ಬಯಲು ಸೀಮೆಯ ಹೋರಿ ಬೆದರಿಸುವ ಸ್ಪರ್ಧೆಯು ಅದನ್ನೇ ಅಂಟಿಕೊಂಡಿರುವ ಮಲೆನಾಡಿನ ಸೊರಬ ಮತ್ತು ಶಿಕಾರಪುರದಲ್ಲಿ ಜೋರಾಗಿ ನಡೆಯುತ್ತದೆ. ಶಿಕಾರಿಪುರದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯು ಓರ್ವ ಯುವಕನನ್ನು ಬಲಿ ಪಡೆದುಕೊಂಡಿದೆ. ರೋಮಾಂಚನ ಸ್ಪರ್ಧೆ ನೋಡಲು ಹೋದ ಯುವಕನು ಹೋರಿ ತಿವಿತಕ್ಕೆ ಜೀವ ಕಳೆದುಕೊಂಡಿದ್ದಾನೆ. ಈತನ ಸಾವಿನಿಂದ ಕುಟುಂಬಸ್ಥರೆಲ್ಲರೂ ಈಗ ಕಣ್ಣೀರಿನಲ್ಲಿ ಕೈತೊಳೆಯುಂತಾಗಿದೆ.
ಶಿಕಾರಿಪುರ ಮತ್ತು ಸೊರಬ ಈ ಎರಡು ತಾಲೂಕುಗಳು ಬಯಲು ಸೀಮೆಯ ಸೊಗಡು ಹೊಂದಿವೆ. ಹಾವೇರಿ ಜಿಲ್ಲೆಯ ಗಡಿಗಳು ಈ ಎರಡು ತಾಲೂಕಿಗೆ ಸಂಪರ್ಕ ಹೊಂದಿವೆ. ಈ ಎರಡು ತಾಲೂಕಿನ ಜನರು ಬಯಲು ಸೀಮೆಯ ಜೊತೆ ನಂಟು ಹೊಂದಿವೆ. ಈ ಹಿನ್ನೆಲೆಯಲ್ಲಿ ಬಯಲು ಸೀಮೆಯ ಹೋರಿ ಬೆದರಿಸುವ ಸ್ಪರ್ಧೆಯು ಈ ಎರಡು ತಾಲೂಕಿನಲ್ಲಿ ನಡೆಯುತ್ತವೆ.
ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯು ಜ. 21 ರಂದು ನಡೆಯಿತು. ಎಲ್ಲರೂ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ತಲ್ಲೀನ ಆಗಿದ್ದಾರೆ. ಈತ ಜಿಲ್ಲೆ ಹೊರ ಜಿಲ್ಲೆಯ ಸಾವಿರಾರು ಜನರ ಸಮ್ಮುಖದಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ಬೆಳಗ್ಗೆಯಿಂದ ಶುರುವಾದ ಸ್ಪರ್ಧೆಯು ಮಧ್ಯಾಹ್ನದ ಬಳಿಕ ರೋಮಾಂಚನದಿಂದ ಕೂಡಿತ್ತು.
ರೈತರು ಸಾಕಿದ ಬಲಿಷ್ಠ ಹೋರಿಗಳು ಅಖಾಡಕ್ಕೆ ಧುಮುಕುತ್ತಿದ್ದವು. ಈ ನಡುವೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಪರಶುರಾಮ್ ಎಂಬ 27 ವರ್ಷ ಯುವಕನು ಹೋರಿ ಸ್ಪರ್ಧೆಯನ್ನು ಹತ್ತಿರದಿಂದ ನೋಡುತ್ತಿದ್ದನು. ಹೀಗೆ ಶರವೇಗದಲ್ಲಿ ಮಿಂಚಿನಂತೆ ರೇಸ್ ನಲ್ಲಿ ಓಡಿಬಂದ ಹೋರಿಯು ಕೊಂಬಿನಿಂದ ಪರಶುರಾಮನ ಹೊಟ್ಟೆಗೆ ತಿವಿದಿತ್ತು. ಜನ ಜಾತ್ರೆ ನಡುವೆ ಪರಶುರಾಮನು ತೀವ್ರವಾಗಿ ಗಾಯಗೊಂಡಿದ್ದನು.
ಆಯೋಜಕರು ಈತನ ಬಗ್ಗೆ ಗಮನ ಹರಿಸಲಿಲ್ಲ. ಅವರಿಗೆ ಸ್ಪರ್ಧೆ ಆಯೋಜನೆಯೇ ಮುಖ್ಯವಾಗಿತ್ತು. ತೀವ್ರವಾಗಿ ಗಾಯಗೊಂಡ ಪರಶುರಾಮ್ ನನ್ನು ಸ್ನೇಹಿತರೇ ಬೈಕ್ ಮೇಲೆ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪರಶುರಾಮ್ ಮೃತಪಟ್ಟಿದ್ದಾನೆ.
ಶಿಕಾರಪುರ ಮತ್ತು ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಹಬ್ಬದಂತೆ ನಡೆಯುತ್ತವೆ. ಹೋರಿಯ ಓಟ ಮತ್ತು ಅದನ್ನು ಬೆದರಿಸುವ ಯುವ ಪಡೆಯ ಸಾಹಸ ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಅಲ್ಲಿ ನೆರೆದಿರುತ್ತಾರೆ. ಇಂತಹ ಸ್ಪರ್ಧೆಯಲ್ಲಿ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟಬುತ್ತಿ. ಹೋರಿಗಳು ಭರ್ಜರಿಯಾಗಿ ಅಲಂಕಾರಗೊಂಡು ಅಖಾಡಕ್ಕೆ ಎಂಟ್ರಿ ಕೊಡುತ್ತವೆ. ಚಪ್ಪಾಳೆ,ಕೇಕೆ ಸಿಳ್ಳೆಗಳ ನಡುವೆ ಹೋರಿಗಳು ಒಂದು ತುದಿಯಿಂದ ಮತ್ತೊಂದು ತುದಿಗೆ ಮಿಂಚಿನ ಓಟದಲ್ಲಿ ಓಡುತ್ತವೆ. ಸಂಭ್ರಮ ಸಡಗರದ ಗ್ರಾಮೀಣ ಸೊಗಡಿನ ಕ್ರೀಡೆ ಯಾವುದೇ ರೈತರು ಮತ್ತು ಗ್ರಾಮಸ್ಥರು ಮಿಸ್ ಮಾಡಿಕೊಳ್ಳುವುದಿಲ್ಲ. ಪರಶುರಾಮ ಕೂಡಾ ಇಂತಹ ರಣರೋಚಕ ಸ್ಪರ್ಧೆ ನೋಡಲು ಹೋಗಿ ಇಲ್ಲಿ ಜೀವ ಕಳೆದುಕೊಂಡಿದ್ದಾನೆ.
ಪರಶುರಾಮನ ಮದುವೆಯಾಗಿ ನಾಲ್ಕ ವರ್ಷವಾಗಿದ್ದು, ಎರಡು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಬಡತನದ ನಡುವೆ ತಂದೆ ತಾಯಿ ಮತ್ತು ಹೆಂಡತಿ ಸಹೋದರನ್ನು ನೋಡಿಕೊಳ್ಳುವ ಜವಾಬ್ದಾರಿಯು ಪರಶುರಾಮನ ಮೇಲಿತ್ತು. ಈ ಘಟನೆಯಿಂದ ಇಡೀ ಕುಟುಂಬಸ್ಥರು ಸದ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
Also Read: ಬಿಟ್ ಕಾಯಿನ್ ಪ್ರಕರಣ – ಪೊಲೀಸರನ್ನೇ ವಶಕ್ಕೆ ಪಡೆದ ಎಸ್ಐಟಿ
ಪರಶುರಾಮ ಕೂಲಿ ಮತ್ತು ಪೇಟಿಂಗ್ ಮಾಡಿಕೊಂಡು ಉಪಜೀವ ಮಾಡಿಕೊಂಡಿದ್ದನು. ಈ ನಡುವೆ ಇಂತಹ ದುರ್ಘಟನೆ ನಡೆದಿದೆ. ಸದ್ಯ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಈ ಹೋರಿ ಬೆದರಿಸುವ ಸ್ಪರ್ಧೆಯನ್ನು ಶಿವಮೊಗ್ಗದ ಸುದರ್ಶನ ಬಾಯ್ಸ್ ಮತ್ತು ತರಲಘಟ್ಟ ಗ್ರಾಮಸ್ಥರಿಂದ ಈ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಇಂತಹ ದೊಡ್ಡ ಸ್ಪರ್ಧೆಯಲ್ಲಿ ಆಯೋಜಕರು ಯಾವುದೇ ಮುಂಜಾಗೃತೆ ಮತ್ತು ತುರ್ತು ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ.
ಘಟನೆಯಲ್ಲಿ ಪರಶುರಾಮ ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಆಗುತ್ತಿದ್ದರೂ ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸುವ ನಡುವೆ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಪರಶುರಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ಸಮಿತಿಯ ಅಧ್ಯಕ್ಷ ಮಲ್ಲಿಕ ನಾಯ್ಕ್, ಸತೀಶ್, ಗಂಗಾಧರ್, ದಶರಥ, ಶಿವಕುಮಾರ್ ನಾಯ್ಕ್, ಪವನ, ರವಿಕುಮಾರ್ ಸೇರಿದಂತೆ ಇತರರ ಮೇಲೆ ಮೃತನ ಕುಟುಂಬಸ್ಥರು ಕೇಸ್ ದಾಖಲಿಸಿದ್ದಾರೆ. ಈ ಎಲ್ಲರ ಮೇಲೆ ಎಪ್ ಐಆರ್ ದಾಖಲು ಅಗಿದೆ. ಆದರೆ ಪೊಲೀಸರು ಮಾತ್ರ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಕುಟುಂಬಸ್ಥರ ಅಳಲು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ