ಶಿವಮೊಗ್ಗ: ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಶುಕ್ರವಾರ ನಡೆಯಿತು. ಪುತ್ತೂರು ತಾಲ್ಲೂಕು ಬೆಳ್ಳಾರೆಯಲ್ಲಿ ಇತ್ತೀಚೆಗಷ್ಟೇ ಕೊಲೆಯಾಗಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಗೌರವಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಮಾರಂಭದಲ್ಲಿ ಮುಖಂಡರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದರು.
ಮುಖಂಡರು ಮಾತನಾಡಲು ಮುಂದಾದಾಗ, ‘ಯೋಗಿ ಯೋಗಿ’ ಎಂದು ಘೋಷಣೆ ಮೊಳಗಿಸಿದರು. ‘ಮುಖಂಡರು ಕೇವಲ ಭಾಷಣಗಳಿಗಷ್ಟೇ ಸೀಮಿತವಾಗಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು. ಪರಿಸ್ಥಿತಿ ಕೈಮೀರುವುದು ಮನಗಂಡ ಮಾಜಿ ಸಚಿವ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಸಭೆಯಿಂದ ಹೊರನಡೆದರು.
ಕಾರ್ಯಕರ್ತರಿಗೆ ರಕ್ಷಣೆ ಒದಗಿಸಿ, ಜೀವ ಕಾಪಾಡಿ ಎಂದು ಕೂಗಿದರು. ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಬಿಜೆಪಿಯ ನಾಯಕರಿಗೆ ಧಿಕ್ಕಾರದ ಘೋಷಣೆಗಳೂ ಮೊಳಗಿದವು. ಉದ್ರಿಕ್ತ ಕಾರ್ಯಕರ್ತರನ್ನು ಸಮಾಧಾನಪಡಿಸಲು ಕೆಲ ನಾಯಕರು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಕೆಲ ಕಾರ್ಯಕರ್ತರನ್ನು ಹೊರಗೆ ಕಳಿಸಿ, ಪರಿಸ್ಥಿತಿ ತಹಬದಿಗೆ ತರಲು ಯತ್ನಿಸಿದರು. ಆಗ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಕೊನೆಗೆ ಅನಿವಾರ್ಯವಾಗಿ ಮುಖಂಡರೇ ಸಭೆಯಿಂದ ಹೊರಗೆ ನಡೆದರು.
Published On - 1:29 pm, Fri, 29 July 22