ಶಿವಮೊಗ್ಗ, ಡಿಸೆಂಬರ್ 08: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿಕಾರಿಪುರ (Shikaripur) ತಾಲೂಕಿನ ಸೊಪ್ಪಿನಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು (Teachers) ಅಮಾನತುಗೊಳಿಸಿ ಡಿಡಿಪಿಐ (DDPI) ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಕೋರಿ, ಸಹ ಶಿಕ್ಷಕ ಶಾಂತಕುಮಾರ್ ಅಮಾನತುಗೊಂಡಿದ್ದಾರೆ.
ಶಿಕ್ಷಕ ಶಾಂತಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಪ್ರಕರಣದ ಬಗ್ಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆಪಾದನೆಯಿಂದಾಗಿ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಬಿಇಒ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಡಿಡಿಪಿಐ ಅವರಿಗೆ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ.
ಶಿಕ್ಷಕ ಶಾಂತಕುಮಾರ್ ವಿದ್ಯಾರ್ಥಿನಿಯರಿಗೆ ಕಳೆದ ಕೆಲವು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಶಿಕ್ಷಕನ ಈ ವರ್ತನೆಯನ್ನು ನೋಡಿದ ಎಸ್ಡಿಎಂಸಿ ಸದಸ್ಯರು ಮತ್ತು ಪೋಷಕರು ಆಕ್ರೋಶ ಹೊರಹಾಕಿದ್ದರು. ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಅವರಿಗೆ ದೂರು ನೀಡಿದ್ದರು. ಆದರೆ ಮುಖ್ಯ ಶಿಕ್ಷಕ ನಾಗರಾಜ್ ಕೋರಿ ಶಿಕ್ಷಕ ಶಾಂತಕುಮಾರ್ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರು.
ಈ ಹಿನ್ನಲೆಯಲ್ಲಿ ಡಿಸೆಂಬರ್ 5 ರಂದು ಶಿಕಾರಿಪುರ ಬಿಇಓ ಶಶಿಧರ್ ಅವರಿಗೆ ಎಸ್ಡಿಎಂಸಿ ಸದಸ್ಯರು ಮತ್ತು ಅಧ್ಯಕ್ಷರು ದೂರು ನೀಡಿದರು. ಇವರ ದೂರಿನ ಅನ್ವಯ ಶಾಲೆಗೆ ಭೇಟಿ ನೀಡಿದ ಬಿಇಓ ಶಶಿಧರ್ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮಾಹಿತಿ ಪಡೆದರು.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ವಿಕೃತ ಕಾಮಿಯ ಕೈ ಆಟ ಬಯಲು
ಬಳಿಕ ಬಿಇಓ ಶಶಿಧರ್ ಶಾಲೆಯಲ್ಲಿ ಶಿಕ್ಷಕನು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ಮುಖ್ಯ ಶಿಕ್ಷಕ ದೂರು ನೀಡಿದರು ನಿರ್ಲಕ್ಷ್ಯ ಮಾಡಿರುವ ಕುರಿತು ಶಿವವಮೊಗ್ಗ ಡಿಡಿಪಿಐ ಪರಮೇಶ್ವರಪ್ಪ ಅವರಿಗೆ ವರದಿ ನೀಡಿದ್ದರು. ಇದರ ಜೊತೆಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ದೂರು ಸ್ವೀಕರಿಸಿ ಬಳಿಕ ಪ್ರಕರಣದ ಕುರಿತು ಮಕ್ಕಳ ಕಲ್ಯಾಣ ಸಮಿತಿ ಗೆ ಮಾಹಿತಿ ನೀಡಿದ್ದಾರೆ. ಸದ್ಯ ಸಿಡಬ್ಲೂಸಿ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದೆ. ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಶಾಂತಕುಮಾರ್ ಹಾಗೂ ಮುಖ್ಯ ಶಿಕ್ಷಕ ನಾಗರಾಜ್ ಕೋರಿ ಅವರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Sat, 9 December 23