ಶಿವಮೊಗ್ಗ ಕಾಂಗ್ರೆಸ್​​​ನಲ್ಲಿ ಶೀತಲ ಸಮರ: ಲೋಕಸಭೆ ಚುನಾವಣೆಗೆ ಮೊದಲೇ ಅಸಮಧಾನ ಸ್ಫೋಟ

| Updated By: ಗಣಪತಿ ಶರ್ಮ

Updated on: Nov 03, 2023 | 10:00 PM

ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲ ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಗುಡುಗಿದ್ದಾರೆ.ಈಡಿಗರ ಸಮಾಜದ ಸಚಿವರ ವಿರುದ್ಧ ಈಡಿಗರ ಸಮಾಜದವರೇ ಆದ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ. ಬೇಳೂರು ವಿರುದ್ಧ ಸಚಿವರು ಫುಲ್ ಗರಂ ಆಗಿರುವ ಮಧು ಬಂಗಾರಪ್ಪ, ಈ ಎಲ್ಲ ಬೆಳವಣಿಗೆಯನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ತಿರುಗೇಟು ನೀಡಿದ್ಧಾರೆ.

ಶಿವಮೊಗ್ಗ ಕಾಂಗ್ರೆಸ್​​​ನಲ್ಲಿ ಶೀತಲ ಸಮರ: ಲೋಕಸಭೆ ಚುನಾವಣೆಗೆ ಮೊದಲೇ ಅಸಮಧಾನ ಸ್ಫೋಟ
ಬೇಳೂರು ಗೋಪಾಲಕೃಷ್ಣ ಮತ್ತು ಮಧು ಬಂಗಾರಪ್ಪ
Follow us on

ಶಿವಮೊಗ್ಗ, ನವೆಂಬರ್ 3: ಇನ್ನೇನು ಪಧವೀಧರರ ಮತ್ತು ಶಿಕ್ಷಕರ ಕ್ಷೇತ್ರ, ಅದರ ನಂತರ ಲೋಕಸಭೆ ಚುನಾವಣೆ ನಡೆಯಲಿದೆ. ಸರಕಾರ ಬಂದು ಐದು ತಿಂಗಳಷ್ಟೇ ಆಗಿದೆ. ಈ ನಡುವೆ ಮಲೆನಾಡಿನಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopala Krishna) ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ನಡುವೆ ಶೀತಲ ಸಮರ ಶುರುವಾಗಿದೆ. ಕಾಂಗ್ರೆಸ್ ಶಾಸಕರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗುಡುಗಿದ್ದಾರೆ. ಪರಿಣಮವಾಗಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್​ನಲ್ಲಿ ಒಡಕು ಮೂಡಿದೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಎಸ್ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡವರು. ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುಸಿಕೊಂಡಿರುವ ಮಧು ಬಂಗಾರಪ್ಪ, ಸೊರಬ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದು ಸದ್ಯ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಈ ನಡುವೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲ ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಗುಡುಗಿದ್ದಾರೆ. ಮಾಜಿ ಸಿಎಂ ಮತ್ತು ಮಾಜಿ ಮಂತ್ರಿಗಳ ಮಕ್ಕಳು ಮಾತ್ರ ಸಚಿವರು ಆಗುತ್ತಿದ್ದಾರೆ. ನಮ್ಮಂತಹ ಸಾಮಾನ್ಯ ಕಾರ್ಯಕರ್ತರು ಸಚಿವರು ಆಗುವ ಅವಕಾಶ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ ಎಂದು ಬೇಳೂರು ಆರೋಪಿಸಿದ್ದಾರೆ.

ಕಳೆದ ವಾರ ಸಾಗರ ತಾಲೂಕಿನ ಸಿಗಂದೂರು ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿದ್ದರು. ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕರನ್ನು ಈ ಕಾರ್ಯಕ್ರಮಕ್ಕೆ ಸಚಿವರು ಆಹ್ವಾನಿಸಿರಲಿಲ್ಲ. ಈ ಘಟನೆಯಿಂದ ಬೇಳೂರಿಗೆ ತೀವ್ರ ಆಘಾತವಾಗಿತ್ತು. ಸಚಿವರ ಸಂಬಂಧಿ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಮಾತ್ರ ಜೊತೆಗೆ ಕರೆದುಕೊಂಡು ಓಡಾಡುತ್ತಾರೆಂದು ಬೇಳೂರು ಸಚಿವ ಮಧು ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನೇ ಎನ್ನುವ ಮೂಲಕ ಸಚಿವ ಮಧು ಬಂಗಾರಪ್ಪಗೆ ಬೇಳೂರು ಶಾಕ್ ಕೊಟ್ಟಿದ್ದಾರೆ.

ಈಡಿಗರ ಸಮಾಜದ ಸಚಿವರ ವಿರುದ್ಧ ಈಡಿಗರ ಸಮಾಜದವರೇ ಆದ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ ಎಂಬುದು ಗಮನಾರ್ಹ. ಮಧು ಬಂಗಾರಪ್ಪ ಅವರು ಅಕ್ಕ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಎಲ್ಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಸಚಿವರ ವಿರುದ್ಧ ಮತ್ತು ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬೇಳೂರು ಹೊಸ ಬಾಂಬ್ ಸಿಡಿಸಿರುವುದು ಸಚಿವರಿಗೆ ದೊಡ್ಡ ತಲೆಬಿಸಿಯಾಗಿದೆ.

ಇದನ್ನೂ ಓದಿ: ಒಕ್ಕಲಿಗರ ಪ್ರಬಲ ವಿರೋಧಕ್ಕೆ ಮಣಿದ ಸರ್ಕಾರ? ಜಾತಿ ಗಣತಿ ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದ ಸಿದ್ದರಾಮಯ್ಯ

ಬೇಳೂರು ವಿರುದ್ಧ ಸಚಿವರು ಫುಲ್ ಗರಂ ಆಗಿರುವ ಮಧು ಬಂಗಾರಪ್ಪ, ಈ ಎಲ್ಲ ಬೆಳವಣಿಗೆಯನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ಬೇಳೂರಿಗೆ ತಿರುಗೇಟು ನೀಡಿದ್ಧಾರೆ. ನಾನು ಯಾರನ್ನೂ ನಿರ್ಲಕ್ಷ್ಯ ಮಾಡಿಲ್ಲ. ನನಗೆ ಯಾರ ಜೊತೆ ಅಸಮಾಧನವಿಲ್ಲ ಎಂದು ಶಾಸಕ ಬೇಳೂರಿಗೆ ತೀಕ್ಷಣವಾಗಿ ಮಧು ಉತ್ತರ ಕೊಟ್ಟಿದ್ದಾರೆ. ಬೇಳೂರು ಅವರ ಅಸಮಾಧನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುವಂತೆ ಸಚಿವರು ಉತ್ತರ ಕೊಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​​​ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಸ್ವ ಪಕ್ಷದ ಸ್ವ ಜಾತಿಯ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ಸಚಿವರು ಮತ್ತು ಶಾಸಕರ ನಡುವಿನ ಮುಸುಕಿನ ಗುದ್ದಾಟ ಮುಂದೆ ಏನೆಲ್ಲಾ ಸಮಸ್ಯೆಗಳನ್ನು ತರುತ್ತದೆ ಎನ್ನುವ ಆತಂಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಶುರುವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Fri, 3 November 23