Bull race: ಡೇಂಜರ್-ಡೇಂಜರ್, ಹೋರಿ ಬೆದರಿಸುವ ಸ್ಪರ್ಧೆ ನೋಡಲು ಬಂದ 3 ಪ್ರೇಕ್ಷಕರು ಬಲಿ, ಇನ್ನೂ ಸಂಕ್ರಾಂತಿವರೆಗೆ ನಡೆಯುತ್ತೆ ಈ ಆಟ
Bull Attack: ಹೋರಿ ಹಿಡಿಯುವ ಸಂದರ್ಭದಲ್ಲಿ ಹೋರಿ ತಿವಿದೋ, ಇಲ್ಲವೇ ಹೋರಿ ತುಳಿತಕ್ಕೊಳಗಾಗಿಯೇ ಜನ ಸಾವನ್ನಪ್ಪುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಹೋರಿ ಅಖಾಡವನ್ನು ಬಿಟ್ಟು ಜನರತ್ತ ನುಗ್ಗಿದಾಗಲೂ ಸಾವುನೋವು ಸಂಭವಿಸುತ್ತದೆ. ಶಿಕಾರಿಪುರ ತಾಲೂಕಿನಲ್ಲಿ ಇಬ್ಬರ ಸಾವು ಮತ್ತು ಸೊರಬ ತಾಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
Shivamogga: ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ದೀಪಾವಳಿ ಹಬ್ಬದಿಂದ ಹಿಡಿದು ಸಂಕ್ರಾಂತಿವರೆಗೆ ಹೋರಿ ಬೆದರಿಸುವ ಸ್ಪರ್ಧೆ (Bull Race) ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿ ವರ್ಷ ಹೋರಿ ಬೆದರಿಸುವ ಸ್ಪರ್ಧೆಗಳು ಪ್ರತಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತದೆ. ಹೀಗೆ ಮಲೆನಾಡಿನಲ್ಲಿ ನಡೆದಿರುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಐದೇ ದಿನಕ್ಕೇ ಮೂವರು ಬಲಿಯಾಗಿದ್ದಾರೆ (Bull Attack). ಡೇಂಜರ್ ಹೋರಿ ಬೆದರಿಸುವ ಸ್ಪರ್ಧೆ ಕುರಿತು ಒಂದು ವರದಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ದೀಪಾವಳಿ ಹಬ್ಬದಿಂದ ಹಿಡಿದು ಸಂಕ್ರಾಂತಿವರೆಗೆ ಹೋರಿ ಬೆದರಿಸುವ ಸ್ಪರ್ಧೆ ಅದ್ಧೂರಿಯಾಗಿ ನಡೆಯುತ್ತದೆ. ಈ ಹೋರಿ ಹಬ್ಬ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಒಂದು ತುದಿಯಿಂದ ಹೋರಿಯನ್ನು ಬೆದರಿಸಿ ಓಡಿಸಲಾಗುತ್ತದೆ. ಹೀಗೆ ಓಡುವ ಹೋರಿ ಇನ್ನೊಂದು ತುದಿಯನ್ನು ತಲುಪುವ ಒಳಗಾಗಿ ಆ ಹೋರಿಯನ್ನು ಹಿಡಿದವರಿಗೆ ಆಕರ್ಷಕ ಬಹುಮಾನವನ್ನೂ ನೀಡಲಾಗುತ್ತದೆ.
ಹೀಗಾಗಿ ಅಖಾಡದಲ್ಲಿ ಇಳಿದು ಹೋರಿ ಹಿಡಿಯಲು ಮುಂದಾಗುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಇನ್ನು ಅಖಾಡದಲ್ಲಿ ಯಾರಿಗೂ ಹೋರಿಯನ್ನು ಹಿಡಿಯಲು ಸಾಧ್ಯವಾಗದೇ ಇದ್ದರೆ ಹೋರಿಗೇ ಆ ಬಹುಮಾನ ನೀಡಲಾಗುತ್ತದೆ. ಹೋರಿ ಹಿಡಿಯುವ ಸಂದರ್ಭದಲ್ಲಿ ಹೋರಿ ತಿವಿದೋ, ಇಲ್ಲವೇ ಹೋರಿ ತುಳಿತಕ್ಕೊಳಗಾಗಿಯೇ ಜನ ಸಾವನ್ನಪ್ಪುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಹೋರಿ ಅಖಾಡವನ್ನು ಬಿಟ್ಟು ಜನರತ್ತ ನುಗ್ಗಿದಾಗಲೂ ಜನರು ಸಾವನ್ನಪ್ಪುತ್ತಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಇಬ್ಬರ ಸಾವು ಮತ್ತು ಸೊರಬ ತಾಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಐದೇ ದಿನಕ್ಕೆ ಮೂವರು ಬಲಿಯಾಗಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆ ನೋಡಲು ನಿಂತವರ ಮೇಲೆಯೇ ಹೋರಿ ಅಟ್ಯಾಕ್ ಮಾಡಿದೆ. ಹೀಗೆ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಬಂದ ಮೂವರು ಪ್ರೇಕ್ಷಕರು ಬಲಿಯಾಗಿದ್ದಾರೆ.
1) ಅಕ್ಟೋಬರ್ 27 ರಂದು ಶಿಕಾರಿಪುರ ತಾಲೂಕಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪ್ರಶಾಂತ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. 2) ಅಕ್ಟೋಬರ್ 28ಕ್ಕೆ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಆದಿ ಎನ್ನುವ ಯುವಕ ಮೃತಪಟ್ಟಿದ್ದಾನೆ. ಮತ್ತು 3) ಅಕ್ಟೋಬರ್ 30 ರಂದು ಶಿಕಾರಿಪುರ ತಾಲೂಕಿನ ಗಾಮಾ ಗ್ರಾಮದ ವಸಂತ ಎನ್ನುವ ಯುವಕ ಮೃತಪಟ್ಟಿದ್ದಾನೆ.
ನಿನ್ನೆ ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ನಡೆದ ಹೋರಿ ಹಬ್ಬದ ಸಂದರ್ಭದಲ್ಲಿ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ವಸಂತ್ (30) ಎಂಬ ಯುವಕ ಮೃತಪಟ್ಟಿದ್ದಾನೆ. ಹೋರಿ ಹಬ್ಬ ನೋಡುವ ಉದ್ದೇಶದಿಂದ ವಸಂತ್ ತರಲಘಟ್ಟಕ್ಕೆ ತೆರಳಿದ್ದ. ಹೋರಿ ಬೆದರಿಸುವ ವೇಳೆ ಹೋರಿ ಜನರತ್ತ ನುಗ್ಗಿತ್ತು. ಈ ವೇಳೆ ಬದಿಯಲ್ಲಿ ನಿಂತಿದ್ದ ವಸಂತ್ ನ ಕುತ್ತಿಗೆ ಭಾಗಕ್ಕೆ ಹೋರಿ ತಿವಿದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ವಸಂತ್ ನನ್ನು ಕೂಡಲೇ ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ವಸಂತ್ ಮೃತಪಟ್ಟಿದ್ದ.
ಇನ್ನು ಸೊರಬ ತಾಲೂಕಿನ ಜಡೆ ಗ್ರಾಮದ ಆದಿ (20), ಶಿಕಾರಿಪುರ ತಾಲೂಕು ಗಾಮಾ ಗ್ರಾಮದ ಪ್ರಶಾಂತ್ ಕುಮಾರ್ (36) ಸಹ ಮೃತಪಟ್ಟಿದ್ದಾರೆ. ಈ ಮೂರು ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರತಿ ವರ್ಷ ನಡೆಯುವ ಈ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಒಬ್ಬರು ಅಥವಾ ಇಬ್ಬರು ಮೃತಪಡುತ್ತಿದ್ದರು. ಆದ್ರೆ ದೀಪಾವಳಿ ಹಬ್ಬ ಆಗಿ ಇನ್ನೂ ಐದೇ ದಿನಕ್ಕೆ ಮೂವರು ಹೋರಿ ಬೆದರಿಸುವ ಮಿಂಚಿನ ಆಟಕ್ಕೆ ಬಲಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಹೋರಿ ಬೆದರಿಸುವ ಸ್ಪರ್ಧೆಗಳು ಒಂದು ಸಾಂಪ್ರದಾಯಿಕ ಆಚರಣೆ. ಇದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಿ ಹೆಚ್ಚು ಹೋರಿ ಹಬ್ಬ ನಡೆಯುತ್ತದೆಯೋ ಆ ಭಾಗದಲ್ಲಿ ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲು ಮುಂದಾಗಬೇಕಿದೆ. ಯಾರೇ ಎಷ್ಟೇ ಹೇಳಿದ್ರೂ ಗ್ರಾಮೀಣ ಭಾಗದ ಜಾನಪದ ಕ್ರೀಡೆ ಇದಾಗಿದೆ. ಹೀಗಾಗಿ ರೈತರು ಮಾತ್ರ ತಮ್ಮ ಗ್ರಾಮೀಣ ಕ್ರೀಡೆ ಆಚರಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎನ್ನುತ್ತಾರೆ ಸೊರಬ ತಾಲೂಕಿನ ಗ್ರಾಮಸ್ಥರಾದ ಮಂಜುನಾಥ್.
ರೈತರಿಗೆ ದೀಪಾವಳಿ ಹಬ್ಬದ ಸಮಯ ಸ್ವಲ್ಪ ದಿನಗಳ ಕಾಲ ಬಿಡುವು ಇರುತ್ತದೆ. ಹೀಗಾಗಿ ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಯಿಂದ ಸಾಕಿರುವುದು ಅವರ ಹೋರಿಗಳು. ಹೀಗಾಗಿ ಈ ಹಬ್ಬದಲ್ಲಿ ತಮ್ಮ ತಮ್ಮ ಹೋರಿಗಳ ಶಕ್ತಿ ಬಲ ಮತ್ತು ಪ್ರತಿಷ್ಠೆಗಳನ್ನು ಪಣವಾಗಿ ಇಟ್ಟಿರುತ್ತಾರೆ. ಹೋರಿ ಬೆದರಿಸುವ ಸ್ಪರ್ಧೆ ಅಂದ್ರೆ 1,000 ವಾಟ್ಸ್ ಕರೆಂಟ್ ಹೊಡೆದಷ್ಟು ರೋಮಾಂಚನ ಮತ್ತು ಮಿಂಚಿನ ಓಟದಿಂದ ಈ ಸ್ಪರ್ಧೆ ಕೂಡಿರುತ್ತದೆ.
ಜಾನಪದ ಕ್ರೀಡೆಯನ್ನು ರೈತಾಪಿ ವರ್ಗವು ಸಂಭ್ರಮ ಸಡಗರಿಂದ ಆಚರಿಸುತ್ತಾರೆ. ಆದರೆ ಇಂತಹ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸದೇ ಸಾವಿರಾರು ಜನರು ಭಾಗಿಯಾಗುತ್ತಾರೆ. ಜೋಶ್ ನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಮತ್ತು ಹಿಡಿಯಲು ಹೋಗಿ ವಿನಾಕಾರಣವಾಗಿ ಜೀವ ಕಳೆದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)
Published On - 2:19 pm, Wed, 2 November 22