆಲಸಗಾರರಿಗೆ ರಜೆ ಕೊಟ್ಟಿದ್ದೆ. ನೂರಾರು ಜನರಿಗೆ ಮತ್ತು ಸ್ನೇಹಿತರಿಗೆ ಬಿರಿಯಾನಿ ಊಟ ಹಾಕಿಸಿದ್ದಾನೆ ಅಂತ ಅವರು ತಿಳಿಸಿದರು.
ವರದಿ: ಬಸವರಾಜ್ ಯರಗಣವಿ
ಇದನ್ನೂ ಓದಿ
Mysuru Zoo: ಮೈಸೂರಿನ ಮೃಗಾಲಯದ ಗೊರಿಲ್ಲಾಗೆ ಹುಟ್ಟುಹಬ್ಬದ ಸಂಭ್ರಮ
Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್
Published On - 4:10 pm, Sat, 15 January 22