ಶಿವಮೊಗ್ಗದಲ್ಲಿ ಯಜಮಾನನ ಜೀವ ಉಳಿಸಿದ ಸಾಕು ನಾಯಿ, ಗ್ರಾಮಸ್ಥರಿಂದ ಶ್ವಾನದ ಮೆರವಣಿಗೆ
ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ಯಜಮಾನನನ್ನು ಸಾಕು ನಾಯಿ ಪತ್ತೆ ಹಚ್ಚಿ ಜೀವ ಉಳಿಸಿದೆ. ಹೀಗಾಗಿ ಊರಿನ ಜನ ನಾಯಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.
ಶಿವಮೊಗ್ಗ: ಜಿಲ್ಲೆಯ ಆಯನೂರು-ಸೂಡೂರು ಗ್ರಾಮದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ತಾನೇ ಸಾಕಿದ ನಾಯಿ ಪತ್ತೆ ಹಚ್ಚಿದ ವಿನೂತನ ಘಟನೆ ನಡೆದಿದೆ. ಮಾಲೀಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ ನಾಯಿಯ ಸ್ವಾಮಿ ನಿಷ್ಠೆಗೆ ಇಡೀ ಸೂಡೂರು ಗ್ರಾಮವೇ ಹರ್ಷ ವ್ಯಕ್ತಪಡಿಸಿ ನಾಯಿಯ ಮೆರವಣಿಗೆ ಮಾಡಿದೆ.
ನಿನ್ನೆ(ನ.12) ಬೆಳೆಗ್ಗೆ 6 ಗಂಟೆ ಸುಮಾರಿಗೆ ಮನೆಗೆ ಸೌದೆ ತರಲು ಎಂದು ಸೂಡೂರು ಗ್ರಾಮದ 50 ವರ್ಷ ವಯಸ್ಸಿನ ಶೇಖರಪ್ಪ ಮನೆಯ ಸಮೀಪದ ಕಾಡಿಗೆ ಹೋಗಿದ್ದಾರೆ. ಪ್ರತಿ ಸಾರಿ ಕಾಡಿಗೆ ಹೋದಾಗ ಬೆಳಗೆ 10 ಗಂಟೆಯ ಒಳಗೆ ಮನೆಗೆ ಹಿಂದಿರುಗಿ ಬರುತ್ತಿದ್ದರು. ಆದರೆ ನಿನ್ನೆ 11 ಗಂಟೆಯಾದರೂ ಮನೆಗೆ ಬಂದಿಲ್ಲ. ಹೀಗಾಗಿ ಕೆಲವು ಜನರು ಕಾಡಿಗೆ ಹೋಗಿ ಹುಡುಕಾಡಿದ್ದು ಕಾಡಿಗೆ ಹೋಗಿದ್ದವರಿಗೂ ಶೇಕರಪ್ಪನ ಸುಳಿವು ಸಿಕ್ಕಿಲ್ಲ. ಇದರಿಂದ ಗಾಬರಿಗೊಂಡು ಮಧ್ಯಾಹ್ನದ ವೇಳೆಗೆ ಶೇಖರಪ್ಪರನ್ನು ಹುಡುಕುವುದಕ್ಕೆ ಗ್ರಾಮದ 100 ಹೆಚ್ಚು ಜನರು ಕಾಡಿನೊಳಗೆ ಹೋಗಿದ್ದಾರೆ. ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ ಕಟ್ಟಿಗೆ ಅರಸುವ ಸ್ಥಳ ಎಲ್ಲವನ್ನೂ ತಡಕಾಡಿದ್ದಾರೆ.
ಯಾವುದರಿಂದಲೂ ಶೇಖರಪ್ಪನ ಪ್ರತಿಕ್ರಿಯೆ ಸಿಗದಿದ್ದಾಗ ಗ್ರಾಮದ ಜನರ ತಲೆಯಲ್ಲಿ ನಾನಾ ಯೋಚನೆ ಅಲೆದಾಡಿದೆ. ಮತ್ತೊಂದೆಡೆ ಕಾಣೆಯಾದ ಶೇಖರಪ್ಪರನ್ನು ಹುಡುಕಲು ಗ್ರಾಮಸ್ಥರೊಂದಿಗೆ ಬಂದಿದ್ದ ಶೇಖರಪ್ಪ ಸಾಕಿದ ನಾಯಿ ಗ್ರಾಮದ ಜನರನ್ನು ಬಿಟ್ಟು ತನ್ನದೇ ದಾರಿ ಹಿಡಿದು ಮುನ್ನುಗ್ಗಿದೆ. ಕೊನೆಗೆ ಸಂಜೆ 4 ಗಂಟೆಯ ಸುಮಾರಿಗೆ ಕಾಣೆಯಾಗಿದ್ದ ಶೇಖರಪ್ಪರನ್ನು ಪತ್ತೆ ಹಚ್ಚಿ ಗ್ರಾಮಸ್ಥರನ್ನು ಕರೆ ತಂದಿದೆ. ಗ್ರಾಮಸ್ಥರು ಬಂದು ನೋಡಿದಾಗ ಒಂದು ಮರದ ಕೆಳಗೆ ಪ್ರಜ್ಞೆ ಇಲ್ಲದೆ ಶೇಖರಪ್ಪ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಗ್ರಾಮಸ್ಥರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೀಗೆ ತನಗೆ ಸಾಕಿ ಸಲುಹಿದ ಯಜಮಾನನ ಜೀವ ಉಳಿಸುವಲ್ಲಿ ಶ್ವಾನ ಗ್ರಾಮಸ್ಥರಿಗೆ ಸಹಾಯ ಮಾಡಿದೆ. ತಾನೇ ಸಾಕಿದ ಶ್ವಾನ ತನ್ನ ಯಜಮಾನನ ಜೀವ ಉಳಿಸುವ ಮೂಲಕ ಸ್ವಾಮಿ ನಿಷ್ಟೆ ಮೆರೆದಿದೆ.
ನೀರು ಮತ್ತು ಆಹಾರ ಇಲ್ಲದೇ ಕಾಡಿನಲ್ಲಿ ಪ್ರಜ್ಞೆ ತಪ್ಪಿದ್ದರಿಂದ ಮರದ ಕೆಳಗೆ ಬಿದ್ದಿರಬಹುದು, ಅದೇ ಜಾಗದಲ್ಲಿ ಜನರು ಹುಡುಕಿದ್ದಾರೆ. ಜನರು ಕಣ್ಣಿಗೆ ಕಾಣದ ಶೇಖರಪ್ಪ ನಾಯಿಗೆ ಕಂಡಿದ್ದಾರೆ. ಆಯನೂರಿನಲ್ಲಿರುವ ಒಂದು ಖಾಸಗಿ ಹೋಟೆಲಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಅಂದು ರಜೆ ಹಾಕಿ ಸೌದೆ ತರಲು ಕಾಡಿಗೆ ಹೋಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ
Published On - 3:05 pm, Sun, 13 November 22